ಜಮೀನಿಗೆ ತೆರಳಲು ಸ್ವಂತ ಹಣದಲ್ಲಿ 3.5 ಕಿ.ಮೀ. ಉದ್ದದ ರಸ್ತೆ ನಿರ್ಮಿಸಿಕೊಂಡ ರೈತರು

Published : Jun 22, 2026, 06:20 AM IST
Ballari Farmers

ಸಾರಾಂಶ

ಕುರುಗೋಡಿನ ಮುಷ್ಟಗಟ್ಟೆ ಕಾಲುವೆ ವ್ಯಾಪ್ತಿಯ ರೈತರು, ತಮ್ಮ ಜಮೀನುಗಳಿಗೆ ಹೋಗುವ ಸರ್ವಿಸ್ ರಸ್ತೆ ಹಾಳಾಗಿದ್ದರಿಂದ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಸ್ವಯಂ ಪ್ರೇರಿತರಾಗಿದ್ದಾರೆ. ಸುಮಾರು 150 ರೈತರು ಒಟ್ಟಾಗಿ ₹3 ಲಕ್ಷ ಸಂಗ್ರಹಿಸಿ, 3.5 ಕಿ.ಮೀ. ಉದ್ದದ ರಸ್ತೆಯನ್ನು ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿಕೊಂಡು ಮಾದರಿಯಾಗಿದ್ದಾರೆ.

ಕುರುಗೋಡು: ಇಲ್ಲಿನ ಬಳ್ಳಾರಿ ರಸ್ತೆಯಲ್ಲಿ ಬರುವ ಮುಷ್ಟಗಟ್ಟೆ ಕಾಲುವೆ ವ್ಯಾಪ್ತಿಯ ರೈತರು ತಮ್ಮ ಜಮೀನುಗಳಿಗೆ ಹೋಗುವ ಸರ್ವಿಸ್ ರಸ್ತೆಯನ್ನು ಸ್ವಂತ ಹಣದಲ್ಲಿ ದುರಸ್ತಿ ಮಾಡಿ ಇಲಾಖೆಯ ಗಮನ ಸೆಳೆದಿದ್ದಾರೆ.

ಈ ಕಾಲುವೆ ಇರುವ ಮೂರೂವರೆ ಕಿ.ಮೀ. ರಸ್ತೆ ದಾಟಿ ಹೋದರೆ 500 ಎಕರೆ ಕೃಷಿ ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. ಕಾಲುವೆಗೆ ಹೊಂದಿಕೊಂಡು ನಿರ್ಮಿಸಿರುವ ಸರ್ವಿಸ್ ರಸ್ತೆಯಲ್ಲಿ ಮೊಣಕಾಲೆತ್ತರದ ಗುಂಡಿಗಳು ನಿರ್ಮಾಣವಾಗಿವೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ರಸ್ತೆ ಕಾಣದಂತಾಗುತ್ತಿತ್ತು. ಗ್ರಾಮದ ರೈತರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಜಮೀನುಗಳಿಗೆ ಹೋಗುವ ದುಸ್ಥಿತಿ ನಿರ್ಮಾಣವಾಗಿತ್ತು. ಕೃಷಿ ಚಟುವಟಿಕೆಗಾಗಿ ನಿತ್ಯ ಓಡಾಡುವ ರೈತರು ಗುಂಡಿಗಳಲ್ಲಿ ಬಿದ್ದು ಕೈಕಾಲು ಮುರಿದುಕೊಂಡ ಘಟನೆಗಳು ಜರುಗಿವೆ.

150 ರೈತರಿಂದ 3 ಲಕ್ಷ ಹಣ ಸಂಗ್ರಹ

ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ಸ್ವಯಂ ಪ್ರೇರಣೆಯಿಂದ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. 150 ರೈತರು ಎಕರೆಗೆ ₹2000ದಂತೆ ಹಣ ಹಾಕಿ ಒಟ್ಟು ₹3 ಲಕ್ಷ ಸಂಗ್ರಹಿಸಿದ್ದಾರೆ. ಟ್ರ್ಯಾಕ್ಟರ್, ಜೆಸಿಬಿ ಯಂತ್ರಗಳ ನೆರವಿನಿಂದ ಗ್ರಾವೆಲ್ ಬಳಸಿ ೩.೫ ಕಿ.ಮೀ ರಸ್ತೆ ದುರಸ್ತಿ ಮಾಡಿ ಮಾದರಿಯಾಗಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ನಾವೇ ಹಣ ಸಂಗ್ರಹಿಸಿ ರಸ್ತೆ ದುರಸ್ತಿ ಮಾಡಿಕೊಂಡಿದ್ದೆವು. ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ರಸ್ತೆ ಸಂಪೂರ್ಣ ಹಾಳಾಗಿ ಗುಂಡಿ ನಿರ್ಮಾಣವಾಗಿದ್ದವು. ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸದ ಕಾರಣ ನಾವೇ ದುರಸ್ತಿಗೆ ಮುಂದಾಬೇಕಾಯಿತು ಎನ್ನುತ್ತಾರೆ ಇಲ್ಲಿನ ರೈತರು.

ಈ ವೇಳೆ ರೈತರಾದ ತಂಗಿ ಸುರೇಶಪ್ಪ, ಬಸವರಾಜ, ಕರೆಪ್ಪ, ನಾಗರಾಜ, ಮೂರುಣ್ಣೆ ಬಸವರಾಜ, ಪೂಜಾರಿ ಸಿದ್ದಬಸಪ್ಪ, ಪೂಜಾರಿ ಗಂಗಾಧರ, ಶೀಲಪ್ಪನವರ ವೀರೇಶ, ಟಿ.ಮಲ್ಲಿಕಾರ್ಜುನ, ಗೊಲ್ಲರ ನಾಗರಾಜ ಮತ್ತಿತರರಿದ್ದರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯ

ರೈತರು ಎದುರಿಸುತ್ತಿರುವ ಸಮಸ್ಯೆ ಕುರಿತು ಜನಪ್ರತಿನಿಧಿಗಳು, ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ತಕ್ಷಣವೇ ಇತ್ತ ಕಡೆ ಗಮನಹರಿಸಿರಲಿಲ್ಲ. ರೈತರು ಸ್ವಂತ ಹಣದಲ್ಲಿ ರಸ್ತೆ ದುರಸ್ತಿ ಮಾಡಿಸಿದ್ದೇವೆ ಎನ್ನುತ್ತಾರೆ ರೈತ ಕರೆಪ್ಪನವರ ಲೋಕೇಶ.

ರೈತರ ಜಮೀನುಗಳಿಗೆ ತೆರಳುವ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ರಸ್ತೆ ದುರಸ್ತಿ ಮಾಡಿಸಲಾಗುವುದು ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಎಇಇ ಜಿ.ರಾಮರೆಡ್ಡಿ.

PREV
Read more Articles on
click me!

Recommended Stories

Karnataka Politics: ಕುದುರೆ ವ್ಯಾಪಾರಿ ಡಿಕೆಶಿ ಚಾಣಕ್ಯನಾಗಲು ಹೇಗೆ ಸಾಧ್ಯ: ಆರ್.ಅಶೋಕ್ ಲೇವಡಿ
Bengaluru Cyber Crime New Idea: ನಿಮ್ಮ ಮಗ ಅರೆಸ್ಟ್ ಆಗಿದ್ದಾನೆಂದು ತಾಯಿಗೆ ಕರೆ ಮಾಡಿ ₹1.25 ಲಕ್ಷ ವಂಚನೆ!