ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಜನತೆಯ ಸಹಕಾರ ಸಿಕ್ಕರೆ ಕೊರೋನಾ ಸೋಂಕು ಹರಡದಂತೆ ಹೆಡೆಮುರಿ ಕಟ್ಟಬಹುದು ಎಂಬುದಕ್ಕೆ ಮೈಸೂರು ಜಿಲ್ಲೆ ನಿದರ್ಶನ. ಇದು ದೇಶಕ್ಕೆ ಮಾದರಿಯಾಗಿದೆ. ಇದಕ್ಕೆ ಕಾರಣವಾದ ಜಿಲ್ಲಾಡಳಿತ, ಚುನಾಯಿತ ಪ್ರತಿನಿಧಿಗಳು ಅಭಿನಂದನಾರ್ಹರು ಎಂದು ಪತ್ರಿಕಾ ಹೇಳಿಕೆಯಲ್ಲಿ ಶ್ಲಾಘಿಸಿದ್ದಾರೆ.
ಬೆಂಗಳೂರು (ಮೇ. 16): ರಾಜ್ಯದಲ್ಲಿ ಸತತ ಕೊರೋನಾ ಸೋಂಕು ಪ್ರಕರಣಗಳಿಂದ ಆತಂಕ ಸೃಷ್ಟಿಸಿದ್ದ ಕೆಂಪು ವಲಯದಲ್ಲಿದ್ದ ಮೈಸೂರು ಶುಕ್ರವಾರ ಸಂಪೂರ್ಣ ಸೋಂಕು ಮುಕ್ತಗೊಂಡಿದೆ. ಸೋಂಕಿತರಾಗಿದ್ದ 90 ಮಂದಿಯೂ ಗುಣಮುಖರಾಗುವ ಮೂಲಕ ಮೈಸೂರು ಜಿಲ್ಲೆ ದೇಶಕ್ಕೆ ಮಾದರಿ ಎಂಬಂತಹ ಚೇತರಿಕೆ ಕಂಡಿದೆ.
ರಾಜ್ಯದಲ್ಲಿ ಒಟ್ಟು 35 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರೆ ಮೈಸೂರಿನಲ್ಲಿ ವರದಿಯಾಗಿದ್ದ 90 ಪ್ರಕರಣಗಳಲ್ಲಿ ಒಂದೂ ಸಾವಿಲ್ಲದೆ ಅಷ್ಟೂಮಂದಿಗೆ ಗುಣಮುಖರಾಗಿ ಮನೆ ಸೇರಿದ್ದಾರೆ.
ಮಾ.21 ರಂದು ಮೈಸೂರಿನಲ್ಲಿ ಮೊದಲ ಪ್ರಕರಣ ವರದಿಯಾಗಿತ್ತು. ಬಳಿಕ ನಂಜನಗೂಡಿನ ಜ್ಯುಲಿಯಂಟ್ ಮೂಲದ ಸೋಂಕಿನಿಂದ ಬರೋಬ್ಬರಿ 74 ಮಂದಿಗೆ ಹಾಗೂ ದೆಹಲಿ ಪ್ರವಾಸದಿಂದ ಹಿಂತಿರುಗಿದ್ದ 10 ಮಂದಿಗೆ ಸೋಂಕು ಉಂಟಾಗಿತ್ತು.
ಮೂವರು ವಿದೇಶದಿಂದ ಹಿಂತಿರುಗಿದ್ದವರು ಹಾಗೂ ಮೂರು ಮಂದಿ ಸಾರಿ ರೋಗಿಗಗಳಿಗೂ ಸೋಂಕು ಉಂಟಾಗಿತ್ತು. ಹೀಗಾಗಿ ಒಂದು ಹಂತದಲ್ಲಿ ಪರಿಸ್ಥಿತಿ ಮತ್ತಷ್ಟುಗಂಭೀರ ತಿರುವು ತೆಗೆದುಕೊಳ್ಳವ ಆತಂಕ ಇತ್ತು. ಆದರೆ, ಸಮರ್ಥವಾಗಿ ನಿಭಾಯಿಸಿದ ಜಿಲ್ಲಾಡಳಿತ ಸೋಂಕು ಮುಕ್ತಗೊಳಿಸಿದೆ.
ವೈದ್ಯರು, ಶುಶ್ರೂಷಕರು, ರಾಜ್ಯ ಸರ್ಕಾರ, ಆರೋಗ್ಯ ಇಲಾಖೆ, ಸ್ಥಳೀಯ ಜಿಲ್ಲಾಡಳಿತ, ಪೊಲೀಸ್ ಸಿಬ್ಬಂದಿಯ ನೆರವಿನಿಂದ ಎಲ್ಲರೂ ಗುಣಮುಖರಾಗಿದ್ದಾರೆ. ಇಷ್ಟೇ ಅಲ್ಲದೆ ಸೋಂಕಿತರ ಸಂಪರ್ಕದ ಒಟ್ಟು 5,332 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದರಲ್ಲಿ ಬಹುತೇಕರ ಕ್ವಾರಂಟೈನ್ ಅವಧಿ ಮುಗಿದಿದ್ದು, 568 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಇವರೂ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ಸಾಧನೆ ದೇಶಕ್ಕೇ ಮಾದರಿ: ಡಾ.ಕೆ. ಸುಧಾಕರ್
ಸರ್ಕಾರ ಹಾಗೂ ಜಿಲ್ಲಾಡಳಿತದ ಪರಿಶ್ರಮ ಹಾಗೂ ಮೈಸೂರು ಜಿಲ್ಲೆಯ ಜನತೆಯ ಸಹಕಾರದಿಂದ ಮೈಸೂರು ಸೋಂಕು ಮುಕ್ತವಾಗಿದೆ. ಇದು ದೇಶಕ್ಕೇ ಮಾದರಿ ಸಾಧನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದಕ್ಕೆ ಕಾರಣವಾದ ಎಲ್ಲಾ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮೈಸೂರಿನಲ್ಲಿ ಸೋಂಕು ತೀವ್ರ ಆತಂಕ ಉಂಟು ಮಾಡಿತ್ತು. ಹೀಗಾಗಿ ಮೈಸೂರಿಗೆ ಖುದ್ದು ಭೇಟಿ ನೀಡಿ ಜ್ಯುಲಿಯೆಂಟ್ ಕಾರ್ಖಾನೆ, ನಂಜನಗೂಡು ಪಟ್ಟಣ ಪರಿಶೀಲಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದೆವು. ಅಲ್ಲದೆ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಮತ್ತು ಕುಟುಂಬ ಸದಸ್ಯರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೆ ಎಂದು ಸ್ಮರಿಸಿದರು.
18ರಂದು ಮತ್ತೊಂದು ವಿಮಾನ: 170 ಪ್ರಯಾಣಿಕರ ನಿರೀಕ್ಷೆ
ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಜನತೆಯ ಸಹಕಾರ ಸಿಕ್ಕರೆ ಕೊರೋನಾ ಸೋಂಕು ಹರಡದಂತೆ ಹೆಡೆಮುರಿ ಕಟ್ಟಬಹುದು ಎಂಬುದಕ್ಕೆ ಮೈಸೂರು ಜಿಲ್ಲೆ ನಿದರ್ಶನ. ಇದು ದೇಶಕ್ಕೆ ಮಾದರಿಯಾಗಿದೆ. ಇದಕ್ಕೆ ಕಾರಣವಾದ ಜಿಲ್ಲಾಡಳಿತ, ಚುನಾಯಿತ ಪ್ರತಿನಿಧಿಗಳು ಅಭಿನಂದನಾರ್ಹರು ಎಂದು ಪತ್ರಿಕಾ ಹೇಳಿಕೆಯಲ್ಲಿ ಶ್ಲಾಘಿಸಿದ್ದಾರೆ.