
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಸಂಭ್ರಮಕ್ಕೆ ಅರಮನೆ ನಗರಿ ಸಜ್ಜಾಗುತ್ತಿದ್ದು, ರಾಜಮನೆತನದ ಸಂಪ್ರದಾಯಗಳಂತೆ ಧಾರ್ಮಿಕ ವಿಧಿವಿಧಾನಗಳಿಗೆ ಪ್ರಮುಖ ಆನೆಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಬಾರಿಯ 'ಶ್ರೀಕಂಠ' ಆನೆಯನ್ನು ಪಟ್ಟದ ಆನೆಯಾಗಿ ಹಾಗೂ 'ಏಕಲವ್ಯ' ಆನೆಯನ್ನು ನಿಶಾನೆ ಆನೆಯಾಗಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಅಧಿಕೃತವಾಗಿ ಆಯ್ಕೆ ಮಾಡಿದ್ದಾರೆ. ವಿಶೇಷವೆಂದರೆ, ಶ್ರೀಕಂಠ ಆನೆಯು ಅನುಕ್ರಮವಾಗಿ ಎರಡನೇ ಬಾರಿ ಪಟ್ಟದ ಆನೆಯಾಗಿ ಸೇವೆ ಸಲ್ಲಿಸುವ ಗೌರವಕ್ಕೆ ಪಾತ್ರವಾಗಿದೆ. ಕಳೆದ ಬಾರಿಯ ದಸರಾ ಮಹೋತ್ಸವದಲ್ಲೂ ಶ್ರೀಕಂಠನೇ ಪಟ್ಟದ ಆನೆಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದನು.
ಈ ವರ್ಷದ ಸಾಂಸ್ಕೃತಿಕ ವೈಭವದ ದಸರಾ ಮಹೋತ್ಸವವು 2026ರ ಅಕ್ಟೋಬರ್ 11 ರಿಂದ ಅಕ್ಟೋಬರ್ 21 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಅಕ್ಟೋಬರ್ 21 ರಂದು ಜಗತ್ಪ್ರಸಿದ್ಧ ವಿಜಯದಶಮಿ ಮೆರವಣಿಗೆ ಹಾಗೂ ಜಂಬೂಸವಾರಿ ವೈಭವಯುತವಾಗಿ ನಡೆಯಲಿದೆ.
ಈ ಬಾರಿಯ ದಸರಾ ಮಹೋತ್ಸವಕ್ಕೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ರೋಮಾಂಚಕ ಏರ್ ಶೋ (Air Show), ವರ್ಣರಂಜಿತ ಡ್ರೋನ್ ಶೋ, ವಿಂಟೇಜ್ ಕಾರ್ ರ‍್ಯಾಲಿ, ಚಿತ್ರಸಂತೆ ಮತ್ತು ಫ್ಲೀ ಮಾರ್ಕೆಟ್ ಸೇರಿದಂತೆ ಹಲವಾರು ನೂತನ ಕಾರ್ಯಕ್ರಮ ಆಯೋಜಿಸಲು ಸಿದ್ಧತೆಗಳು ಬಿರುಸಿನಿಂದ ಸಾಗಿವೆ.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಯ ತೂಕ ತಪಾಸಣೆಯನ್ನು ಮೈಸೂರಿನ ಖಾಸಗಿ ವೇ-ಬ್ರಿಡ್ಜ್‌ನಲ್ಲಿ ನಡೆಸಲಾಯಿತು. ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ 9 ಆನೆಗಳನ್ನು ಹಿಮ್ಮೆಟ್ಟಿಸಿದ 57 ವರ್ಷದ ಶ್ರೀಕಂಠ, ಬರೋಬ್ಬರಿ 5,790 ಕೆ.ಜಿ. ತೂಗುವ ಮೂಲಕ ಗಜಪಡೆಯಲ್ಲೇ ಅತಿ ಹೆಚ್ಚು ತೂಕ ಹೊಂದಿರುವ ಬಲಿಷ್ಠ ಆನೆಯಾಗಿ ಹೊರಹೊಮ್ಮಿದ್ದಾನೆ.
ತೂಕದ ಪಟ್ಟಿಯಲ್ಲಿ 41 ವರ್ಷದ ಏಕಲವ್ಯ ಆನೆಯು 5,600 ಕೆ.ಜಿ. ತೂಕದೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ನಂತರದ ಸ್ಥಾನಗಳನ್ನು ಧನಂಜಯ (5,530 ಕೆ.ಜಿ.) ಮತ್ತು ಮಹೇಂದ್ರ (5,490 ಕೆ.ಜಿ.) ಆನೆಗಳು ಪಡೆದುಕೊಂಡವು. ಇನ್ನು ಹೆಣ್ಣಾನೆಗಳ ಪೈಕಿ 54 ವರ್ಷದ ಲಕ್ಷ್ಮಿ (3,990 ಕೆ.ಜಿ.) 8ನೇ ಸ್ಥಾನ ಹಾಗೂ 46 ವರ್ಷದ ಕಾವೇರಿ (3,075 ಕೆ.ಜಿ.) 9ನೇ ಸ್ಥಾನಕ್ಕೆ ತೃಪ್ತಿಪಟ್ಟವು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಅಂಗವಾಗಿ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಜ್ಯದ ಎಲ್ಲ ಜಿಲ್ಲೆಗಳ ಜಾನಪದ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಿದ್ದು, ಸೆ. 16 ಅರ್ಜಿ ಸಲ್ಲಿಸಲು ಕೊನೆಯ ದಿನ ಎಂದು ದಸರಾ-2026 ಮೆರವಣಿಗೆ ಮತ್ತು ಸ್ತಬ್ಧಚಿತ್ರ ಉಪಸಮಿತಿಯ ಸಮನ್ವಯಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಡಿ.ಸುದರ್ಶನ್ ಹೇಳಿದ್ದಾರೆ.
ಮೆರವಣಿಗೆಯಲ್ಲಿ ಭಾಗವಹಿಸಲು ಬಯಸುವ ಕಲಾತಂಡಗಳು ಅರ್ಜಿ ಸಲ್ಲಿಸುವಾಗ ತಮ್ಮ ತಂಡದ ಉತ್ತಮ ಭಾವಚಿತ್ರದೊಂದಿಗೆ ತಂಡದ ಸದಸ್ಯರ ವಿವರ, ಅಂಚೆ ವಿಳಾಸ ಮತ್ತು ತಂಡದ ಮುಖ್ಯಸ್ಮರ ಮೊಬೈಲ್, ದೂರವಾಣಿ ಸಂಖ್ಯೆ ವಿವರವನ್ನು ಒಳಗೊಂಡಂತೆ ಅರ್ಜಿಯನ್ನು ಸಮನ್ವಯಾಧಿಕಾರಿಗಳು, ದಸರಾ ಮೆರವಣಿಗೆ ಮತ್ತು ಸ್ತಬ್ದಚಿತ್ರ ಉಪಸಮಿತಿ ಹಾಗೂ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕಲಾಮಂದಿರ, ವಿನೋಬಾ ರಸ್ತೆ, ಮೈಸೂರು - 570005 ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.