
ಮೈಸೂರು (ಸೆ.11): ಮೈಸೂರು ನಗರದ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸದಸ್ಯೆ ವೈಶಾಲಿ ವಿನಯ್ ಕುಲಕರ್ಣಿ ಅವರು 3 ಲಕ್ಷ ರು. ಪಾವತಿಸಿ ಭಾರತೀಯ ಆನೆಯನ್ನು ದತ್ತು ಸ್ವೀಕರಿಸಿದ್ದಾರೆ. ಈ ಮಹತ್ವದ ಕೊಡುಗೆಯನ್ನು ಮೃಗಾಲಯ ಪ್ರಾಧಿಕಾರವು ಶ್ಲಾಘಿಸಿದೆ. ದತ್ತು ಸ್ವೀಕಾದ ವೇಳೆ ಶಾಸಕ ವಿನಯ್ ಕುಲಕರ್ಣಿ ಮತ್ತು ಕುಟುಂಬ ವರ್ಗದವರು ಇದ್ದರು.
ಶಾಸಕ ವಿನಯ್ ಕುಲಕರ್ಣಿ ಅವರು ತಮ್ಮ ಮಗಳು ವೈಶಾಲಿ ಅವರ ಜನ್ಮದಿನದ ಅಂಗವಾಗಿ ಕುಟುಂಬ ಸಮೇತರಾಗಿ ಭೇಟಿ ಮಾಡಿದ್ದರು.ಈ ವೇಳೆ ವಿವಿಧೆಡೆ ಸಂಚಾರ ಮಾಡಿದ ನಂತರ ಮೈಸೂರು ಮೃಗಾಲಯಕ್ಕೆ ಭೇಟಿ ಮಾಡಿದ್ದಾರೆ. ಈ ವೇಳೆ ವೈಶಾಲಿ ಕುಲಕರ್ಣಿ ಅವರು ಆನೆಯನ್ನು ದತ್ತು ಸ್ವೀಕಾರ ಮಾಡಿದ್ದಾರೆ. ಇದೇ ವೇಳೆ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಉಳಿದ ಇಬ್ಬರು ಮಕ್ಕಳು ಕೂಡ ಹಾಜರಿದ್ದರು.
ಇನ್ನು ಶಾಸಕ ವಿನಯ್ ಕುಲಕರ್ಣಿ ಅವರು ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊ*ಲೆ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಆದರೆ, ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿದ್ದು, ಬರೋಬ್ಬರಿ 6 ವರ್ಷಗಳ ಬಳಿಕ ತಮ್ಮ ಸ್ವಂತ ಕ್ಷೇತ್ರ ಧಾರವಾಡಕ್ಕೆ ಪ್ರವೇಶ ಕೊಟ್ಟಿದ್ದಾರೆ. ಈ ಮೂಲಕ ಸುಮಾರು 6 ವರ್ಷಗಳ ಬಳಿಕ ತಮ್ಮ ಸ್ವಂತ ಊರಿನಲ್ಲಿ ಕುಟುಂಬದೊಂದಿಗೆ ಸಮಯ ಕಳೆದಿದ್ದಾರೆ. ಇದೀಗ ಎಲ್ಲರೊಂದಿಗೆ ಮೈಸೂರು ಕಡೆಗೆ ಪ್ರವಾಸ ಬಂದಿದ್ದಾರೆ.