Mysuru Dasara: ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಸಿಗಲಿದೆ ವಿಶೇಷ ಉಡುಗೊರೆ; ಏನಿದು ಗಿಫ್ಟ್?

Published : Oct 21, 2026, 07:16 AM IST
DK Shivakumar

ಸಾರಾಂಶ

ಮೈಸೂರು ದಸರಾದ ಜಂಬೂಸವಾರಿಗೂ ಮುನ್ನ ನಡೆಯುವ ನಂದಿ ಧ್ವಜ ಪೂಜೆಯ ಬಳಿಕ ಗಣ್ಯರಿಗೆ ವಿಶೇಷ ಉಡುಗೊರೆ ನೀಡಲು ಶಿಲ್ಪಿ ರಾಜೇಶ್ ಕುಟುಂಬ ಸಜ್ಜಾಗಿದೆ. ಚಿನ್ನದ ಅಂಬಾರಿ ಹೊತ್ತ ಪ್ರಶಾಂತ ಆನೆಗೆ ಕುಂಕಿ ಆನೆಗಳಾದ ಕಾವೇರಿ ಮತ್ತು ರೂಪ ಬೆಂಗಾವಲಾಗಿ ಸಾಗುವ ಮೂಲಕ ಅದ್ದೂರಿ ಜಂಬೂಸವಾರಿಗೆ ಚಾಲನೆ ಸಿಗಲಿದೆ.

ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಸಾಂಸ್ಕೃತಿಕ ನಗರಿ ಸಂಪೂರ್ಣವಾಗಿ ಸಜ್ಜಾಗಿದೆ. ಜಂಬೂಸವಾರಿಗೂ ಮುನ್ನ ನಡೆಯುವ ನಂದಿ ಧ್ವಜ ಪೂಜೆಯ ನಂತರ, ನಂದಿಕಂಬಕ್ಕೆ ಪೂಜೆ ಸಲ್ಲಿಸಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರಿಗೆ ವಿಶೇಷ ಉಡುಗೊರೆಗಳನ್ನು ನೀಡಲು ಮೈಸೂರಿನ ಖ್ಯಾತ ಶಿಲ್ಪಿ ರಾಜೇಶ್ ಮತ್ತು ಅವರ ಕುಟುಂಬದವರು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರತಿ ವರ್ಷವೂ ನಂದಿಪೂಜೆಯ ಬಳಿಕ ಮುಖ್ಯಮಂತ್ರಿಗಳಿಗೆ ವಿಶೇಷ ಉಡುಗೊರೆ ನೀಡುವ ಪರಂಪರೆಯನ್ನು ಈ ಕುಟುಂಬವು ಮುಂದುವರಿಸಿಕೊಂಡು ಬಂದಿದೆ.

ಮುಖ್ಯಮಂತ್ರಿಗಳಿಗೆ ವಿಶೇಷ ಉಡುಗೊರೆ

ಈ ಬಾರಿ ಪಂಚಲೋಹದಲ್ಲಿ ಸಿದ್ಧವಾಗಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರ ಆರಾಧ್ಯ ದೈವ 'ಗಂಗಾಧರ ಅಜ್ಜಯ್ಯ'ನ ವಿಗ್ರಹವನ್ನು ಅವರಿಗೆ ಕಾಣಿಕೆಯಾಗಿ ನೀಡಲಾಗುತ್ತದೆ. ಹಾಗೆಯೇ ಶಾಂತಿಧೂತನಾದ ಬುದ್ಧನ ವಿಗ್ರಹವನ್ನು ಡಿಸಿಎಂ ಜಿ. ಪರಮೇಶ್ವರ್ ಅವರಿಗಾಗಿ ಅತ್ಯಂತ ಕಲಾತ್ಮಕವಾಗಿ ಕೆತ್ತನೆ ಮಾಡಲಾಗಿದೆ. ಇದರೊಂದಿಗೆ, ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿರುವ ಕನಕಾಚಲಪತಿ ದೇವಸ್ಥಾನದ ಕನಕಾಚಲಪತಿ ದೇವರ ಮೂರ್ತಿಯನ್ನು ಸಚಿವ ಶಿವರಾಜ್ ತಂಗಡಗಿ ಅವರಿಗೆ ನೀಡಲಾಗುತ್ತಿದ್ದು, ಇದು ಅವರ ಮನೆ ದೇವರಾಗಿದೆ. ನಂದಿ ಪೂಜೆ ನೆರವೇರಿದ ಬಳಿಕ ಶಿಲ್ಪಿ ರಾಜೇಶ್ ಅವರು ಈ ಕಲಾತ್ಮಕ ವಿಗ್ರಹಗಳನ್ನು ಜನಪ್ರತಿನಿಧಿಗಳಿಗೆ ಹಸ್ತಾಂತರಿಸಲಿದ್ದಾರೆ.

'ಪ್ರಶಾಂತ' ನೇತೃತ್ವದ ಗಜಪಡೆ

ಜಂಬೂಸವಾರಿಯನ್ನು ಯಶಸ್ವಿಗೊಳಿಸಲು ಕ್ಯಾಪ್ಟನ್ 'ಪ್ರಶಾಂತ' ನೇತೃತ್ವದ ಗಜಪಡೆ ಸಂಪೂರ್ಣವಾಗಿ ಸಜ್ಜಾಗಿದೆ. ಈ ಬಾರಿ ಒಟ್ಟು 12 ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದು, 18 ವರ್ಷಗಳ ದಸರಾ ಅನುಭವ ಹೊಂದಿರುವ ಮತ್ತು ಅತ್ಯಂತ ಶಾಂತ ಸ್ವಭಾವದ ಪ್ರಶಾಂತ ಆನೆ ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಈತನಿಗೆ ಕಾವೇರಿ ಮತ್ತು ರೂಪ ಆನೆಗಳು ಕುಂಕಿ ಆನೆಗಳಾಗಿ ಸಾಥ್ ನೀಡಲಿವೆ.

ಜಂಬೂಸವಾರಿಯನ್ನು ಯಾವುದೇ ಆತಂಕವಿಲ್ಲದೆ ಯಶಸ್ವಿಯಾಗಿ ನೆರವೇರಿಸುವ ವಿಶ್ವಾಸವನ್ನು ಡಿಸಿಎಫ್ ಪ್ರಭುಗೌಡ ವ್ಯಕ್ತಪಡಿಸಿದ್ದು, 5.5 ಕಿಲೋಮೀಟರ್ ರಾಜಮಾರ್ಗವನ್ನು ಪ್ರಶಾಂತ ನಿರಾಯಾಸವಾಗಿ ತಲುಪಲಿದ್ದಾನೆ ಹಾಗೂ ಮೆರವಣಿಗೆಯ ವೇಳೆ ಆನೆಗಳಿಗೆ ನೀಡಲು ವಿಶೇಷ ಆಹಾರವನ್ನೂ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಂಬೂಸವಾರಿಯ ಸಾಲಿನಲ್ಲಿ, ಮಾಜಿ ಕ್ಯಾಪ್ಟನ್ ಅಭಿಮನ್ಯು 'ನಿಶಾನೆ ಆನೆ'ಯಾಗಿ ಗಜಪಡೆಯನ್ನು ಮುನ್ನಡೆಸಲಿದ್ದು, ಪುಷ್ಪಾರ್ಚನೆ ನಡೆಯುವ ಸ್ಥಳದಲ್ಲೇ ಆತನಿಗೆ ವಿಶೇಷ ಬೀಳ್ಕೊಡುಗೆ ಗೌರವ ಸಲ್ಲಿಸಲಾಗುತ್ತದೆ. ಅಭಿಮನ್ಯುವಿನ ಹಿಂದೆ 'ನೌಪತ್ ಆನೆ'ಯಾಗಿ ಗೋಪಿ ಸಾಗಲಿದ್ದು, ಮೊದಲ ಸಾಲಾನೆಗಳಾಗಿ ಮಹೇಂದ್ರ, ಶ್ರೀರಾಮ ಹಾಗೂ ಶ್ರೀಕಂಠ ಹೆಜ್ಜೆ ಹಾಕಲಿವೆ. ಎರಡನೇ ಸಾಲಿನಲ್ಲಿ ಚೈತ್ರ ಮತ್ತು ಲಕ್ಷ್ಮಿ ಆನೆಗಳು, ಮೂರನೇ ಸಾಲಿನಲ್ಲಿ ಸುಗ್ರೀವ ಹಾಗೂ ಏಕಲವ್ಯ ಆನೆಗಳು ಸಾಗಲಿವೆ.

ಕೊನೆಯಲ್ಲಿ ಚಿನ್ನದ ಅಂಬಾರಿ ಹೊತ್ತ ಪ್ರಶಾಂತ ಆನೆಗೆ ಕುಂಕಿ ಆನೆಗಳಾದ ಕಾವೇರಿ ಮತ್ತು ರೂಪ ಬೆಂಗಾವಲಾಗಿ ಸಾಗುವ ಮೂಲಕ ಅದ್ದೂರಿ ಜಂಬೂಸವಾರಿಗೆ ಚಾಲನೆ ಸಿಗಲಿದೆ.

ಸಂಜೆ 4:10 ರಿಂದ 4:35 ರವರೆಗೆ ಸಲ್ಲುವ ಮೀನಾ ಲಗ್ನದಲ್ಲಿ ಮೆರವಣಿಗೆಗೆ ಚಾಲನೆ

ಜಂಬೂಸವಾರಿಗೂ ಮುನ್ನ ಮಧ್ಯಾಹ್ನ 1:36 ರಿಂದ 1:56 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಂದಿಧ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ. ತದನಂತರ ಸಂಜೆ 4:10 ರಿಂದ 4:35 ರವರೆಗೆ ಸಲ್ಲುವ ಮೀನಾ ಲಗ್ನದಲ್ಲಿ, 750 ಕೆಜಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯದಶಮಿ ಮೆರವಣಿಗೆಗೆ ಅಧಿಕೃತ ಚಾಲನೆ ಸಿಗಲಿದೆ.

ಈ ಶುಭ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹಾಗೂ ಇತರ ಗಣ್ಯಾತಿಗಣ್ಯರು ಭಾಗವಹಿಸಿ ಪುಷ್ಪಾರ್ಚನೆ ಮಾಡಲಿದ್ದಾರೆ.

PREV
Read more Articles on
click me!

Recommended Stories

ಗೂಗಲ್ ಮ್ಯಾಪ್ ನಂಬಿ ಕಾಡಿನಲ್ಲಿ ಹಳ್ಳಕ್ಕೆ ಬಿದ್ದ ಕಾರು: ಕಾಡಾನೆಗಳ ಭಯದಲ್ಲೇ ರಾತ್ರಿ ಕಳೆದ ಬೆಂಗಳೂರಿನ ಟೆಕ್ಕಿಗಳು!
ತುಮಕೂರು: ಅಂದು ಕೆನ್ನೆ ಹಿಂಡಿದ, ಇಂದು ಹೆಗಲ ಮೇಲೆ ಕೈಹಾಕಿದ: ರಚಿತಾ ರಾಮ್‌ಗೆ ಮುಗಿಯದ ಫ್ಯಾನ್ಸ್‌ ತಾಪತ್ರಯ