ಮೈಸೂರು ದಸರಾ ವೆಬ್‌ಸೈಟ್‌ನಲ್ಲಿ ಪ್ರಸಾರ - ಎಸ್‌ಟಿಎಸ್‌

By Kannadaprabha NewsFirst Published Oct 2, 2021, 7:51 AM IST
Highlights
  • ವಿಶ್ವವಿಖ್ಯಾತ ಮೈಸೂರು ದಸರಾ 2021ರ   https://mysoredasara.gov.in/ ವೆಬ್‌ಸೈಟ್‌ ನಲ್ಲಿ ಪ್ರಸಾರ
  • ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರಿಂದ ಮೈಸೂರು ಅರಮನೆ ಆಡಳಿತ ಮಂಡಳಿ ಸಭಾಂಗಣದಲ್ಲಿ ಉದ್ಘಾಟನೆ

 ಮೈಸೂರು (ಅ.02):  ವಿಶ್ವವಿಖ್ಯಾತ ಮೈಸೂರು ದಸರಾ 2021ರ   https://mysoredasara.gov.in/ ವೆಬ್‌ಸೈಟ್‌ ಅನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಮೈಸೂರು ಅರಮನೆ ಆಡಳಿತ ಮಂಡಳಿ ಸಭಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿದರು.

ದಸರಾ : ಪಿರಂಗಿ ದಳದಿಂದ ಕುಶಾಲತೋಪು ಸಿಡಿತ- ಮೊದಲು ಗಲಿಬಿಲಿ ನಂತರ ಜಗ್ಗದೇ ನಿಂತ ಗಜಪಡೆ!

ಈ ವೇಳೆ ಎಸ್‌.ಟಿ. ಸೋಮಶೇಖರ್‌ ಮಾತನಾಡಿ, ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿಯೂ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ದಸರಾ ಕಾರ್ಯಕ್ರಮಗಳು ವರ್ಚುವಲ್‌ ಆಗಿ ಪ್ರಸಾರವಾಗಲಿದೆ. ದಸರಾ ವೆಬ್‌ಸೈಟ್‌, ಯೂಟ್ಯೂಬ್, ಫೇಸ್‌ಬುಕ್‌ನಲ್ಲಿ ದಸರಾ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಂಬೂಸವಾರಿ ನೇರಪ್ರಸಾರವಾಗಲಿದೆ ಎಂದರು.

ದಸರಾ ಜಂಬೂಸವಾರಿ, ದಸರಾ ಉದ್ಘಾಟನೆ, ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಮೈಸೂರು ಅರಮನೆ, ಮೃಗಾಲಯ ನಡೆದು ಬಂದ ಹಾದಿ ಸೇರಿದಂತೆ ಸಂಪೂರ್ಣ ವಿವರಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು.

ದಸರಾ ಹಿನ್ನೆಲೆ, ಉದ್ಘಾಟಕರ ಪರಿಚಯ, ಉಪ ಸಮಿತಿಗಳ ವಿವರ, ಕಾರ್ಯಕ್ರಮಗಳ ಪಟ್ಟಿ, ಹಿಂದಿನ ದಸರಾ ಮಹೋತ್ಸವದ ಫೋಟೋ, ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರಲಿದೆ. ದೇಶಿ- ವಿದೇಶಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂಗ್ಲಿಷ್‌ನಲ್ಲಿ ಕೂಡ ಮಾಹಿತಿ ಪ್ರಕಟಿಸಲಾಗಿದೆ ಎಂದರು.

ಕೋವಿಡ್‌ ಮೂರನೇ ಅಲೆ ಹಾಗೂ ಮೈಸೂರು ಜನತೆಯ ಹಿತದೃಷ್ಟಿಯಿಂದ ಸರಳ ಮತ್ತು ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತದೆ. ಎಲ್ಲೂ ಕೂಡ ಕೋವಿಡ್‌ ನಿಯಮಗಳನ್ನು ಮೀರದಂತೆ ಸುರಕ್ಷಿತವಾಗಿ ದಸರಾ ಆಚರಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಶಾಸಕ ಎಲ್. ನಾಗೇಂದ್ರ, ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌, ಮೈಲ್ಯಾಕ್‌ ಅಧ್ಯಕ್ಷ ಎನ್‌.ವಿ. ಫಣೀಶ್‌, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ. ಶಿವಣ್ಣ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ…, ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಜಿಪಂ ಸಿಇಒ ಎ.ಎಂ. ಯೋಗೀಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌. ಮಂಜುನಾಥಸ್ವಾಮಿ, ಡಿಸಿಪಿ ಪ್ರದೀಪ್‌ ಗುಂಟಿ, ಹೆಚ್ಚುವರಿ ಎಸ್ಪಿ ಶಿವಕುಮಾರ್‌, ವೆಬ್‌ಸೈಟ್‌ ನೊಡೆಲ್‌ ಅಧಿಕಾರಿ ಆರ್‌. ರಾಜು, ಜಿಲ್ಲಾ ಎನ್‌ಐಸಿ ಅಧಿಕಾರಿ ಸುದರ್ಶನ್‌, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ ಮೊದಲಾದವರು ಇದ್ದರು.

ಈ ಬಾರಿಯ ದಸರಾ ಉದ್ಘಾಟಕರಾದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಅ.2ರ ಮಧ್ಯಾಹ್ನ 12 ರಿಂದ 12.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಆಹ್ವಾನಿಸಲಾಗುವುದು.

- ಎಸ್‌.ಟಿ. ಸೋಮಶೇಖರ್‌, ಸಹಕಾರ ಸಚಿವ

click me!