ಮೈಸೂರು ಡ್ರಗ್ಸ್ ತಯಾರಿಕೆಗೆ ‘ಸೇಫ್ ಜೋನ್’ ಆಗುತ್ತಿದೆಯೇ? ಯಾಂದಹಳ್ಳಿ ಬಳಿ ದಂಪತಿಯ ಘಟಕ ಪತ್ತೆ!

Published : Jan 31, 2026, 01:38 PM IST
Mysuru

ಸಾರಾಂಶ

ಮೈಸೂರು ತಾಲೂಕಿನ ಯಾಂದಹಳ್ಳಿ ಗ್ರಾಮದ ಬಳಿ ಪೊಲೀಸರು ಮತ್ತೊಂದು ಡ್ರಗ್ಸ್ ತಯಾರಿಕಾ ಘಟಕವನ್ನು ಪತ್ತೆಹಚ್ಚಿದ್ದಾರೆ. ಉತ್ತರ ಭಾರತದ ಮೂಲದ ದಂಪತಿಗಳು ಬಾಡಿಗೆ ಮನೆಯಲ್ಲಿ ಈ ಅಕ್ರಮ ಚಟುವಟಿಕೆ ನಡೆಸುತ್ತಿದ್ದು, ಪೊಲೀಸರು ದಾಳಿ ನಡೆಸುವ ಮುನ್ನವೇ ಪರಾರಿಯಾಗಿದ್ದಾರೆ.

ಮೈಸೂರು: ಡ್ರಗ್ಸ್ ತಯಾರಿಕೆಗೆ ಮೈಸೂರು ನಗರ ಹಾಗೂ ಅದರ ಹೊರವಲಯಗಳು ನಿಧಾನವಾಗಿ ‘ಸೇಫ್ ಜೋನ್’ ಆಗುತ್ತಿವೆಯೇ ಎಂಬ ಆತಂಕಕಾರಿ ಪ್ರಶ್ನೆಗಳು ಉದ್ಭವಿಸುತ್ತಿವೆ. ಮೈಸೂರಿನಲ್ಲಿ ದಿನಕ್ಕೊಂದು ಡ್ರಗ್ಸ್ ತಯಾರಿಕಾ ಘಟಕಗಳು ಪತ್ತೆಯಾಗುತ್ತಿರುವ ನಡುವೆ, ಇದೀಗ ಮೈಸೂರು ತಾಲೂಕಿನ ಯಾಂದಹಳ್ಳಿ ಗ್ರಾಮದ ಬಳಿ ಮತ್ತೊಂದು ಡ್ರಗ್ಸ್ ತಯಾರಿಕಾ ಘಟಕವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಈಗಾಗಲೇ ರಿಂಗ್ ರಸ್ತೆ ವ್ಯಾಪ್ತಿ ಹಾಗೂ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ತಯಾರಿಕಾ ಘಟಕಗಳು ಪತ್ತೆಯಾಗಿದ್ದರೆ, ಇದೀಗ ಮೈಸೂರು ಹೊರವಲಯದ ನಿರ್ಜನ ಪ್ರದೇಶದಲ್ಲಿರುವ ಒಂಟಿ ಮನೆಯೊಂದರಲ್ಲಿ ಡ್ರಗ್ಸ್ ತಯಾರಿಕೆಗೆ ಸಿದ್ಧತೆ ನಡೆಸಲಾಗುತ್ತಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮನೆಯ ಮಳಿಗೆಯಲ್ಲಿ ಡ್ರಗ್ಸ್ ತಯಾರಿಕೆ

ಮೈಸೂರು ಜಿಲ್ಲಾ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಆಧಾರದಲ್ಲಿ, ಯಾಂದಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿರುವ ಮನೆಯೊಂದರ ಕೆಳ ಅಂತಸ್ತಿನ ಮಳಿಗೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ಮಳಿಗೆಯಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ತಯಾರಿಕೆಗೆ ಬಳಸುವ ಕಚ್ಚಾ ಪದಾರ್ಥಗಳು ಪತ್ತೆಯಾಗಿವೆ.

ಡ್ರಗ್ಸ್ ತಯಾರಿಕೆಗೆ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಘಟಕದ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದು, ಮನೆ ಮತ್ತು ಮಳಿಗೆ ಎರಡನ್ನೂ ಸೀಜ್ ಮಾಡಿದ್ದಾರೆ.

ಉತ್ತರ ಭಾರತದ ಮೂಲದ ದಂಪತಿಗಳಿಂದ ಅಕ್ರಮ ಚಟುವಟಿಕೆ

ಪ್ರಾಥಮಿಕ ತನಿಖೆ ಪ್ರಕಾರ, ಈ ಮನೆ ಮತ್ತು ಮಳಿಗೆಯನ್ನು ಉತ್ತರ ಭಾರತದ ಮೂಲದ ದಂಪತಿಗಳು ಬಾಡಿಗೆಗೆ ಪಡೆದುಕೊಂಡಿದ್ದರು. ಮೂರು ತಿಂಗಳ ಹಿಂದೆ ನಿರ್ಜನ ಪ್ರದೇಶದಲ್ಲಿರುವ ಈ ಒಂಟಿ ಮನೆ ಹಾಗೂ ಅದರ ಕೆಳ ಅಂತಸ್ತಿನ ಮಳಿಗೆಯನ್ನು ಬಾಡಿಗೆಗೆ ಪಡೆದಿದ್ದ ದಂಪತಿಗಳು, ಡ್ರಗ್ಸ್ ತಯಾರಿಕೆ ಮತ್ತು ಮಾರಾಟದ ಜಾಲವನ್ನು ರೂಪಿಸುತ್ತಿದ್ದರು ಎನ್ನಲಾಗಿದೆ.

ಪೊಲೀಸರು ದಾಳಿ ನಡೆಸುವ ಮುನ್ನವೇ ದಂಪತಿಗಳು ಸ್ಥಳದಿಂದ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಆಸಿಡ್ ವ್ಯಾಪಾರ ಎಂಬ ನೆಪ

ಸ್ಥಳೀಯರ ಅನುಮಾನ ತಪ್ಪಿಸಲು, ದಂಪತಿಗಳು ತಮ್ಮ ಚಟುವಟಿಕೆಯನ್ನು ‘ಆಸಿಡ್ ವ್ಯಾಪಾರ’ ಎಂದು ಹೇಳಿಕೊಂಡಿದ್ದರು. ರಾತ್ರಿ ವೇಳೆಯಲ್ಲಿ ಮಾತ್ರ ಗೋಡೌನ್ ಬಾಗಿಲು ತೆರೆಯಲಾಗುತ್ತಿದ್ದು, ವಾಹನಗಳಲ್ಲಿ ಕಚ್ಚಾ ಪದಾರ್ಥಗಳನ್ನು ತುಂಬಿಸಿಕೊಂಡು ಹೋಗಲಾಗುತ್ತಿತ್ತು.

ಹಗಲು ವೇಳೆ ತಮ್ಮ ಕಾರಿನಲ್ಲಿ ವಸ್ತುಗಳನ್ನು ಸಾಗಿಸುತ್ತಿದ್ದು, ಕೆಲವೊಮ್ಮೆ ಬೈಕ್‌ಗಳಲ್ಲಿ ಬರುವ ಯುವಕರು ಬಾಕ್ಸ್‌ಗಳಲ್ಲಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೆಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅನುಮಾನ ಮೂಡಿಸಿದ್ದ ದಂಪತಿಯ ವರ್ತನೆ

ಮನೆಯಲ್ಲೇ ವಾಸವಾಗಿದ್ದರೂ ಕೂಡ ದಂಪತಿಗಳು ಸ್ಥಳೀಯರೊಂದಿಗೆ ಯಾವುದೇ ಸಂಭಾಷಣೆ ನಡೆಸುತ್ತಿರಲಿಲ್ಲ. ಮೂರು ತಿಂಗಳು ಕಳೆದರೂ ಒಬ್ಬ ಸ್ಥಳೀಯರನ್ನೂ ಪರಿಚಯ ಮಾಡಿಕೊಂಡಿರಲಿಲ್ಲ ಎಂಬುದು ಅನುಮಾನಕ್ಕೆ ಕಾರಣವಾಗಿದೆ.

ದಂಪತಿಗಳು ದೆಹಲಿ ನೋಂದಣಿಯ ಕಾರನ್ನು ಬಳಸುತ್ತಿದ್ದು, ಸ್ಥಳೀಯರು ಮಾತನಾಡಿಸಲು ಪ್ರಯತ್ನಿಸಿದಾಗ ಕೈ ಸನ್ನೆಗಳಲ್ಲೇ ಉತ್ತರಿಸುತ್ತಿದ್ದರು. ಅವರ ಹಿನ್ನೆಲೆ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ಇರಲಿಲ್ಲ.

17 ಲಕ್ಷ ಕಳ್ಳತನಕ್ಕೂ ದೂರು ಇಲ್ಲ!

ಇನ್ನೂ ಹೆಚ್ಚಿನ ಅನುಮಾನ ಮೂಡಿಸುವ ಅಂಶವೆಂದರೆ, ಎರಡು ತಿಂಗಳ ಹಿಂದೆ ಈ ದಂಪತಿಗಳ ಮನೆಯಲ್ಲಿ ಸುಮಾರು 17 ಲಕ್ಷ ರೂ. ಮೌಲ್ಯದ ಕಳ್ಳತನ ನಡೆದಿದ್ದರೂ, ಅವರು ಪೊಲೀಸರಿಗೆ ಯಾವುದೇ ದೂರು ದಾಖಲಿಸಿರಲಿಲ್ಲ.

ಕಳ್ಳತನದ ವಿಷಯವನ್ನು ಸ್ಥಳೀಯರೊಬ್ಬರಿಗೆ ಮಾತ್ರ ಹೇಳಿಕೊಂಡು, ಪೊಲೀಸರಿಗೆ ಮಾಹಿತಿ ನೀಡದೇ ಇರುವುದರಿಂದ ಪ್ರಕರಣವೂ ದಾಖಲಾಗಿರಲಿಲ್ಲ. ಸಮೀಪದ ನಿವಾಸಿಗಳಿಗೆ “ಎಚ್ಚರಿಕೆಯಿಂದ ಇರಿ” ಎಂದು ಮಾತ್ರ ಹೇಳಿದ್ದ ದಂಪತಿಗಳ ನಡೆ ಇದೀಗ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ.

ತನಿಖೆ ತೀವ್ರ

ಘಟನೆಯ ಕುರಿತು ಮೈಸೂರು ಜಿಲ್ಲಾ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದು, ವಶಪಡಿಸಿಕೊಂಡಿರುವ ಕಚ್ಚಾ ಪದಾರ್ಥಗಳ ಮೂಲ, ತಯಾರಿಸಲಾಗುತ್ತಿದ್ದ ಡ್ರಗ್ಸ್ ಪ್ರಕಾರ, ಮತ್ತು ಇದರ ಹಿಂದೆ ಇರುವ ಜಾಲದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಮೈಸೂರು ಹೊರವಲಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ತಯಾರಿಕಾ ಪ್ರಕರಣಗಳು, ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಗಂಭೀರ ಚಿಂತನೆಗೆ ಕಾರಣವಾಗಿವೆ.

PREV
Read more Articles on
click me!

Recommended Stories

CJ Roy Self Death: ಬಹುಕೋಟಿ ಶ್ರೀಮಂತ ಸಿಜೆ ರಾಯ್ ಸಾವು ಪರಿಣಾಮ, ಕಾರಣ ಏನಿದ್ದರೂ ನೆಪ ಅಷ್ಟೇ!
ಚಿತ್ರದುರ್ಗದ ಮುರುಘಾಶ್ರೀ ಸುತ್ತ ಮತ್ತೊಂದು ವಿವಾದದ ಹುತ್ತ! ಹೊಸದುರ್ಗ ನ್ಯಾಯಾಲಯದಲ್ಲಿ ದಾವೆ