ಬೆಂಗಳೂರು ಟ್ರೇಡ್ ಲೈಸೆನ್ಸ್ ನವೀಕರಣಕ್ಕೆ ಹೊಸ ಸುತ್ತೋಲೆ ಹೊರಡಿಸಿದ ಜಿಬಿಎ: ಶೇ.100 ದಂಡದ ಎಚ್ಚರಿಕೆ!

Published : Feb 02, 2026, 04:53 PM IST
Bengaluru trade license renewal

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರವು 2026-27ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆಯನ್ನು ಆರಂಭಿಸಿದೆ. ದಂಡ ರಹಿತವಾಗಿ ನವೀಕರಿಸಲು ಫೆಬ್ರವರಿ 28 ಕೊನೆಯ ದಿನವಾಗಿದ್ದು, ಏಪ್ರಿಲ್ 1ರ ನಂತರ ಶೇ. 100ರಷ್ಟು ದಂಡ ವಿಧಿಸಲಾಗುವುದು. ಈ ನಿಯಮ ಪಾಲಿಸದಿದ್ದರೆ ಪರವಾನಿಗೆಯನ್ನು ತಿರಸ್ಕರಿಸಲಾಗುವುದು.

ಬೆಂಗಳೂರು (ಫೆ.02): ಸಿಲಿಕಾನ್ ಸಿಟಿ ಬೆಂಗಳೂರಿನ ಉದ್ದಿಮೆದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಮಹತ್ವದ ಸೂಚನೆಯನ್ನು ನೀಡಿದೆ. 2026-27ನೇ ಸಾಲಿನ ಉದ್ದಿಮೆ ಪರವಾನಿಗೆ (Trade License) ನವೀಕರಣ ಪ್ರಕ್ರಿಯೆ ಇಂದಿನಿಂದ (ಫೆಬ್ರವರಿ 01) ಅಧಿಕೃತವಾಗಿ ಆರಂಭವಾಗಿದ್ದು, ಈ ಸಂಬಂಧ ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಮಾರ್ಗಸೂಚಿಗಳಿರುವ ನೂತನ ಸುತ್ತೋಲೆ ಹೊರಡಿಸಿದ್ದಾರೆ. ಏಪ್ರಿಲ್ 1ರ ನಂತರ ನವೀಕರಣ ಮಾಡುವವರಿಗೆ ಪರವಾನಿಗೆ ಶುಲ್ಕದಷ್ಟೇ ಮೊತ್ತದ (ಶೇ. 100 ರಷ್ಟು) ದಂಡ ವಿಧಿಸುವುದಾಗಿ ಎಚ್ಚರಿಸಲಾಗಿದೆ.

ನವೀಕರಣಕ್ಕೆ ನಿಗದಿಯಾದ ಅವಧಿ ಮತ್ತು ದಂಡದ ವಿವರ:

ಉದ್ದಿಮೆದಾರರು ದಂಡ ರಹಿತವಾಗಿ ಪರವಾನಿಗೆ ನವೀಕರಿಸಲು ಫೆಬ್ರವರಿ 1 ರಿಂದ ಫೆಬ್ರವರಿ 28ರ ವರೆಗೆ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಮಾರ್ಚ್ 1 ರಿಂದ ಮಾರ್ಚ್ 31ರ ಒಳಗಾಗಿ ನವೀಕರಣ ಮಾಡಿದರೆ ಶೇ. 25 ರಷ್ಟು ದಂಡ ಪಾವತಿಸಬೇಕಾಗುತ್ತದೆ. ಆದರೆ, ಏಪ್ರಿಲ್ 1ರ ನಂತರ ನವೀಕರಣ ಪ್ರಕ್ರಿಯೆ ಕೈಗೊಂಡರೆ ಶೇ. 100 ರಷ್ಟು ದಂಡದ ಮೊತ್ತದೊಂದಿಗೆ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ. ಉದ್ದಿಮೆದಾರರ ಅನುಕೂಲಕ್ಕಾಗಿ 1 ರಿಂದ 5 ಆರ್ಥಿಕ ವರ್ಷಗಳ ಅವಧಿಗೆ ಒಟ್ಟಿಗೆ ನವೀಕರಣ ಮಾಡಲು ಅವಕಾಶ ನೀಡಲಾಗಿದೆ.

ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆ:

ಪರವಾನಿಗೆ ನವೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮುಖಾಂತರವೇ ಮಾಡಬೇಕೆಂದು ಸೂಚಿಸಲಾಗಿದೆ. ನವೀಕರಣ ಶುಲ್ಕವನ್ನು ಆನ್‌ಲೈನ್ ಅಥವಾ ಕೆನರಾ ಬ್ಯಾಂಕ್ ಚಲನ್ ಮೂಲಕ ಪಾವತಿಸಬಹುದಾಗಿದೆ.

ಪರವಾನಿಗೆ ನಿರಾಕರಣೆಗೆ ಕಟ್ಟುನಿಟ್ಟಿನ ನಿಯಮಗಳು:

ವಲಯ ವರ್ಗೀಕರಣ ಮತ್ತು ಕಟ್ಟಡ ನಿಯಮಾವಳಿಗಳ ಉಲ್ಲಂಘನೆಯಾದಲ್ಲಿ ಪರವಾನಿಗೆ ನವೀಕರಣವನ್ನು ತಿರಸ್ಕರಿಸಲು ಆಯುಕ್ತರು ಸ್ಪಷ್ಟ ಸೂಚನೆ ನೀಡಿದ್ದಾರೆ:

ವಸತಿ ಪ್ರದೇಶದ ನಿಯಮ: ವಸತಿ ಪ್ರದೇಶಗಳಲ್ಲಿ 40 ಅಡಿಗಿಂತ ಕಡಿಮೆ ಅಗಲದ ರಸ್ತೆಗಳಲ್ಲಿ 2015ರ ನಂತರ ಆರಂಭವಾದ ಉದ್ದಿಮೆಗಳ ಪರವಾನಿಗೆಯನ್ನು ನೇರವಾಗಿ ತಿರಸ್ಕರಿಸಲಾಗುವುದು. 40 ಅಡಿಗಿಂತ ಹೆಚ್ಚು ಅಗಲವಿರುವ ರಸ್ತೆಗಳಲ್ಲೂ ನಿಗದಿಪಡಿಸಿದ ಉದ್ದಿಮೆಗಳಿಗೆ ಮಾತ್ರ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಅನುಮತಿ ನೀಡಲಾಗುವುದು.

ಕಟ್ಟಡ ಉಲ್ಲಂಘನೆ: ನಕ್ಷೆ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳು, ವಾಹನ ನಿಲುಗಡೆ (Parking) ಪ್ರದೇಶ ಅಥವಾ ರೂಫ್ ಟಾಪ್‌ಗಳಲ್ಲಿ ನಡೆಸಲಾಗುತ್ತಿರುವ ಉದ್ದಿಮೆಗಳ ನವೀಕರಣಕ್ಕೆ ತಡೆ ನೀಡಲಾಗುವುದು.

ತ್ಯಾಜ್ಯ ವಿಲೇವಾರಿ ಮತ್ತು ಪರಿಸರ ಸಂರಕ್ಷಣೆ:

  • ದಿನಕ್ಕೆ 100 ಕೆ.ಜಿ.ಗಿಂತ ಹೆಚ್ಚು ತ್ಯಾಜ್ಯ ಉತ್ಪತ್ತಿ ಮಾಡುವ ಉದ್ದಿಮೆಗಳು ಸ್ಥಳದಲ್ಲೇ ತ್ಯಾಜ್ಯ ಸಂಸ್ಕರಣೆ ಅಥವಾ ಅಧಿಕೃತ ವೆಂಡರ್‌ಗಳೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಪತ್ರ ಸಲ್ಲಿಸುವುದು ಕಡ್ಡಾಯ.
  • ಹೋಟೆಲ್, ರೆಸ್ಟೋರೆಂಟ್ ಮತ್ತು ಕಲ್ಯಾಣ ಮಂಟಪಗಳಲ್ಲಿ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ನಿಷೇಧದ ಕುರಿತು ಲಿಖಿತ ಹೇಳಿಕೆ ನೀಡಬೇಕು ಮತ್ತು ಈ ಕುರಿತ ಭಿತ್ತಿಪತ್ರಗಳನ್ನು ಪ್ರದರ್ಶಿಸಬೇಕು.
  • ಹಸಿ ಕಸಕ್ಕೆ ಹಸಿರು ಮತ್ತು ಒಣ ಕಸಕ್ಕೆ ನೀಲಿ ಬಣ್ಣದ ಬುಟ್ಟಿಗಳನ್ನು ಪ್ರತ್ಯೇಕವಾಗಿ ಇರಿಸುವುದು ಕಡ್ಡಾಯವಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದೂ ನಗರ ಪಾಲಿಕೆಗಳ ಆರೋಗ್ಯಾಧಿಕಾರಿಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನವೀಕರಣ ಪ್ರಕ್ರಿಯೆ ನಡೆಸುವಂತೆ ಆಯುಕ್ತ ಮಹೇಶ್ವರ್ ರಾವ್ ನಿರ್ದೇಶನ ನೀಡಿದ್ದಾರೆ.

PREV
Read more Articles on
click me!

Recommended Stories

ಭತ್ತದ ನಾಡಿನಿಂದ ಅಕ್ಕಿಯ ರಫ್ತು ಬಂದ್
ಮಂಡ್ಯ ಜಿಲ್ಲೆಗೆ ಕೈಗಾರಿಕೆಯಲ್ಲಿ ಶಾಶ್ವತ ಕೊಡುಗೆ ನೀಡುವೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ