ಮೈಸೂರು (ಜೂ.02): ಮೈಸೂರು ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದು ಹಿನ್ನೆಲೆ ತೆರವಾಗಿದ್ದ ಮೇಯರ್ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ.
ಮೇಯರ್ ಸ್ಥಾನಕ್ಕೆ ಜೂನ್ 11ರಂದು ಚುನಾವಣೆ ನಡೆಯಲಿದೆ. ಚುನಾವಣೆ ನಡೆಯುವರೆಗೂ ಉಪಮೇಯರ್ ಅಧಿಕಾರ ನಿರ್ವಹಿಸಲಿದ್ದಾರೆ. ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಜೊತೆ ಮೈಸೂರು ಮಹಾನಗರ ಪಾಲಿಕೆ ಆಡಳಿತದ ಕುರಿತು ಚರ್ಚೆ ಮಾಡಿದ ಬಳಿಕ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಈ ಬಗ್ಗೆ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ನಮಗೆ ರುಕ್ಮಿಣಿ ಮಾದೇಗೌಡರ ಸದಸ್ಯ ರದ್ದು ಆದೇಶ ಬಂದಿದ್ದು, ತಕ್ಷಣ ನಾವೂ ಪ್ರಾದೇಶಿಕ ಆಯಕ್ತರಿಗೆ ಪತ್ರ ಬರೆದಿದ್ದೆವು. ಇಂದು ಪ್ರಾದೇಶಿಕ ಆಯುಕ್ತರೊಂದಿಗೆ ಚರ್ಚೆ ನಡೆಸಿದ್ದು, ಜೂನ್ 11 ರಂದು ಚುನಾವಣೆಗೆ ದಿನಾಂಕ ನಿಗದಿ ಮಾಡಿದ್ದೇವೆ ಎಂದು ಶಿಲ್ಪಾ ನಾಗ್ ಹೇಳಿದರು.
ಮೈಸೂರು ಮೇಯರ್‌ಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್, ಮೇಯರ್ ಸ್ಥಾನಕ್ಕೂ ಕಂಟಕ ...
ಸದಸ್ಯತ್ವ ರದ್ದಾದಲ್ಲಿ ಮತ್ತೆ ಚುನಾವಣೆಗೆ ಅವಕಾಶ ಇದೆ ಎಂಬುದನ್ನ ಪರಿಶೀಲಿಸಿ ತೀರ್ಮಾನ ಮಾಡಲಾಗಿದೆ. ಚುನಾವಣೆ ಆಗುವವರೆಗೂ ಉಪಮೇಯರ್ ಅವರೇ ಮೇಯರ್ ಅಧಿಕಾರ ಚಲಾಯಿಸುತ್ತಾರೆ ಎಂದು ಪಾಲಿಕೆ ಅಯುಕ್ತೆ ಶಿಲ್ಪಾನಾಗ್ ಮಾಹಿತಿ ನೀಡಿದರು.
ಫೆ.24 ರಂದು ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಮೈಸೂರು ಮೇಯರ್ ಆಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಮೈಸೂರು ಪಾಲಿಕೆಯಲ್ಲಿ ಅಧಿಕಾರ ಹಿಡಿದಿದ್ದವು.
ಚುನಾವಣೆ ವೇಳೆ ಸೂಕ್ತ ಆದಾಯ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆ ರುಕ್ಮಿಣಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಈ ನಿಟ್ಟಿನಲ್ಲಿ ಹೈ ಕೋರ್ಟ್ ಸದಸ್ಯತ್ವ ರದ್ದು ಮಾಡಿ ಆದೇಶ ಹೊರಡಿಸಿದೆ. ಕಾಂಗ್ರೆಸ್‌ನ ರಜನಿ ಅಣ್ಣಯ್ಯ ರುಕ್ಮಿಣಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.