Mysuru Dasara 2022: ಜಂಬೂ ಸವಾರಿ ಆನೆ ಲಕ್ಷ್ಮೀಗೆ ಗಂಡು ಮರಿ: ಮೈಸೂರಿನಲ್ಲಿ ಸಂಭ್ರಮ

By Govindaraj S  |  First Published Sep 14, 2022, 10:23 AM IST

ನಾಡಹಬ್ಬ ದಸರಾ ಮೆರವಣಿಗೆಯಲ್ಲಿ ಭಾಗಿಯಾಗಲು ಬಂದಿರುವ ಗಜಪಡೆಯಲ್ಲಿ ಲಕ್ಷ್ಮಿ ಹೆಸರಿನ ಆನೆಯು ಮಂಗಳವಾರ ರಾತ್ರಿ ಗಂಡು ಮರಿಗೆ ಜನ್ಮ ನೀಡಿದೆ. ದಸರಾಗಾಗಿ ಕರೆತಂದಿರುವ ಗಜಪಡೆಯಿಂದ ಲಕ್ಷ್ಮಿ ಆನೆಯನ್ನು ಪ್ರತ್ಯೇಕ ಮಾಡಲಾಗಿದೆ.


ಮೈಸೂರು (ಸೆ.14): ನಾಡಹಬ್ಬ ದಸರಾ ಮೆರವಣಿಗೆಯಲ್ಲಿ ಭಾಗಿಯಾಗಲು ಬಂದಿರುವ ಗಜಪಡೆಯಲ್ಲಿ ಲಕ್ಷ್ಮಿ ಹೆಸರಿನ ಆನೆಯು ಮಂಗಳವಾರ ರಾತ್ರಿ ಗಂಡು ಮರಿಗೆ ಜನ್ಮ ನೀಡಿದೆ. ದಸರಾಗಾಗಿ ಕರೆತಂದಿರುವ ಗಜಪಡೆಯಿಂದ ಲಕ್ಷ್ಮಿ ಆನೆಯನ್ನು ಪ್ರತ್ಯೇಕ ಮಾಡಿದ್ದು, ಅರಮನೆಯ ಆವರಣದಲ್ಲಿಯೇ ನಿರ್ಬಂಧಿತ ಜಾಗದಲ್ಲಿ ಬಿಡಾರ ಮಾಡಲಾಗಿದೆ. ಲಕ್ಷ್ಮಿ ಮತ್ತು ಗಂಡು ಮರಿಯು ಆರೋಗ್ಯದಿಂದ ಇರುವುದಾಗಿ ತಿಳಿದು ಬಂದಿದೆ. ಮುಂದಿನ ಕೆಲವು ದಿನಗಳವರೆಗೂ ಲಕ್ಷ್ಮಿ ಆನೆಗೆ ತೊಂದರೆ ಕೊಡಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಜೊತೆಗೆ ಲಕ್ಷ್ಮಿ ಮತ್ತು ಮರಿಯ ಫೋಟೋವನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ದಸರಾ ಅಂಬಾರಿ ಹೊರುವ ಆನೆ ಅರ್ಜುನನ ತೂಕ 5950 ಕೆಜಿ: ದಸರಾ ಆನೆಗಳ ತೂಕ ಪರೀಕ್ಷೆಯಲ್ಲಿ ಮಾಜಿ ಅಂಬಾರಿ ಆನೆ ಅರ್ಜುನ ಮತ್ತೆ ತಾನೇ ಬಲಶಾಲಿ ಆನೆ ಎಂಬುದನ್ನು ಸಾಬೀತುಪಡಿಸಿದೆ. ಗಜಪಡೆಯ 14 ಆನೆಗಳ ಪೈಕಿ 5950 ಕೆ.ಜಿ. ತೂಕದೊಂದಿಗೆ ಅರ್ಜುನ ಆನೆಯು ಮೊದಲ ಸ್ಥಾನ ಪಡೆದಿದೆ.

Tap to resize

Latest Videos

Mysore Dasara 2022: ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆಗೆ ದಿನಾಂಕ ನಿಗದಿ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಮೊದಲ ತಂಡದಲ್ಲಿ 9 ಹಾಗೂ 2ನೇ ತಂಡದಲ್ಲಿ 5 ಸೇರಿದಂತೆ ಒಟ್ಟು 14 ಆನೆಗಳು ಎರಡು ತಂಡಗಳಲ್ಲಿ ಆಗಮಿಸಿ ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿವೆ. ಈ ಎಲ್ಲಾ 14 ಆನೆಗಳನ್ನು ನಡಿಗೆಯಲ್ಲಿ ಅರಮನೆಯಿಂದ ಧನ್ವಂತ್ರಿ ರಸ್ತೆಯಲ್ಲಿನ ವೇ ಬ್ರಿಡ್ಜ್‌ನಲ್ಲಿ ತೂಕ ಹಾಕುವ ಪ್ರಕ್ರಿಯೆ ನಡೆಯಿತು. ಈ ಪ್ರಕ್ರಿಯೆಯಲ್ಲಿ ಅರ್ಜನ ಆನೆಯೇ ಮತ್ತೆ ತಾನೇ ಬಲಶಾಲಿ ಎಂಬುದನ್ನು ನಿರೂಪಿಸಿತು.

ಆನೆಗಳ ತೂಕ: ಅರ್ಜುನ- 5950 ಕೆ.ಜಿ, ಗೋಪಾಲಸ್ವಾಮಿ- 5460 ಕೆ.ಜಿ, ಅಭಿಮನ್ಯು- 5000, ಧನಂಜಯ- 4890, ಸುಗ್ರೀವ- 4785, ಗೋಪಿ- 4670, ಶ್ರೀರಾಮ- 4475, ಮಹೇಂದ್ರ- 4450, ಭೀಮ- 4345, ಪಾರ್ಥಸಾರಥಿ- 3445, ಕಾವೇರಿ- 3245, ಚೈತ್ರ- 3235, ಲಕ್ಷ್ಮೀ- 3150, ವಿಜಯ- 2760 ಕೆ.ಜಿ. ತೂಕವಿದೆ.

ಮೊದಲ ಕುಶಾಲತೋಪು ತಾಲೀಮು ಯಶಸ್ವಿ: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಗೆ ಸಿದ್ಧವಾಗುತ್ತಿರುವ ಗಜಪಡೆಯು ಕುಶಾಲತೋಪು ಸಿಡಿತ ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ಈ ತಾಲೀಮಿನಲ್ಲಿ 14 ದಸರಾ ಆನೆಗಳು ಮತ್ತು ಅಶ್ವರೋಹಿದಳದ 43 ಕುದುರೆಗಳು ಭಾಗಿಯಾಗಿದ್ದವು. ಕುಶಾಲತೋಪು ಸಿಡಿಯುತ್ತಿದ್ದಂತೆ ಇದೇ ಮೊದಲ ಬಾರಿಗೆ ದಸರೆಗೆ ಆಗಮಿಸಿರುವ ಆನೆಗಳು ಗಲಿಬಿಲಿಗೊಂಡವು. ನಂತರ ಪದೇ ಪದೇ ಶಬ್ದ ಕೇಳಿಸುತ್ತಿದ್ದರಿಂದ ಮುಂದೆ ಮುಂದೆ ಸಾಗಿ ಬಂದವು. ಅಶ್ವರೋಹಿದಳದ ಕೆಲವು ಕುದುರೆಗಳು ಗಲಬಿಲಿಗೊಂಡು ಓಡಿದವು. ಉಳಿದಂತೆ ಮೊದಲ ಕುಶಾಲತೋಪು ತಾಲೀಮು ಭಾಗಶಃ ಯಶಸ್ವಿಗೊಂಡಿತು.

ಮೈಸೂರು ಅರಮನೆ ವರಹಾ ಗೇಟ್‌ ಪಕ್ಕದ ಕೋಟೆ ಮಾರಮ್ಮ ದೇವಸ್ಥಾನ ಬಳಿಯ ಪಾರ್ಕಿಂಗ್‌ ಸ್ಥಳದಲ್ಲಿ 7 ಫಿರಂಗಿಗಳನ್ನು ಬಳಸಿ 21 ಸುತ್ತು ಕುಶಾಲತೋಪುಗಳನ್ನು ಸಿಎಆರ್‌ನ ಫಿರಂಗಿ ದಳದ ನುರಿತ ಸಿಬ್ಬಂದಿ ಸಿಡಿಸಿದರು. ತಲಾ 7 ರಂತೆ ಮೂರು ಹಂತದಲ್ಲಿ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಲಾಯಿತು. ಈ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಮಾಜಿ ಅಂಬಾರಿ ಆನೆ ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಭೀಮ, ಮಹೇಂದ್ರ, ಗೋಪಿ, ಸುಗ್ರೀವ, ಶ್ರೀರಾಮ, ಪಾರ್ಥಸಾರಥಿ, ಕಾವೇರಿ, ಚೈತ್ರಾ, ಲಕ್ಷ್ಮೀ ಮತ್ತು ವಿಜಯ ಆನೆಗಳು ಹಾಗೂ ಅಶ್ವರೋಹಿದಳದ ಕುದುರೆಗಳು ಪಾಲ್ಗೊಂಡಿದ್ದವು.

ಕುಶಾಲತೋಪು ಸಿಡಿಯುತ್ತಿದದಂತೆ ಇದೇ ಮೊದಲ ಬಾರಿಗೆ ದಸರೆಗೆ ಬಂದಿರುವ ಆನೆಯು ಗಲಿಬಿಲಿಗೊಂಡವು. ಅಲ್ಲದೆ, ಧನಂಜಯ ಆನೆ ಸಹ ಸ್ವಲ್ಪ ಮಟ್ಟಿಗೆ ಗಲಿಬಿಲಿ ಆಯಿತು. ಮಾವುತರು ಮತ್ತು ಕಾವಾಡಿಗಳು ಆನೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಪದೇ ಪದೇ ಶಬ್ದ ಬರುತ್ತಿದ್ದರಿಂದ ಗಲಿಬಿಲಿಗೊಂಡಿದ್ದ ಆನೆಗಳು ಸುಮ್ಮನೇ ನಿಂತವು. ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸಿರುವ ಸುಗ್ರೀವ, ಪಾರ್ಥಸಾರಥಿ, ಶ್ರೀರಾಮ ಅನೆಗಳು ಸಿಡಿಮದ್ದಿನ ಭಾರೀ ಶಬ್ದಕ್ಕೆ ಬೆದರಿದವು. ಮುಂಜಾಗ್ರತಾ ಕ್ರಮವಾಗಿ ಈ ಆನೆಗಳ ಕಾಲಿಗೆ ಸರಪಳಿ ಕಟ್ಟಿ ಪ್ರತ್ಯೇಕವಾಗಿ ನಿಲ್ಲಿಸಲಾಗಿತ್ತು. ಮೊದಲ ಸುತ್ತಿನ ಸಿಡಿಮದ್ದು ಸಿಡಿಸುತ್ತಿದ್ದಂತೆ, ಬೆದರಿ ಹಿಂದೆ ಮುಂದೆ ಚಲಿಸಲಾರಂಭಿಸಿದವು. 

Mysuru Dasara 2022 : ಗಜಪಡೆಗಳಿಗೆ ಸಿಡಿಮದ್ದು ತಾಲೀಮಿನ‌ ಹೈಲೈಟ್ಸ್

ಈ ವೇಳೆ ಮಾವುತರು ಆನೆಗಳನ್ನು ನಿಯಂತ್ರಿಸಿದರು. ಕಳೆದ ಎರಡು ವರ್ಷಗಳಿಂದ ಭಾಗವಹಿಸುತ್ತಿರುವ ಧನಂಜಯ ಈ ಬಾರಿಯೂ ಭಾರೀ ಶಬ್ದಕ್ಕೆ ಬೆದರಿತು. ತಾಲೀಮಿನಲ್ಲಿ ಎಂದಿನಂತೆ ಅಂಬಾರಿ ಆನೆ ಅಭಿಮನ್ಯು, ಮಾಜಿ ಅಂಬಾರಿ ಆನೆ ಅರ್ಜುನ ಬೆದರದೆ ಧೈರ್ಯ ಪ್ರದರ್ಶಿಸಿದವು. ಸಿಡಿಮದ್ದು ಸಿಡಿಸುತ್ತಿದ್ದಂತೆ ಹೊಮ್ಮಿದ ಭಾರೀ ಶಬ್ದಕ್ಕೆ ಎದೆ ಝಲ್‌ ಎಂದರೂ ಈ ಆನೆಗಳು ಬೆಚ್ಚಲಿಲ್ಲ. ಇದೇ ಮೊದಲ ಬಾರಿಗೆ ದಸರೆಗೆ ಬಂದಿರುವ ಮಹೇಂದ್ರ ಆನೆ ಅಂಜದೆ ನಿಲ್ಲುವ ಮೂಲಕ ಭರವಸೆ ಮೂಡಿಸಿತು. ಅಂಬಾರಿ ಆನೆ ಅಭಿಮನ್ಯು ಸೇರಿದಂತೆ ಉಳಿದ ಆನೆಗಳು ಜಗ್ಗದೇ ನಿಲ್ಲುವ ಮೂಲಕ ದಸರೆಗೆ ಸಿದ್ಧವಾಗಿರುವ ಸಂದೇಶ ರವಾನಿಸಿದವು.

click me!