
ಮೈಸೂರು: ಅಕ್ರಮವಾಗಿ ಬಾಂಗ್ಲಾ ವಲಸಿಗರು ಮೈಸೂರಿಗೆ ಬಂದಿದ್ದಾರೆ ಎಂದು ಆರೋಪಿಸಿ ರೈಲು ಪ್ರಯಾಣಿಕರ ಬ್ಯಾಗ್ ಹಾಗೂ ದಾಖಲೆ ಪರಿಶೀಲಿಸಿದ ಹಿಂದೂ ಜಾಗರಣ ವೇದಿಕೆಯ 6 ಕಾರ್ಯಕರ್ತರ ವಿರುದ್ಧ ಮೈಸೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಶ್ಚಿಮ ಬಂಗಾಳದಿಂದ ಔರಾ ಎಕ್ಸ್‌ಪ್ರೆಸ್ ರೈಲು ಭಾನುವಾರ ಬೆಳಗ್ಗೆ ಮೈಸೂರಿಗೆ ತಲುಪಿತು. ಅದರಲ್ಲಿದ್ದ 36 ಪ್ರಯಾಣಿಕರನ್ನು ರೈಲ್ವೆ ಪ್ರವೇಶ ದ್ವಾರದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಅಡ್ಡಗಟ್ಟಿ ವಿಚಾರಿಸಿದರು. ಈ ರೈಲಿನ 3 ಬೋಗಿಯಲ್ಲಿ 150 ಹೆಚ್ಚು ಮಂದಿ ಬಾಂಗ್ಲಾ ವಲಸಿಗರು ಅಕ್ರಮವಾಗಿ ಬಂದಿದ್ದಾರೆ ಎಂಬ ಮಾಹಿತಿ ಇದೆ ಎಂದು ತಿಳಿಸಿ, ಅವರ ದಾಖಲೆ ಹಾಗೂ ಬ್ಯಾಗ್ ಪರಿಶೀಲಿಸಿದರು.
ಪೊಲೀಸರು ಬಂದು 36 ಮಂದಿ ಶಂಕಿತ ಪ್ರಯಾಣಿಕರ ದಾಖಲಾತಿ ಪರಿಶೀಲಿಸಿ, ಅವರೆಲ್ಲಾ ಬಾಂಗ್ಲಾದೇಶದರಲ್ಲ ಎಂದು ಖಚಿತ ಪಡಿಸಿ ಕಳುಹಿಸಿದರು. ಪ್ರಯಾಣಿಕರನ್ನು ಪರಿಶೀಲಿಸಿದ ಹಿಂದೂ ಜಾಗರಣ ವೇದಿಕೆಯ 6 ಕಾರ್ಯಕರ್ತರ ವಿರುದ್ಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಪ್ರತಿ ಭಾನುವಾರ ಪಶ್ಚಿಮ ಬಂಗಾಳದಿಂದ ಬಾಂಗ್ಲಾ ವಲಸಿಗರು ಆಗಮಿಸಿ ಗೌಸಿಯನಗರ, ಪಿರಿಯಾಪಟ್ಟಣ, ಕೊಡಗು ಭಾಗಕ್ಕೆ ತೆರಳುತ್ತಿದ್ದಾರೆ. ನಕಲಿ ಆಧಾರ್ ಕಾರ್ಡ್ ಬಳಸಿ ಅಕ್ರಮ ವಲಸಿಗರು ಮೈಸೂರಿಗೆ ಬರುತ್ತಿದ್ದಾರೆ ಎಂದು ದೂರಿದರು.