ಜಂಕ್ಷನ್‌ ಬಳಿ 103 ಬಸ್‌ ಸ್ಟಾಪ್‌ ಸ್ಥಳಾಂತರ, ಶೀಘ್ರದಲ್ಲೇ ಬಿಎಂಟಿಸಿ-ಮೆಟ್ರೋ ಎರಡಕ್ಕೂ ಒಂದೇ ಕಾರ್ಡ್‌

Published : Sep 04, 2026, 08:09 AM IST
BMTC And Namma Metro Card

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆಯಲ್ಲಿ ನಗರದ 103 ಬಸ್ ನಿಲುಗಡೆ ತಾಣಗಳ ಸ್ಥಳಾಂತರ, ಬಿಎಂಟಿಸಿ-ಮೆಟ್ರೋಗೆ ಏಕೀಕೃತ ಮೊಬಿಲಿಟಿ ಕಾರ್ಡ್ ಜಾರಿ ಮತ್ತು ಅಗ್ನಿಶಾಮಕ ಇಲಾಖೆಗೆ ಹೆಚ್ಚಿನ ಸೌಲಭ್ಯ ಒದಗಿಸುವ ಕುರಿತು ಚರ್ಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ವಿವಿಧ ಜಂಕ್ಷನ್‌ಗಳ ಬಳಿ ಇರುವ 103 ಬಸ್ ನಿಲುಗಡೆ ತಾಣಗಳ ಸ್ಥಳಾಂತರ, ಕೊಳಚೆ ನೀರು, ಮಳೆ ನೀರಿನ ಜೊತೆ ಸೇರಿ ರಸ್ತೆ ಹಾಗೂ ಮನೆಗಳಿಗೆ ನುಗ್ಗದಂತೆ ತಡೆಗೆ ಕ್ರಮ, ಬಿಎಂಟಿಸಿ-ಮೆಟ್ರೋ ಎರಡಕ್ಕೂ ಕಾಮನ್ ಮೊಬಿಲಿಟಿ ಕಾರ್ಡ್ ಶೀಘ್ರ, ಅಗ್ನಿಶಾಮಕ ಇಲಾಖೆಗೆ ಹೆಚ್ಚಿನ ಸೌಲಭ್ಯ, ಕಾವೇರಿ ನೀರಿನ ಸಮರ್ಪಕ ಬಳಕೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಗುರುವಾರ ರಾತ್ರಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂರನೇ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ.

ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಬಿಎಎ ಮುಖ್ಯ ಆಯುಕ್ತ ಮಹೇಶ್ವರರಾವ್, ನಗರದ ವಿವಿಧ ಜಂಕ್ಷನ್ ಗಳ ಸಮೀಪವೇ ಇರುವ 103 ಬಸ್ ನಿಲುಗಡೆ ತಾಣಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ನಗರ ಸಂಚಾರ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ. ಈ ನಿಲ್ದಾಣಗಳನ್ನು ತೆರವುಗೊಳಿಸಿದ ನಂತರ ಹೊಸದಾಗಿ ಬೇರೆ ಸ್ಥಳದಲ್ಲಿ ನಿರ್ಮಿಸಲು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ(ಪಿಪಿಪಿ)ಕ್ಕಾಗಿ ಮುಂದಿನ ಕ್ರಮವಹಿಸಲು ತಿಳಿಸಲಾಗಿದೆ ಎಂದರು.

ಅಗ್ನಿಶಾಮಕದಳ ಪೈಪ್ ಲೈನ್ ಅಳವಡಿಸಲು ನಗರದ 55 ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ಎಲ್ಲ ಪಾಲಿಕೆಗಳು ಅನುಮತಿ ನೀಡಿ ಜಾರಿಗೆ ತರಬೇಕು ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಇವುಗಳನ್ನು ಹಂತಹಂತವಾಗಿ ಅಳವಡಿಸಲು ಆಯಾ ಪಾಲಿಕೆಗಳಿಗೆ ಸೂಚಿಸಲಾಗಿದೆ ಎಂದರು.

ಬಿಎಂಟಿಸಿ-ಮೆಟ್ರೋಗೆ ಒಂದೇ ಮೊಬಿಲಿಟಿ ಕಾರ್ಡ್‌

ಬಿಎಂಟಿಸಿ-ಮೆಟ್ರೋ ಎರಡಕ್ಕೂ ಕಾಮನ್ ಮೊಬಿಲಿಟಿ ಕಾರ್ಡ್ ಪದ್ಧತಿ ಜಾರಿಗೆ ಕಾರ್ಡ್ ಸಿದ್ಧಗೊಂಡಿದ್ದು, ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಶೀಘ್ರ ಜಾರಿಗೆ ಬರಲಿದೆಎಂದು ಆಯುಕ್ತರು ವಿವರಿಸಿದರು.

ಸಂಚಾರ ಪೊಲೀಸ್ ವಿಭಾಗದಲ್ಲಿ ಇರುವ ಎಲ್ಲ ಕ್ಯಾಮೆರಾಗಳು ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಅಳವಡಿಸಿರುವ ಕ್ಯಾಮರಾಗಳಲ್ಲಿರುವ ವಿಡಿಯೋ ಮಾಹಿತಿ ಹಾಗೂ ವಿವರಗಳನ್ನು ಪಾಲಿಕೆ ಜೊತೆ ಹಂಚಿಕೊಳ್ಳಬೇಕು. ಬಿಎಂಟಿಸಿ, ಮೆಟ್ರೋ, ಬೆಸ್ಕಾಂ, ಅಗ್ನಿಶಾಮಕದಳ, ಪೊಲೀಸ್ ಇಲಾಖೆ, ಬಿಡಿಎ ಎಲ್ಲಾ ಇಲಾಖೆಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದು ಸಚಿವರು ಸೂಚಿಸಿದ್ದಾಗಿ ತಿಳಿಸಿದರು.

ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಜಲಮಂಡಳಿ ಅಧ್ಯಕ್ಷರಾದ ಮಂಜುಳಾ, ಮೆಟ್ರೋ ಎಂಡಿ ಜಾಫರ್, ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ನಿತೀಶ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್, ಜಿ. ಜಗದೀಶ್, ಡಾ. ರಾಜೇಂದ್ರ ಕೆ.ವಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಓ ಕರೀಗೌಡ, ಸಂಚಾರಿ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ, ಕೆ-ರೈಡ್ ಎಂಡಿ ಲಕ್ಷ್ಮಣ್ ಸಿಂಗ್, ಅಗ್ನಿಶಾಮಕ, ಮೆಟ್ರೋ, ಬೆಸ್ಕಾಂ, ಪೊಲೀಸ್, ಬಿಡಿಎ, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಮೈಸೂರು ದಸರಾಗೆ ದಕ್ಷಿಣ ಭಾರತದ ಎಲ್ಲಾ ಸಿಎಂಗಳಿಗೆ ಆಹ್ವಾನ, ಏರ್‌ ಶೋ ಸೇರಿದಂತೆ ವಿವಿಧ ಕಾರ್ಯಕ್ರಮ!
ನಾಳೆ ಯಶವಂತಪುರ-ಮಂಗಳೂರು ಸೆಂಟ್ರಲ್‌ ನಡುವೆ ವಂದೇ ಭಾರತ್‌ ಪರೀಕ್ಷಾರ್ಥ ಸಂಚಾರ