
ಮೈಸೂರು: ನಾಡಹಬ್ಬ ದಸರ ಮಹೋತ್ಸವಕ್ಕೆ ಕ್ಷಣ ಗಣನೆ ಆರಂಭವಾಗಿದೆ. ತಾಯಿ ಚಾಮುಂಡಿ ಉತ್ಸವ ಮೂರ್ತಿ ಬೆಟ್ಟ ತಲುಪಿದ್ದು ಭಾನುವಾರವೇ ತಾಯಿಗೆ ಪುಷ್ಪಾರ್ಚನೆ ಮಾಡಿ ನಾಡಹಬ್ಬಕ್ಕೆ ಚಾಲನೆ ನೀಡಲಾಗುವುದು. ಆದರೆ ನವರಾತ್ರಿ ಆರಂಭಕ್ಕೂ ಮುನ್ನವೇ ಮೈಸೂರು ನಗರದಲ್ಲಿ ಮಹಿಷ ದಸರಾ ನಡೆದಿದೆ.
ನಾಡಹಬ್ಬ ದಸರಾ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಇಡೀ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ಈಗಾಗಲೇ ಬೆಟ್ಟದಲ್ಲಿ ವಿರಾಜಮಾನಳಾಗಿರುವ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಭಾನುವಾರ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ದೊರೆಯಲಿದೆ. ಇದರ ನಡುವೆಯೇ ಸಾಕಷ್ಟು ವಿರೋಧವಿದ್ದರೂ ಮಹಿಷ ದಸರಾ ನಡೆದಿದೆ. ಚಾಮುಂಡಿಬೆಟ್ಟದಲ್ಲಿ ಅಧಿದೇವತೆ ಚಾಮುಂಡೇಶ್ವರಿಯ ಎದುರಿಗೆ ಇರುವ ಮಹಿಷ ಪ್ರತಿಮೆಗೆ ಹಾರ ಹಾಕಿ ಮಹಿಷ ದಸರಾ ಆಚರಣೆಗೆ ಮೂಲ ನಿವಾಸಿಗಳ ಸಂಘಟನೆಗಳ ಹೆಸರಿನಲ್ಲಿ ದಲಿತ, ಪ್ರಗತಿಪರ ಸಂಘಟನೆಗಳು ಸಿದ್ಧತೆ ನಡೆಸಿದ್ದವು.
ಆದರೆ ವಿರೋಧ ಎದುರಾದ ಹಿನ್ನೆಲೆ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಯಾರಿಗೂ ಅಲ್ಲಿಗೆ ಎಂಟ್ರಿಯೇ ಇಲ್ಲದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿ ಹೆಚ್ಚಿನ ಪೊಲೀಸರ ನಿಯೋಜಿಸಲಾಗಿತ್ತು. ಅಲ್ಲದೆ ಮಹಿಷಸುರನ ಪ್ರತಿಮೆಗೆ ಟಾರ್ಪಲ್ ಹೊದಿಸಿ ಯಾರಿಗೂ ಕಾಣದಂತೆ ಮುಚ್ಚಲಾಗಿತ್ತು. ಇಷ್ಟಾದರೂ ಮಹಿಷ ದಸರಾ ಬಿಡದ ದಲಿತ, ಪ್ರಗತಿಪರ ಸಂಘಟನೆಗಳು ಮೈಸೂರು ನಗರದ ಪುರಭವನದ ಮುಂಭಾಗ ಮಹಿಷ ದಸರಾ ನಡೆಸಿದ್ವು. ಬುದ್ಧ, ಅಂಬೇಡ್ಕರ್ ಜೊತೆಗೆ ಮಹಿಷಸುರನ ಪ್ರತಿಮೆಯನ್ನು ಇರಿಸಿ ಕ್ಯಾಂಡಲ್ ಹಚ್ಚಿ ಪುಷ್ಪಾರ್ಚನೆ ಮಾಡಿ ಮಹಿಷ ದಸರಾಗೆ ಚಾಲನೆ ನೀಡಿದರು.
ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ ಸಾಹಿತಿ ಡಾ. ವಿಠ್ಠಲ ವಗ್ಗನ್ ಮಹಿಷ ಯಾರು, ಆತನ ಇತಿಹಾಸವೇನು ಎಂದು 20ಕ್ಕೂ ಹೆಚ್ಚು ಐತಿಹಾಸಿಕ ಹಾಗೂ ಪೌರಾಣಿಕ ದಾಖಲೆಗಳನ್ನು ಪ್ರಸ್ತುತಪಡಿಸಿದರು. ಮಹಿಷ ಎನ್ನುವುದೇ ಒಂದು ಕುಲ, ಆತ ಕೆಟ್ಟವನಲ್ಲ. ಆತ ಮೈಸೂರಿಗೆ ಮಾತ್ರ ಸೀಮಿತವಲ್ಲ ಇಡೀ ದೇಶ, ವಿದೇಶಗಳಲ್ಲಿ ಆತನ ಇತಿಹಾಸವಿದೆ ಎಂದರು.
ವಿರೋಧಗಳ ನಡುವೆ ಇತ್ತ ಮಹಿಷ ದಸರಾ ನಡೆದಿದ್ದರೆ ಅತ್ತ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಚಾಮುಂಡಿ ಬೆಟ್ಟ ತಲುಪಿದ್ದಾಳೆ. ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ವಿರಾಜಮಾನಳಾಗಿದ್ದಾಳೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ದಸರೆಗೆ ಚಾಲನೆ ದೊರೆಯಲಿದೆ. ನಾಳೆಯಿಂದ ಒಂಭತ್ತು ದಿನಗಳ ಕಾಲ ವಿಶೇಷ ಅಲಂಕಾರ, ಪೂಜೆ ನಡೆಯಲಿವೆ. ಅರಮನೆಯಂತೆ ಬೆಟ್ಟದಲ್ಲೂ ದರ್ಬಾರ್ ನಡೆಯಲಿದ್ದು, ಚಾಮುಂಡೇಶ್ವರಿ ತಾಯಿಯ ವಿಗ್ರಹವಿರಿಸಿ ದರ್ಬಾರ್ ನಡೆಸಲಿದ್ದಾರೆ. ಅದಕ್ಕಾಗಿ ವೇದಿಕೆಯೂ ಸಿದ್ಧವಾಗಿದೆ.
ಒಟ್ಟಿನಲ್ಲಿ ವಿರೋಧದ ನಡುವೆ ಮಹಿಷ ದಸರಾವೂ ನಡೆದಿದ್ದು, ನಾಡಹಬ್ಬ ದಸರ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಚಾಮುಂಡಿ ತಾಯಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನವರಾತ್ರಿಗೆ ಚಾಲನೆ ದೊರೆಯಲಿದೆ. (ವರದಿ: ರವಿ. ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)