ಬೆಂಗಳೂರು ಮೆಟ್ರೋ ಸುದ್ದಿ, ನೀಲಿ ಮಾರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕೆಂದು ಕಾತರದಲ್ಲಿದ್ದವರಿಗೆ ಶಾಕ್!

Published : Oct 10, 2026, 02:59 PM IST
Namma Metro

ಸಾರಾಂಶ

ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೋ ಬ್ಲೂ ಲೈನ್ ಕಾಮಗಾರಿ ಪೂರ್ಣಗೊಳ್ಳುವುದು ಮತ್ತೆ ಮೂರು ತಿಂಗಳು ವಿಳಂಬವಾಗಿದೆ. ಈ ಮಾರ್ಗವು ಮಾರ್ಚ್ 2028 ರ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಜೊತೆಗೆ ಪಿಂಕ್ ಲೈನ್ ಕಾಮಗಾರಿಯ ಪ್ರಗತಿಯ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಮೈಲಿಗಲ್ಲಾಗಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 'ನಮ್ಮ ಮೆಟ್ರೋ' 58 ಕಿಲೋಮೀಟರ್ ಉದ್ದದ 'ಬ್ಲೂ ಲೈನ್' (ನೀಲಿ ಮಾರ್ಗ) ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊಳ್ಳುವ ಗಡುವು ಮತ್ತೆ ಮೂರು ತಿಂಗಳು ವಿಳಂಬವಾಗಿದೆ. ಈ ಹಿಂದೆ ಬಿಎಂಆರ್‌ಸಿಎಲ್ಡಿ ಸೆಂಬರ್ 2027 ರೊಳಗೆ ಇಡೀ ಕಾರಿಡಾರ್ ಅನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಿತ್ತು. ಆದರೆ, ಈಗ ಮಾರ್ಚ್ 2028 ರ ವೇಳೆಗೆ ಈ ಮಾರ್ಗ ಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಶನಿವಾರ ತಿಳಿಸಿದ್ದಾರೆ.

ಮೂರು ಹಂತಗಳಲ್ಲಿ ಬ್ಲೂ ಲೈನ್ ಉದ್ಘಾಟನಾ ಯೋಜನೆ

ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಬ್ಲೂ ಲೈನ್ ಅನ್ನು ಮೂರು ಪ್ರತ್ಯೇಕ ಹಂತಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲು ಯೋಜಿಸಲಾಗಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ - ಕೆಆರ್ ಪುರ ವಿಭಾಗ (2027 ರ ಮಧ್ಯಭಾಗ):

ಈ ಮಾರ್ಗದಲ್ಲಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಕೆಆರ್ ಪುರದಿಂದ ಇಬ್ಲೂರ್ ನಡುವೆ 2026 ರ ಅಕ್ಟೋಬರ್ ವೇಳೆಗೆ ಹಾಗೂ ಇಬ್ಲೂರ್‌ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ ಡಿಸೆಂಬರ್ 2026 ರ ವೇಳೆಗೆ ರೈಲುಗಳ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಪ್ರಾಯೋಗಿಕ ಸಂಚಾರ ಯಶಸ್ವಿಯಾದ ನಂತರ 2027 ರ ಮಧ್ಯಭಾಗದಲ್ಲಿ ವಾಣಿಜ್ಯ ಸಂಚಾರ ಅಧಿಕೃತವಾಗಿ ಪ್ರಾರಂಭವಾಗಲಿದೆ.

ಹೆಬ್ಬಾಳ - ಕೆಐಎ ವಿಭಾಗ (ಸೆಪ್ಟೆಂಬರ್ 2027):

ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಹೆಬ್ಬಾಳದಿಂದ ಕೆಐಎ ವರೆಗಿನ ಮಾರ್ಗವನ್ನು ಸೆಪ್ಟೆಂಬರ್ 2027 ರ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ.

ಕೆಆರ್ ಪುರ - ಹೆಬ್ಬಾಳ ವಿಭಾಗ (ಡಿಸೆಂಬರ್ 2027 - ಮಾರ್ಚ್ 2028):

ನಾಗವಾರವನ್ನು ಒಳಗೊಂಡಿರುವ ಕೆಆರ್ ಪುರ ಮತ್ತು ಹೆಬ್ಬಾಳ ನಡುವಿನ ಬಾಕಿ ಉಳಿದ ವಿಭಾಗದ ಕಾಮಗಾರಿಗಳು ಡಿಸೆಂಬರ್ 2027 ರಿಂದ ಮಾರ್ಚ್ 2028 ರ ನಡುವೆ ಪೂರ್ಣಗೊಳ್ಳಲಿವೆ.

ನಾಲ್ಕು ಹಳಿಗಳ ಎತ್ತರಿಸಿದ ಮಾರ್ಗ: ಎಂಜಿನಿಯರಿಂಗ್ ಸವಾಲು

ಜೆ.ಪಿ. ನಗರ ಮತ್ತು ಕೆಂಪಾಪುರ ನಡುವೆ ಪ್ರಸ್ತಾವಿತ 'ಕಿತ್ತಳೆ ಮಾರ್ಗ'ವನ್ನು (Orange Line) ನೀಲಿ ಮಾರ್ಗದೊಂದಿಗೆ ಸಂಯೋಜಿಸುವುದು ಬಿಎಂಆರ್‌ಸಿಎಲ್‌ಗೆ ಪ್ರಮುಖ ತಾಂತ್ರಿಕ ಸವಾಲಾಗಿ ಪರಿಣಮಿಸಿದೆ. ಇದಕ್ಕಾಗಿ ಹೆಬ್ಬಾಳ ಮತ್ತು ಕೆಂಪಾಪುರ ನಡುವೆ ನಾಲ್ಕು ಹಳಿಗಳನ್ನು ಅಳವಡಿಸಲು ಸಾಧ್ಯವಾಗುವಂತೆ ವಿಶೇಷ ಎತ್ತರದ ಕಾರಿಡಾರ್ ಅನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ 1 ಕಿಲೋಮೀಟರ್ ಉದ್ದದ 'ತ್ರಿ-ಪಿಯರ್ ಪೋರ್ಟಲ್' ಎಂಬ ವಿಶಿಷ್ಟ ರಚನೆಯೂ ಸೇರಿದೆ.

ಪಿಂಕ್ ಲೈನ್ ಕಾಮಗಾರಿ ಪ್ರಗತಿ

ಎತ್ತರದ ಮಾರ್ಗ : ಕಲೇನಾ ಅಗ್ರಹಾರದಿಂದ ತಾವರೆಕೆರೆ ನಡುವಿನ 7.5 ಕಿ.ಮೀ ಎತ್ತರಿಸಿದ ರೈಲು ಮಾರ್ಗವನ್ನು ಸೆಪ್ಟೆಂಬರ್ ವೇಳೆಗೆ ತೆರೆಯಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸುತ್ತಿದೆ. ರೋಲಿಂಗ್ ಸ್ಟಾಕ್‌ನ ರೈಲ್ವೆ ಪ್ರಮಾಣೀಕರಣದ ಪ್ರಕ್ರಿಯೆ ಬಾಕಿ ಇರುವ ಕಾರಣ ಈ ವಿಸ್ತರಣೆ ವಿಳಂಬಗೊಂಡಿದೆ.

ಭೂಗತ ವಿಭಾಗ : ಡೈರಿ ಸರ್ಕಲ್‌ನಿಂದ ನಾಗವಾರ ನಡುವಿನ 13 ಕಿ.ಮೀ. ಭೂಮಿಯ ಒಳಗಿನ ಮೆಟ್ರೋ ರೈಲು ಮಾರ್ಗ ಮಾಡಲು ಇನ್ನು ಹೆಚ್ಚಿನ ಪ್ರಮಾಣದ ಸಿಸ್ಟಮ್ ಕಾಮಗಾರಿಗಳು ಬಾಕಿ ಇವೆ. ಮಾರ್ಚ್ 2027 ರೊಳಗೆ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಜಯದೇವ ಕಡೆಯಿಂದ ಆದಷ್ಟು ಬೇಗ ಪ್ರಾಯೋಗಿಕ ಸಂಚಾರ ಪ್ರಾರಂಭಿಸಲು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ.

PREV
Read more Articles on
click me!

Recommended Stories

ದೆಹಲಿಯಲ್ಲಿ ಬ್ರೇಕ್ ಬಿದ್ದ ಬೆನ್ನಲ್ಲೇ ಬೆಂಗಳೂರಿನಲ್ಲಿ ರಸ್ತೆಗಿಳಿದ ಸಿಜೆಪಿ ಹೋರಾಟಾಗರರು ಪೊಲೀಸ್ ವಶಕ್ಕೆ
Gruhalakshmi Scheme: ಗೃಹ ಲಕ್ಷ್ಮೀಯರಿಗೆ ಶುಭ ಸುದ್ದಿ, ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಸರ್ಕಾರ ಮಹತ್ವದ ಆದೇಶ