Mysuru: ವಿದ್ಯಾರ್ಥಿಗೆ ಥಳಿಸಿದ ಆರೋಪ, ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲು

Published : Sep 08, 2026, 05:30 PM IST
Mysuru Teacher

ಸಾರಾಂಶ

ಮೈಸೂರಿನಲ್ಲಿ 10ನೇ ತರಗತಿ ವಿದ್ಯಾರ್ಥಿಗೆ ವಿಜ್ಞಾನ ಶಿಕ್ಷಕ ಥಳಿಸಿದ ಆರೋಪ ಕೇಳಿಬಂದಿದೆ. ಆರಂಭದಲ್ಲಿ ಭಯದಿಂದ ಸುಳ್ಳು ಹೇಳಿದ್ದ ವಿದ್ಯಾರ್ಥಿ, ನಂತರ ಸತ್ಯ ಬಾಯ್ಬಿಟ್ಟಿದ್ದು, ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ ಎಂಬ ಆರೋಪವೂ ಕೇಳಿಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೈಸೂರು: ಮೈಸೂರಿನಲ್ಲಿ 10ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕ ಥಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಖಾಸಗಿ ಶಾಲೆ ವಿಜ್ಞಾನ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ಮನೆಗೆ ಹೇಳದಂತೆ ಎದರಿಸಿದ ಶಿಕ್ಷಕನ ವಿರುದ್ಧ ಪೋಷಕರು ತಿರುಗಿ ಬಿದ್ದಿದ್ದಾರೆ.

ವಿದ್ಯಾರ್ಥಿ ಮೇಲೆ ಶಿಕ್ಷಕನ ಹಲ್ಲೆ, ಎಫ್‌ಐಆರ್ ದಾಖಲು

ಸೆಪ್ಟೆಂಬರ್ 3, ಎಂದಿನಂತೆ ಶಾಲೆಗೆ ಹೋಗಿದ್ದ 10 ನೇ ತರಗತಿ ವಿದ್ಯಾರ್ಥಿ ರೆಹಾನ್, ಸಂಜೆ 5.30 ಆದರೂ ಮನೆಗೆ ಬಂದಿರಲಿಲ್ಲ. ಬಳಿಕ ಮತ್ತೊಬ್ಬ ವಿದ್ಯಾರ್ಥಿ ರೆಹಾನ್‌ನನ್ನು ಮನೆಗೆ ಕರೆತಂದಿದ್ದಾನೆ. ಮಗನ ಮುಖ ಊದಿಕೊಂಡಿದ್ದು, ಮೂಗಿನಲ್ಲಿ ರಕ್ತ ಬರುತ್ತಿದ್ದುದನ್ನು ಕಂಡು ತಾಯಿ ಶಿರೀನ್ ತಾಜ್ ಆತಂಕಗೊಂಡಿದ್ದಾರೆ.

ಆದರೆ ಶಾಲೆಯಲ್ಲಿ ಬೆಂಚ್ ತಾಗಿ ಗಾಯವಾಗಿದೆ ಎಂದು ರೆಹಾನ್ ಮನೆಯಲ್ಲಿ ಹೇಳಿದ್ದ. ಶಿಕ್ಷಕರು ಹೆದರಿಸಿದ್ದರಿಂದಲೇ ಮಗ ಈ ರೀತಿ ಹೇಳಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ದಾಗ ಇದು ಬೆಂಚ್ ತಾಗಿ ಆಗಿರುವ ಗಾಯವಲ್ಲ, ಯಾರೋ ಹೊಡೆದಿರುವ ಗಾಯ ಎಂದು ವೈದ್ಯರು ತಿಳಿಸಿದ್ದಾಗಿ ತಾಯಿ ಹೇಳಿದ್ದಾರೆ.

ವಿದ್ಯಾರ್ಥಿಗೆ ಶಿಕ್ಷಕನ ಪೆಟ್ಟು, ನಿಜಕ್ಕೂ ನಡೆದಿದ್ದೇನು?

ಇತ್ತ ಸ್ವತಃ ರೆಹಾನ್ ಕೂಡ ಶಿಕ್ಷಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. ಸೈನ್ಸ್ ಆಕ್ಟಿವಿಟಿ ಬರೆದುಕೊಂಡು ಬರದಿದ್ದಕ್ಕೆ ಸುರೇಶ್ ಸರ್ ಹೊಡೆದರು ಎಂದು ವಿದ್ಯಾರ್ಥಿ ಹೇಳಿದ್ದಾನೆ. ಮೊದಲು ನವಾಜ್ ಎಂಬ ವಿದ್ಯಾರ್ಥಿಗೆ ಕೈಗೆ ಮೂರು ಏಟು ಹೊಡೆದು ಕಳುಹಿಸಿದ ಶಿಕ್ಷಕರು. ಬಳಿಕ ತನ್ನ ಮುಖಕ್ಕೆ ಗುದ್ದಿ ಬೆನ್ನಿಗೆ ಬರೆ ಬರುವಂತೆ ಹೊಡೆದರು ಎಂದು ರೆಹಾನ್ ಹೇಳಿದ್ದಾನೆ. ಭಯದಿಂದ ಆರಂಭದಲ್ಲಿ ಸುಳ್ಳು ಹೇಳಿದ್ದ ರೆಹಾನ್, ರಾತ್ರಿ 10.30ಕ್ಕೆ ದೊಡ್ಡಮ್ಮ ಧೈರ್ಯ ಹೇಳಿದ ಬಳಿಕ ಶಿಕ್ಷಕ ಹೊಡೆದ ಸತ್ಯವನ್ನು ಬಿಚ್ಚಿಟ್ಟಿದ್ದಾನೆ.

ಪ್ರಕರಣದಲ್ಲಿ ಪ್ರಿನ್ಸಿಪಾಲ್ ಕಚೇರಿಯಲ್ಲೂ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಶಿಕ್ಷಕ ಸುರೇಶ್ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿದ್ಯಾರ್ಥಿಯ ತಂದೆ ವಾಸಿಮ್ ಷರೀಫ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಟ್ಟಾರೆ ಪ್ರಕರಣದ‌ ಬಗ್ಗೆ ಸ್ಪಷ್ಟನೆ‌ ಕೇಳಲು ಶಿಕ್ಷಕನನ್ನು ಸಂಪರ್ಕಿಸಿದಾಗ ಯಾವುದೇ ಸಂಪರ್ಕಕ್ಕೆ ಸಿಕ್ಕಿಲ್ಲ. ಶಾಲೆಯ ಸಿಸಿಟಿವಿ ದೃಶ್ಯಾವಳಿಗಳಲ್ಲೂ ಕೆಲವು ನಿಮಿಷಗಳ ದೃಶ್ಯ ಡಿಲೀಟ್ ಮಾಡಲಾಗಿದೆ ಎಂದು ವಿದ್ಯಾರ್ಥಿಯ ತಾಯಿ ಆರೋಪಿಸಿದ್ದು, ಆರೋಪಗಳು ಸತ್ಯವೇ ಅಥವಾ ಸುಳ್ಳೇ? ಪೊಲೀಸ್ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)

PREV
Read more Articles on
click me!

Recommended Stories

ಕರುಳು ಹಿಂಡುವ ಕೃತ್ಯ: ಹುಟ್ಟಿದ ಮಗುವನ್ನ ಬಟ್ಟೆಯಲ್ಲಿ ಸುತ್ತಿಟ್ಟು ಹೋದ ಪಾಪಿಗಳು
Cauvery Water: ತಮಿಳುನಾಡಿಗೆ 15 ದಿನ, 6 ಸಾವಿರ ಕ್ಯೂಸೆಕ್ ನೀರು ಬಿಡಲು CWRC ಆದೇಶ; ಮಳೆಗಾಗಿ ದೇವರಿಗೆ ಪ್ರಾರ್ಥಿಸಿ ಎಂದ ಸಿಎಂ