ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಮಹಾ ಜ್ಞಾನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ (ನ.30): ರಾಜ್ಯದಲ್ಲಿ ಮುಂದಿನ ಎರಡೂವರೆ ವರ್ಷ ನಾಯಕತ್ವದ ಬದಲಾವಣೆ ಪ್ರಶ್ನೆ ಇಲ್ಲ. ಡಿ.ಕೆ.ಶಿವಕುಮಾರ್, ರಾಜಕಾರಣಕ್ಕಾಗಿ ಅಥವಾ ಜನರನ್ನು ಹಾದಿ ತಪ್ಪಿಸುವುದಕ್ಕಾಗಿ ಬಾಯಿಗೆ ಬಂದಹಾಗೆ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಅವರ ಬಳಿ ಏನಾದರೂ ಸೀಡಿ ಇದ್ದರೆ ಬಹಿರಂಗ ಪಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದರು.
ಜಿಲ್ಲೆಯಲ್ಲಿ ಭಾನುವಾರ ಗ್ರಾಪಂಗಳ ಚುನಾವಣೆ ಹಿನ್ನಲೆಯಲ್ಲಿ ಪಕ್ಷದಿಂದ ಬಾಗೇಪಲ್ಲಿ ಹಾಗೂ ಚಿಂತಾಮಣಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು.
ಎಲ್ಲಿಯೂ ಚರ್ಚೆ ಆಗಿಲ್ಲ:
ನಾಯಕತ್ವದ ಬದಲಾವಣೆ ವಿಚಾರ ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚೆ ಆಗಬೇಕು. ಇಲ್ಲ ಪಕ್ಷದ ವೇದಿಕೆಯಲ್ಲಿ ಅಥವ ಪಕ್ಷ ವರಿಷ್ಠರ ಮಟ್ಟದಲ್ಲಿ ಚರ್ಚೆ ಆಗಬೇಕು. ಈ ಬಗ್ಗೆ ಎಲ್ಲೂ ಚರ್ಚೆ ನಡೆದಿಲ್ಲ. ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ ಎಂದು ಕಟಿಲ್ ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ಅಸಮಾಧಾನ; ಪ್ರಶಿಕ್ಷಣ ವರ್ಗ ಪ್ರಶ್ನಿಸಿ ಸಂಘದ ಪ್ರಮುಖರಿಗೆ ಕಾರ್ಯಕರ್ತರ ಪತ್ರ ...
ಸಿಎಂ ಯಡಿಯೂರಪ್ಪ ಸವಾಲಿನ ಮಧ್ಯೆ ಅಧಿಕಾರ ಸ್ಪೀಕರಿಸಿ ನೆರೆ, ಬರವನ್ನು ಸಮರ್ಥವಗಿ ನಿಭಾಯಿಸಿ ಸುಭದ್ರ ಆಡಳಿತ ನೀಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಕಾರಣ ಏನು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕಟೀಲ್, ಅವರು ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಅವರ ಆರೋಗ್ಯ ಮೊದಲು ಸುಧಾರಣೆ ಆಗಬೇಕಿದೆ ಎಂದರು.
ಪಕ್ಷ ಕೊಟ್ಟಮಾತಿನಂತೆ ನಡೆಯುತ್ತದೆ
ಮಂತ್ರಿ ಮಾಡದೇ ಇರುವುದಕ್ಕೆ ಎಂಟಿಬಿ ನಾಗರಾಜ್, ಆರ್.ಶಂಕರ್, ವಿಶ್ವನಾಥ ಮತ್ತಿತರ ಬಿಜೆಪಿಗೆ ವಲಸೆ ಬಂದಿರುವ ನಾಯಕರು ಬೇಸರ ವ್ಯಕ್ತಪಡಿಸಿ ನಮ್ಮ ಹಣೆ ಬರಹ ಸರಿಯಲ್ಲ ಎಂದು ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಪಕ್ಷ ಕೊಟ್ಟಮಾತಿನಂತೆ ನಡೆದುಕೊಳ್ಳಲಿದೆ. ನಮ್ಮಲ್ಲಿ ವಲಸಿಗರು, ಮೂಲ ಎನ್ನುವ ಪ್ರಶ್ನೆ ಇಲ್ಲ. ಪಕ್ಷದ ಬಿ.ಫಾರಂ ಪಡೆದು ಚುನಾವಣೆಯಲ್ಲಿ ಗೆದ್ದವರು ಬಿಜೆಪಿ ಪಕ್ಷದವರು ವಲಸಿಗರಲ್ಲ ಎಂದರು.
ಯಾರಿಗೂ ನಾವು ಆನ್ಯಾಯ ಮಾಡುವ ಪ್ರಶ್ನೆ ಇಲ್ಲ. ಎಲ್ಲರಿಗೂ ಸಾಮಾಜಿಕ ನ್ಯಾಯದ ಜೊತೆಗೆ ಭೌಗೋಳಿಕ ನ್ಯಾಯವನ್ನು ಕಲ್ಪಿಸುತ್ತೇವೆ. ಬಿಜೆಪಿ ಕೊಟ್ಟಮಾತನ್ನು ಎಂದಿಗೂ ತಪ್ಪಿಲ್ಲ. ಕಾಂಗ್ರೆಸ್, ಜೆಡಿಎಸ್ ತೊರೆದು ಬಂದ 17 ಮಂದಿ ಶಾಸಕರಿಗೆ ಕೊಟ್ಟಿರುವ ಮಾತಿನಂತೆ ನ್ಯಾಯ ಕಲ್ಪಿಸುತ್ತೇವೆ. ಎಂಟಿಬಿ ನಾಗರಾಜ್ ನೋವಿನಿಂದ ಈ ಮಾತು ಹೇಳಿಲ್ಲ. ಒಂದು ವರ್ಷ ಆಯಿತು ಅಂತ ಹೇಳಿದ್ದಾರೆಂದರು.
ಪಕ್ಷಕ್ಕೆ ದುಡಿದವರ ಕಡೆಗಣನೆ
ಸಮಾಜದಲ್ಲಿರುವ ಎಲ್ಲಾ ಹಿಂದುಳಿದ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ದೃಷ್ಟಿಯಿಂದ ಅಭಿವೃದ್ದಿ ಪ್ರಾಧಿಕಾರ ರಚನೆ ಆಗಿರುವುದು ಬಿಟ್ಟರೆ ಅದರಲ್ಲಿ ರಾಜಕೀಯ ಉದ್ದೇಶ ಇಲ್ಲ ಎಂದು ಸರ್ಕಾರ ಮರಾಠಿ ಹಾಗೂ ವೀರಶೈವ ಲಿಂಗಾಯತ ಅಭಿವೃದ್ದಿ ಪ್ರಾಧಿಕಾರ ರಚನೆಯನ್ನು ನಳಿನ್ ಕುಮಾರ್ ಕಟೀಲ್ ಸಮರ್ಥಿಸಿಕೊಂಡರು. ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಪಕ್ಷಕ್ಕೆ ದುಡಿದವರನ್ನು ಕಡೆಗಣಿಸಿ ಈಗಷ್ಟೇ ಪಕ್ಷಕ್ಕೆ ಬಂದಿರುವ ಹಲವರಿಗೆ ಸ್ಥಾನಮಾನ ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸರಿಪಡಿಸುವ ಕೆಲಸ ಮಾಡಲಾಗುವುದೆಂದು ಕಟೀಲ್ ತಿಳಿಸಿದರು.
ಸಿದ್ದರಾಮಯ್ಯ ಮಹಾ ಜ್ಞಾನಿ: ಟೀಕೆ
ನಳಿನ್ ಕುಮಾರ್ ಕಟೀಲ್‌ಗೆ ಕಿಂಚಿತ್ತೂ ರಾಜಕೀಯ ಪ್ರಭುದ್ಧತೆ ಇಲ್ಲದೇ ಏನೇನು ಮಾತನಾಡುತ್ತಾರೆಂದು ಟೀಕಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ಕೊಟ್ಟಕಟೀಲ್, ಸಿದ್ದರಾಮಯ್ಯ ಒಬ್ಬ ಮಹಾನ್ ಜ್ಞಾನಿ, ಅವರು ದೊಡ್ಡ ಮನುಷ್ಯರು. ಅವರ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದು ಗೇಲಿ ಮಾಡಿದರು.