Pramoda Devi Wadiyar: ಅರಮನೆ, ಅಂಬಾರಿ, ಸಿಂಹಾಸನ ನಮ್ಮ ಸ್ವತ್ತು; ವಿವಾದಗಳಿಗೆ ರಾಜಮಾತೆ ಖಡಕ್ ಉತ್ತರ!

Published : Nov 04, 2026, 02:03 PM IST
Pramoda Devi Wadiyar

ಸಾರಾಂಶ

ಮೈಸೂರು ಮತ್ತು ಬೆಂಗಳೂರು ಅರಮನೆಗಳು, ಅಂಬಾರಿ ಹಾಗೂ ಸಿಂಹಾಸನ ರಾಜವಂಶಸ್ಥರ ಖಾಸಗಿ ಸ್ವತ್ತು ಎಂದು ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ದಸರಾ ವೇಳೆ ಪೊಲೀಸರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಸರ್ಕಾರ ಅಂಬಾರಿಗೆ ನೀಡುತ್ತಿರುವುದು ಬಾಡಿಗೆಯಲ್ಲ, ರಾಯಲ್ಟಿ ಎಂದಿದ್ದಾರೆ. ಸಮಸ್ಯೆಗಳನ್ನು ಸರ್ಕಾರದೊಂದಿಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ.

ಮೈಸೂರು: ದಸರಾ ಸಂದರ್ಭದಲ್ಲಿ ಎದುರಾಗಿದ್ದ ವಿವಾದಗಳ ಸಂಬಂಧ ಕುರಿತಂತೆ ರಾಜಮಾತೆ ಪ್ರಮೋದಾದೇವಿ ಕೆಲವು ಪ್ರಶ್ನೆಗಳನ್ನು ಮುಂದಿಟ್ಟು, ಮೈಸೂರು ಬೆಂಗಳೂರು ಅರಮನೆಗಳು ಖಾಸಗಿ ಸ್ವತ್ತು. ಯಾವುದೇ ದೇಣಿಗೆಯಿಂದ ಕಟ್ಟಿದ್ದಲ್ಲ. ಸ್ವಂತ ಹಣದಿಂದ ಕಟ್ಟಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಅಂಬಾರಿ, ಸಿಂಹಾಸನ ನಮ್ಮ ಸ್ವತ್ತು. ಹಿಂದೆಯೂ ನಮ್ಮ ಬಳಿ ಇತ್ತು. ಈಗಲೂ ನಮ್ಮ ಬಳಿ ಇದೆ. ಮುಂದೆಯೂ ನಮ್ಮ ಬಳಿ ಇರುತ್ತವೆ ಎಂದು ತಿಳಿಸಿದ್ದಾರೆ.

ಮೈಸೂರು ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮೈಸೂರಿನ ಅರಮನೆಯ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ ದೇವಿ ಅವರು, ಮೈಸೂರು ಅರಮನೆಯ ಆಸ್ತಿ ಹಕ್ಕುಗಳು, ಅಂಬಾರಿ ಹಾಗೂ ದಸರಾ ಆಚರಣೆಗೆ ಸಂಬಂಧಿಸಿದ ವಿವಾದಗಳ ಕುರಿತು ಸ್ಪಷ್ಟನೆ ನೀಡಿದರು.

ಪೊಲೀಸ್ ಸಿಬ್ಬಂದಿ ತೋರಿದ ಉದ್ಧಟತನದ ಬಗ್ಗೆ ನನ್ನ ಆಕ್ಷೇಪ

ಇತ್ತೀಚಿನ ಹೇಳಿಕೆಗಳು ಮತ್ತು ಪ್ರತಿಹೇಳಿಕೆಗಳ ಕುರಿತು, ವಾಸ್ತವಾಂಶಗಳನ್ನು ಸರಿಯಾದ ರೀತಿಯಲ್ಲಿ ಮಂಡಿಸುವ ಸ್ಪಷ್ಟೀಕರಣ ಇದಾಗಿದೆ. ಉಲ್ಲೇಖಿಸಿರುವ ವಿಷಯಗಳು ಮತ್ತು ವಾಸ್ತವಾಂಶಗಳು ಅವುಗಳ ನೈಜ ಸ್ವರೂಪದಲ್ಲಿಯೇ ಸಾರ್ವಜನಿಕರಿಗೆ ತಲುಪಬೇಕು ಎಂಬುದು ನನ್ನ ಆಶಯ. ನನಗೆ ಮತ್ತು ನನ್ನ ಕುಟುಂಬಕ್ಕೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ನಾನು ತುಂಬು ಹೃದಯದ ಧನ್ಯವಾದ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೊಂದರೆ ಆಗಿದ್ದರೆ ಮಾತುಕತೆಯ ಮೂಲಕ ಪರಿಶೀಲಿಸಿ ಸರಿಪಡಿಸುವುದಾಗಿ ಹೇಳಿದ್ದಾರೆ. ಅದನ್ನು ನಾನು ಸ್ವಾಗತಿಸುತ್ತೇನೆ. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಕಳವಳಗಳು ಸರ್ಕಾರಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆಗೆ ಮಾತ್ರ ಸೀಮಿತವಾಗಿವೆ. ನಿರ್ದಿಷ್ಟ ಎರಡು ದ್ವಾರಗಳ ಬಳಿ ಪೊಲೀಸ್ ಸಿಬ್ಬಂದಿ ತೋರಿದ ಉದ್ಧಟತನದ ಬಗ್ಗೆ ನನ್ನ ಆಕ್ಷೇಪವಿತ್ತು. ಹಿಂದಿನ ಪತ್ರಿಕಾ ಪ್ರಕಟಣೆಯಲ್ಲಿ ನಾನು ನೀಡಿದ್ದು, ಕೇವಲ ಸಲಹೆಗಳಷ್ಟೇ ಹೊರತು ನಿರ್ಧಾರಗಳಲ್ಲ. ಸಾರ್ವಜನಿಕರ ಬೆಂಬಲ ಅಥವಾ ಪ್ರತಿಕ್ರಿಯೆಯನ್ನು ಪಡೆಯುವ ಉದ್ದೇಶದಿಂದ ಇದನ್ನು ಮಾಡಲಾಗಿತ್ತು. ಸರ್ಕಾರವು ನನ್ನ ಸಲಹೆಗಳನ್ನು ಪರಿಗಣಿಸಬಹುದು ಎಂದು ನಾನು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದೆ

ಬೆಂಗಳೂರಿನ ಅರಮನೆಯ ಆಸ್ತಿ ಮತ್ತು ಅದರ ಸುತ್ತಲಿನ ಭೂಮಿಗೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರವು 1996ರಲ್ಲಿ ಬೆಂಗಳೂರು ಅರಮನೆ ಸ್ವಾಧೀನ ಮತ್ತು ವರ್ಗಾವಣೆ ಕಾಯ್ದೆ ಎಂಬ ಇದೇ ರೀತಿಯ ಕಾಯ್ದೆಯನ್ನು ಜಾರಿಗೆ ತಂದಿತು. ಆದರೆ ಅಲ್ಲಿ ನಾವು ಸಂಪೂರ್ಣ ಆಸ್ತಿ ಮತ್ತು ಭೂಮಿಯ ಸ್ವಾಧೀನದಲ್ಲಿದ್ದೇವೆ. ನಮ್ಮ ಮೇಲ್ಮನವಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಕರ್ನಾಟಕ ಸರ್ಕಾರವು ಬೆಂಗಳೂರು ಅರಮನೆ ಮತ್ತು ಮೈಸೂರು ಅರಮನೆಯ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರತ್ಯೇಕ ಕಾಯ್ದೆಗಳನ್ನು ಜಾರಿಗೆ ತಂದಿರುವುದೇ, ಸದರಿ ಆಸ್ತಿಗಳು ಖಾಸಗಿ ಆಸ್ತಿಗಳಾಗಿದ್ದವು ಮತ್ತು ರಾಜ್ಯ ಸರ್ಕಾರಕ್ಕೆ ಸೇರಿರಲಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಪ್ರಮೋದ ದೇವಿ ಒಡೆಯರ್ ಸ್ಪಷ್ಟಪಡಿಸಿದರು.

ನೀವೇ ಒಂದು ಅಂಬಾರಿ ತಯಾರಿಸಿಕೊಳ್ಳಿ‌ ಎಂದು ಸಲಹೆ

ಅಂಬಾರಿಗೆ ಅವರು ಕೊಡುತ್ತಿರೋದು ಬಾಡಿಗೆಯಲ್ಲ, ಅದು ರಾಯಲ್ಟಿ. ನಮ್ಮ ವಸ್ತು ಬಳಸಿಕೊಂಡು ಅವರು ಪ್ರಚಾರ ಮಾಡುತ್ತಾರೆ. ಅದಕ್ಕಾಗಿ ರಾಯಲ್ಟಿ ಕೊಡುತ್ತಾರೆ. ರಾಯಲ್ಟಿ ಎಷ್ಟು ಬೇಕಾದರೂ ಕೇಳಬಹುದು. ಎಷ್ಟು ಪಡೆಯುತ್ತೇವೆ ಎಂಬುದನ್ನು ನಾನು ಹೇಳುವುದಿಲ್ಲ. ಸರ್ಕಾರ ಅದನ್ನು ಬಹಿರಂಗ ಮಾಡುತ್ತದೆ ಎಂದರೆ ನನ್ನ ಆಕ್ಷೇಪಣೆ ಇಲ್ಲ ಎಂದು ಹೇಳಿದರು.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಯದು ವಂಶದ ಆಚರಣೆಯನ್ನು ಸರ್ಕಾರ ಮುಂದುವರೆಸುತ್ತಿಲ್ಲ. ಸರ್ಕಾರ ಯದು ವಂಶದ ವಾರಸುದಾರ ಅಲ್ಲ. ಅವರು ಮಾಡುತ್ತಿರುವುದು ಸಾಂಸ್ಕೃತಿಕ ಕಾರ್ಯಕ್ರಮ. ನಾನು ಹಿಂದೆಯೇ ಹೇಳಿದ್ದೇನೆ. ನೀವು ದಸರಾ ಮಾಡುವಾಗ ನಮ್ಮನ್ಯಾಕೆ ಅಂಬಾರಿ‌ ಕೇಳುತ್ತೀರಿ ಎಂದಿದ್ದೇನೆ. ನೀವೇ ಒಂದು ಅಂಬಾರಿ ತಯಾರಿಸಿಕೊಳ್ಳಿ‌ ಎಂದು ಸಲಹೆ ಕೊಟ್ಟಿದ್ದೇನೆ. ಸರ್ಕಾರ ಅವರೇ ಒಂದು ಅಂಬಾರಿ ತಯಾರಿಸಿಕೊಂಡು ದಸರಾ ಮಾಡಿದರೆ ನಮ್ಮ ಅಭ್ಯಂತರ ಇಲ್ಲ ಎಂದು ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದರು.

ಮುಖ್ಯಮಂತ್ರಿ, ಸಚಿವರ ಜೊತೆ ಮಾತನಾಡಲು ನಾನು ಸಿದ್ಧ!

ಯದುವಂಶ ಆಚರಣೆ ಸರ್ಕಾರ ಮುಂದುವರೆಸಿಕೊಂಡು ಬಂದಿಲ್ಲ. ಏಕೆಂದರೆ ಯದು ವಂಶದ ಉತ್ತರಾಧಿಕಾರಿ ಸರ್ಕಾರ ಅಲ್ಲ. ಸರ್ಕಾರ ಕೇವಲ ಸಾಂಸ್ಕೃತಿಕ ಆಚರಣೆ ಅಷ್ಟೇ ಮಾಡುತ್ತಿದೆ. ಯದು ವಂಶದ ಧಾರ್ಮಿಕ ಆಚರಣೆಗಳನ್ನು ನಾವು ಮಾಡಿಕೊಂಡು ಬರುತ್ತಿದ್ದೇವೆ. 1998 ರಲ್ಲಿ ಒಂದು ಕೋಟಿ ಹಣ, ಒಂದು ಎಕರೆ ಜಾಗ ಕೊಡುತ್ತೇವೆ. ನೀವು 6 ತಿಂಗಳಲ್ಲಿ ಅರಮನೆ ಬಿಟ್ಟು ಕೊಡಿ ಎಂದು ಹೇಳಿದ್ದರು. ಇದಕ್ಕೆ ನಮ್ಮ ಪತಿ ದಿವಂಗತ ಶ್ರೀಕಂಠದತ್ತ ಒಡೆಯರ್ ಒಪ್ಪಲಿಲ್ಲ. ಒಂದು ಕೋಟಿ ಹಣ ಇವತ್ತು ಅರಮನೆಯ ಒಂದು ಕಂಬಕ್ಕೆ ಆಗಲ್ಲ. ಮುಖ್ಯಮಂತ್ರಿ ಮತ್ತು ಸಚಿವರ ಜೊತೆ ಮಾತನಾಡಲು ನಾನು ಸಿದ್ದ. ಮಾತುಕತೆ ಮೂಲಕ ಬಗೆಹರಿಸಿ ಕೊಳ್ಳುತ್ತೇನೆ ಎಂದು ಸಿಎಂ ಹೇಳಿರುವುದಕ್ಕೆ ಧನ್ಯವಾದಗಳು. ನಮ್ಮ ಹೇಳಿಕೆಯನ್ನು ಸೆನ್ಸಷೆನ್ಸೈಸ್ ಮಾಡುವುದು ಬೇಡ, ನಾನು ಹೇಳಿರುವದನ್ನು ಅಷ್ಟೇ ಜನರಿಗೆ ತಲುಪಿಸಿ ಎಂದು ಮನವಿ ಮಾಡಿದರು.

ಏಳು ದಿನ ನವರಾತ್ರಿ ಮಾಡಿ ಎಂದು ಹೇಳಿಲ್ಲ!

ದಸರಾ ಆಚರಣೆ ಸಂದರ್ಭದಲ್ಲಿ ಪೊಲೀಸರ ಭದ್ರತಾ ವ್ಯವಸ್ಥೆ ಹೆಸರಿನಲ್ಲಿ ತೊಂದರೆ ಆಗಿತ್ತು. ಅದರ ಬಗ್ಗೆ ಧ್ವನಿ ಎತ್ತಿದ್ದೇನೆ. ಜಟ್ಟಿ ಕಾಳಗ ನಡೆಸುವವರನ್ನು ಒಳಗೆ ಬಿಟ್ಟಿಲ್ಲ. ಇದು ತೊಂದರೆ ಆಯ್ತು. ಆಯುಧ ಪೂಜೆ ಮತ್ತು ವಿಜಯಯಾತ್ರೆ ಗೆ ಪ್ರತಿ ವರ್ಷವೂ ತೊಂದರೆ ಆಗುತ್ತಿದೆ. ನಾನು ಎಲ್ಲಿಯೂ ರಾಜ್ಯ ಸರಕಾರ ದೂಷಿಸಿಲ್ಲ. ಏಳು ದಿನ ನವರಾತ್ರಿ ಮಾಡಿ ಎಂದು ಹೇಳಿಲ್ಲ. ಏಳೂ ದಿನಕ್ಕೆ ಅರ್ಧ ಮುಗಿಸಿ ನಂತರ ಮಾಡಿ ಎಂದು ಹೇಳಿದ್ದೇನೆ. ನಾನು ಸಲಹೆ ಮಾತ್ರ ಕೊಟ್ಟಿದ್ದೇನೆ. ನಾನು ಸರ್ಕಾರಕ್ಕೆ ನಿರ್ದೇಶನ ನೀಡಿಲ್ಲ. ನಾನು ಈ ಬಗ್ಗೆ ಸರ್ಕಾರಕ್ಕೆ ಪತ್ರ ಕೂಡ ಬರೆದಿಲ್ಲ. ಬರೀ ಮಾಧ್ಯಮಕ್ಕೆ ಪತ್ರ ಬರೆದು ಸಾರ್ವಜನಿಕರ ಸಹಕಾರ ಕೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ಅನುಗ್ರಹದಿಂದ ನಾವು ಅರಮನೆಯಲ್ಲಿ ವಾಸವಿಲ್ಲ!

ಸರ್ಕಾರ ಅಂಬಾರಿ ಬಾಡಿಗೆ ಕೊಡುತ್ತಿಲ್ಲ, ರಾಯಲ್ಟಿ ಕೊಡುತ್ತಿದೆ. ಆದರೆ ಅಂಬಾರಿ ಇಟ್ಟು ಕೊಂಡು ಟಿಕೆಟ್ ಮಾರಿ ಹಣ ಸಂಪಾದಿಸುತ್ತಾರೆ. ಅಂಬಾರಿ ಇಟ್ಟು ಕೊಂಡು ಪ್ರಚಾರ ಮಾಡಿ ಹಣ ಮಾಡುತ್ತಾರೆ. ಇದಕ್ಕಾಗಿ ಹಣ ಕೊಡುತ್ತಾರೆ. ಅದು ಬಾಡಿಗೆ ಅಲ್ಲ. ಅಂಬಾರಿ - ಸಿಂಹಾಸನ ಎರಡು ನಮ್ಮ‌ ವಶದಲ್ಲಿದೆ. ಹಿಂದೆಯೂ ನಮ್ಮ ವಶದಲ್ಲಿತ್ತು. ನಮ್ಮ ವಶದಲ್ಲೇ ಇರುತ್ತದೆ. ಮೈಸೂರು ಅರಮನೆ ಕೂಡ ಖಾಸಗಿ ಸ್ವತ್ತು. ಅರಮನೆ ಕಟ್ಟಿಸಿದ್ದು ಸರ್ಕಾರ ಅಲ್ಲ. ಸರ್ಕಾರದ ಔದಾರ್ಯ ದಿಂದ ನಾವು ಅರಮನೆಯಲ್ಲಿ ವಾಸವಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ಇಲ್ಲಿದ್ದೇವೆ. ಅರಮನೆ ನಿರ್ವಹಣೆ ಗೆ ಇರುವ ಅರಮನೆ ಆಡಳಿತ ಮಂಡಳಿ ರಚನೆ ಆಗಿದೆ. ಇದನ್ನು ನಾವು ನ್ಯಾಯಾಲಯದಲ್ಲಿ ನಾವು ಪ್ರಶ್ನಿಸಿದ್ದೇವೆ. ಇದು ಇನ್ನೂ ವಿಚಾರಣೆಯಲ್ಲಿದೆ. ನಾವು ಸರ್ಕಾರದ ವಿಶೇಷ ಅನುಗ್ರಹ ದಿಂದ ಇಲ್ಲಿ ವಾಸ ಇಲ್ಲ ಎಂದು ತಿಳಿಸಿದರು.

ಅಂಬಾರಿ ಆನೆ ಆಯ್ಕೆ ತಿಳಿದುಕೊಳ್ಳುವುದು ನಮ್ಮ ಹಕ್ಕು!

ಅಂಬಾರಿ ಆನೆ ಆಯ್ಕೆ ವಿಚಾರವನ್ನು ತಿಳಿದು ಕೊಳ್ಳುವ ಸಂಪೂರ್ಣ ಹಕ್ಕು ನನಗಿದೆ. ಅಂಬಾರಿ ಮಾಲೀಕರಾಗಿ ಅಂಬಾರಿ ಹೊರುವ ಆನೆ ಯಾವುದು ಎಂದು ತಿಳಿದು ಕೊಳ್ಳುವ ಹಕ್ಕು ನನಗಿದೆ. ಶಿಷ್ಟಾಚಾರದ ಪ್ರಕಾರ ನನಗೆ ಹೇಳಬೇಕು ಎಂದು ಹೇಳಿಲ್ಲ. ಇದಕ್ಕೆ ಶಿಷ್ಟಾಚಾರ ಇಲ್ಲ ಎಂಬುದು ಗೊತ್ತು. ಇಲ್ಲಿ ಅನೇಕ ವಿಷಯಗಳಿಗೆ ಶಿಷ್ಟಾಚಾರ ಇಲ್ಲ. ಪರಸ್ಪರ ನಂಬಿಕೆ, ಸಹಕಾರ, ತಿಳುವಳಿಕೆ ಯಿಂದ ಇವೆಲ್ಲಾ ನಡೆಯುತ್ತವೆ. ಗೌರವಧನ ಎಷ್ಟು ಕೊಟ್ಟರು ಅಂತಾ ಹೇಳಲ್ಲ. ಸರ್ಕಾರ ಬೇಕಾದರೆ ಎಷ್ಟು ಕೊಡುತ್ತೇವೆ ಎಂದು ಬೇಕಾದರೆ ಬಹಿರಂಗವಾಗಿ ಹೇಳಲಿ. ಅಂಬಾರಿಯನ್ನು ಸರಕಾರ ವಾಣಿಜ್ಯಕವಾಗಿ ಬಳಸುವ ಕಾರಣ ಹಣ ಕೇಳುತ್ತಾನೆ ಎಂದು ತಿಳಿಸಿದರು.

ನಮ್ಮನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ

ಅರ್ಜುನ ಆನೆ ಅಂಬಾರಿ ಕಟ್ಟುವಾಗ ಅದರ ಸಮೇತ ಓಡಿತ್ತು. ಆದಾಗಿಯೂ ನಾವು ನಮ್ಮ ಅಂಬಾರಿಯನ್ನು ಕೊಡುತ್ತಾ ಬಂದಿದ್ದೇವೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಆದ ಘಟನೆಯನ್ನೇ ನೋಡಿ. ಆನೆಗಳನ್ನು ಸರಿಯಾಗಿ ತಯಾರಿ ಮಾಡದಿರುವಾಗ ಈ ರೀತಿ ಆಗುತ್ತೆ. ಮೈಸೂರಿನಲ್ಲೂ ಈ ರೀತಿ ಆಗಬಾದರು ಎಂದು ನಾವು ಮಾತನಾಡೋದು. 40 ವರ್ಷಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ದಸರಾ ಆರಂಭದಲ್ಲೇ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಈ ಬಾರಿ ಅರಣ್ಯ ಅಧಿಕಾರಿಗಳು ಅದನ್ನು ಮಾಡಿಲ್ಲ ಎಂದು ಹೇಳಿದ್ದಾರೆ.

PREV
Read more Articles on
click me!

Recommended Stories

ಕೇಸ್ ವಾಪಸ್ ಪಡೆಯದಿದ್ದರೆ ಅಷ್ಟೇ... ದರ್ಶನ್ ಮನೆ ಮುಂದೆ 20ಕ್ಕೂ ಹೆಚ್ಚು ಆಟೋ ತರಿಸಿ ಸೆಕ್ಯೂರಿಟಿಯನ್ನ ಮುಗಿಸೋ ಬೆದರಿಕೆ!
'ಸುತ್ತಾಡೋಣ ಬಾ' ಎಂದು ಗೋಕಾಕ್ ಫಾಲ್ಸ್‌ಗೆ ಕರೆದ ಕಾನ್‌ಸ್ಟೇಬಲ್, ಪ್ರಿಯಕರನ ನಂಬಿ ಬಂದ ಯುವತಿ ಬದುಕೇ ಅಂತ್ಯವಾಯ್ತು