ತುಮಕೂರು: ಅಂದು ಕೆನ್ನೆ ಹಿಂಡಿದ, ಇಂದು ಹೆಗಲ ಮೇಲೆ ಕೈಹಾಕಿದ: ರಚಿತಾ ರಾಮ್‌ಗೆ ಮುಗಿಯದ ಫ್ಯಾನ್ಸ್‌ ತಾಪತ್ರಯ

Published : Oct 20, 2026, 08:26 PM IST
Rachita Ram tumkur

ಸಾರಾಂಶ

ತುಮಕೂರು ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಅವರು ಅಧಿಕಾರಿಗಳೊಂದಿಗೆ ರಾಂಪ್ ವಾಕ್ ಮಾಡುತ್ತಿದ್ದಾಗ ಯುವಕನೊಬ್ಬ ಭದ್ರತೆ ಮೀರಿ ವೇದಿಕೆ ಏರಿದ್ದಾನೆ. ಸೆಲ್ಫಿ ನೆಪದಲ್ಲಿ ಆತ ನಟಿಯ ಹೆಗಲ ಮೇಲೆ ಕೈಹಾಕಿ ಎಳೆದಾಡಿದ್ದು, ಇದರಿಂದ ನಟಿ ತೀವ್ರ ಆತಂಕಕ್ಕೊಳಗಾದರು.

ತುಮಕೂರು (ಅ.20): ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿರುವ 'ತುಮಕೂರು ದಸರಾ' ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಕನ್ನಡ ಚಿತ್ರರಂಗದ ಜನಪ್ರಿಯ ನಟಿ, 'ಡಿಂಪಲ್ ಕ್ವೀನ್' ರಚಿತಾ ರಾಮ್ ಅವರಿಗೆ ಅಭಿಮಾನಿಯೊಬ್ಬನ ಹುಚ್ಚಾಟದಿಂದಾಗಿ ತೀವ್ರ ಮುಜುಗರ ಹಾಗೂ ಆತಂಕ ಎದುರಾದ ಘಟನೆ ಸೋಮವಾರ ರಾತ್ರಿ ಜರುಗಿದೆ. ದಸರಾ ಸಂಭ್ರಮದ ಭಾಗವಾಗಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಭಾಗವಹಿಸಿದ್ದರು. ಈ ವೇಳೆ ತುಮಕೂರು ಜಿಲ್ಲಾಧಿಕಾರಿ (DC) ಶುಭಕಲ್ಯಾಣ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಅಶ್ವಿಜಾ ಅವರೊಂದಿಗೆ ರಚಿತಾ ರಾಮ್ ಅವರು ರಾಂಪ್‌ ವಾಕ್ ನಡೆಸಿ ಅಭಿಮಾನಿಗಳನ್ನು ರಂಜಿಸುತ್ತಿದ್ದರು.

ಸೆಲ್ಫಿಗಾಗಿ ಹೆಗಲ ಮೇಲೆ ಕೈಹಾಕಿ ಎಳೆದಾಡಿದ ಯುವಕ!

ಅಭಿಮಾನಿಗಳ ಹರ್ಷೋದ್ಗಾರದ ನಡುವೆ ರಾಂಪ್‌ ವಾಕ್ ಟ್ರ್ಯಾಕ್‌ನಲ್ಲಿ ಗಂಭೀರವಾಗಿ ಹೆಜ್ಜೆ ಹಾಕುತ್ತಿದ್ದಾಗ, ಅಭಿಮಾನಿಗಳ ಗುಂಪಿನಲ್ಲಿದ್ದ ಯುವಕನೊಬ್ಬ ದಿಢೀರನೆ ಭದ್ರತಾ ತಡೆಯನ್ನು ಮೀರಿ ರಾಂಪ್‌ ವಾಕ್ ಟ್ರ್ಯಾಕ್ ಏರಿದ್ದಾನೆ. ನೇರವಾಗಿ ರಚಿತಾ ರಾಮ್ ಅವರ ಬಳಿ ಧಾವಿಸಿದ ಆತ, ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ನಟಿಯ ಹೆಗಲ ಮೇಲೆ ಕೈಹಾಕಲು ಯತ್ನಿಸಿದ್ದಾನೆ. ಆ ಕ್ಷಣದಲ್ಲೇ ಆತ ರಚಿತಾ ರಾಮ್ ಅವರನ್ನು ತನ್ನತ್ತ ಎಳೆದಾಡಿದ್ದು, ಇದರಿಂದ ಬೆಚ್ಚಿಬಿದ್ದ ನಟಿ ಹಾಗೂ ಅಧಿಕಾರಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಕೂಡಲೇ ಯುವಕನನ್ನು ವಶಕ್ಕೆ ಪಡೆದ ಪೊಲೀಸರು

ಸಂದರ್ಭದ ಗಂಭೀರತೆಯನ್ನು ಅರಿತ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ರಚಿತಾ ರಾಮ್ ಅವರನ್ನು ಎಳೆದಾಡುತ್ತಿದ್ದ ಯುವಕನನ್ನು ಬಿಡಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದಸರಾದಂತಹ ಭಾರಿ ಜನಸ್ತೋಮ ಸೇರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ, ಜಿಲ್ಲೆಯ ಉನ್ನತ ಅಧಿಕಾರಿಗಳು ಹಾಗೂ ಪ್ರಮುಖ ನಟಿ ಜತೆಯಲ್ಲಿರುವಾಗಲೇ ಈ ರೀತಿಯ ಭದ್ರತಾ ಲೋಪ ಹಾಗೂ ಅಭಿಮಾನಿಯ ಅತಿರೇಕದ ವರ್ತನೆ ಕಂಡು ಸಾರ್ವಜನಿಕರು ಹಾಗೂ ಸಂಘಟಕರು ದಿಗ್ಭ್ರಮೆಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.

PREV
Read more Articles on
click me!

Recommended Stories

ಇದಕ್ಕೇನಂತೀರಿ..? ರಸ್ತೆಯ ಮಧ್ಯದಲ್ಲಿ ವಿದ್ಯುತ್ ಕಂಬ ಬಿಟ್ಟು ಡಾಂಬರೀಕರಣ ಮಾಡಿದ ಬಳ್ಳಾರಿ ಇಂಜಿನಿಯರ್ಸ್!
ಮಂಡ್ಯದಲ್ಲಿ ಆಯುಧ ಪೂಜೆ ವೇಳೆ ಘೋರ ದುರಂತ: ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ ಬಾಲಕ ದಾರುಣ ಸಾವು