ಪಿ. ನಂ. 681 ನೊಂದಿಗೆ ನೇರ ಸಂಪರ್ಕ ಹೊಂದಿದ್ದ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ 18 ಜನರ ಎರಡನೇ ಸ್ಯಾಂಪಲ್ ಟೆಸ್ಟ್ ವರದಿಯೂ ನೆಗೆಟಿವ್| ಪ್ರಾಥಮಿಕ ಸಂಪರ್ಕ ಇದ್ದರೂ ಮೊದಲನೇ ಸ್ಯಾಂಪಲ್ ವರದಿಯಲ್ಲಿಯೂ ನೆಗೆಟಿವ್| ಮೆಣಸಿನಕಾಯಿ, ಟೋಮೆಟೋ ಮೊದಲಾದವುಗಳನ್ನು ತೀರಾ ಅಗ್ಗಕ್ಕೆ ಮಾರಾಟ| ಈಗ ಉತ್ತಮ ಅಲ್ಲದಿದ್ದರೂ ಸಹಜ ದರದಲ್ಲಿ ವ್ಯಾಪಾರ ವಹಿವಾಟು|
ಕೊಪ್ಪಳ(ಮೇ.16): ಬಾಗಲಕೋಟೆಯ ಪಿ. ನಂ. 681 ನೊಂದಿಗೆ ನೇರ ಸಂಪರ್ಕ ಹೊಂದಿದ್ದ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ 18 ಜನರ ಎರಡನೇ ಸ್ಯಾಂಪಲ್ ಟೆಸ್ಟ್ ವರದಿಯೂ ನೆಗೆಟಿವ್ ಬಂದಿದ್ದು, ನಿಲೋಗಲ್ ಗ್ರಾಮ ನಿರಾಳವಾಗಿದೆ.
ಪ್ರಾಥಮಿಕ ಸಂಪರ್ಕ ಇದ್ದರೂ ಮೊದಲನೇ ಸ್ಯಾಂಪಲ್ ವರದಿಯಲ್ಲಿಯೂ ನೆಗೆಟಿವ್ ಬಂದಿತ್ತು. ಆದರೂ ಜನರಲ್ಲಿ ಆತಂಕ ಇದ್ದೇ ಇದ್ದು, ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಪಾಸಿಟಿವ್ ಬಂದೇ ಬರುತ್ತದೆ. ಹೀಗಾಗಿ, 12ನೇ ದಿನಕ್ಕೆ ಕಳುಹಿಸಿರುವ ಸ್ಯಾಂಪಲ್ ವರದಿಯಲ್ಲಿ ಪಾಸಿಟಿವ್ ಬಂದೇ ಬರುತ್ತದೆ ಎನ್ನುವ ಆತಂಕ ಇತ್ತು. ಆದರೆ, ಈಗ ಅದು ದೂರವಾಗಿದೆ. ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ 18 ಸ್ಯಾಂಪಲ್ ವರದಿಗಳು ಎರಡನೇ ಬಾರಿಯೂ ನೆಗೆಟಿವ್ ಬಂದಿವೆ.
ಕೊರೋನಾ ಕಂಟಕದಿಂದ ಮತ್ತೆ ಕೊಪ್ಪಳ ಪಾರು: ನಿಟ್ಟುಸಿರು ಬಿಟ್ಟ ಜನತೆ..!
ಏನಿದು ಹಿನ್ನೆಲೆ?
ಬಾಗಲಕೋಟೆ ಡಾಣಕಶಿರೂರ ಗ್ರಾಮದ ಪಾಸಿಟಿವ್ ವ್ಯಕ್ತಿ ಮದುವೆ ಸಮಾರಂಭಕ್ಕೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮಕ್ಕೆ ಆಗಮಿಸಿ ಮತ್ತು ವಾಸ್ತವ್ಯವನ್ನು ಮಾಡಿದ್ದ. ಹೀಗಾಗಿ, ಇಲ್ಲಿ ಭಾರಿ ಆತಂಕ ಇತ್ತು. ಈಗ ಎರಡನೇ ಸ್ಯಾಂಪಲ್ ವರದಿ ನೆಗೆಟಿವ್ ಬಂದಿದ್ದರಿಂದ ಇದ್ದ ಅಳಕು ಸಹ ನಿವಾರಣೆಯಾದಂತೆ ಆಗಿದೆ.
ಮಾರುಕಟ್ಟೆ ಸಹಜ ಸ್ಥಿತಿಗೆ
ಜಿಲ್ಲಾದ್ಯಂತ ಲಾಕ್‌ಡೌನ್ ನಡುವೆಯೂ ಸಡಿಲಿಕೆಯನ್ನು ಮಾಡಿರುವುದರಿಂದ ವ್ಯಾಪಾರ ವಹಿವಾಟು ಸಹಜ ಸ್ಥಿತಿಯತ್ತ ಸಾಗುತ್ತಿದೆ. ಜಿಲ್ಲಾದ್ಯಂತ ಗಂಗಾವತಿ, ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಸೇರಿದಂತೆ ಬಹುತೇಕ ನಗರಗಳಲ್ಲಿಯೂ ವ್ಯಾಪಾರ ಸಹಜ ದಿನಗಳಂತೆಯೇ ನಡೆಯುತ್ತಿದೆ. ಸ್ಥಳೀಯವಾಗಿ ಬಸ್ಸುಗಳ ಓಡಾಟವೂ ಇರುವುದರಿಂದ ಜನರು ಬಸ್ಸಿನಲ್ಲಿಯೂ ಜಾಗರೂಕತೆಯಿಂದ ಸಂಚಾರ ಮಾಡುತ್ತಿದ್ದಾರೆ. ಬಸ್ಸು ಇದ್ದರೂ ಜನರು ತಮ್ಮ ಸ್ವಂತ ವಾಹನಗಳಲ್ಲೇ ಬರುವುದು ಹೆಚ್ಚಾಗಿದೆ.
ಉತ್ತಮ ದರ
ತರಕಾರಿ ಮಾರುಕಟ್ಟೆಯೂ ಸಹಜ ಸ್ಥಿತಿಗೆ ಬರಲಾರಂಭಿಸಿದೆ. ರೈತರು ತಮ್ಮ ಉತ್ಪನ್ನಗಳನ್ನು ಅತ್ಯಂತ ನಿರಾಳವಾಗಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಮಾರುಕಟ್ಟೆಯಲ್ಲಿ ತರಕಾರಿಗಳಿಗೂ ನಿಧಾನವಾಗಿ ಉತ್ತಮ ದರ ಸಿಗುತ್ತಿದೆ.
ಮೆಣಸಿನಕಾಯಿ, ಟೋಮೆಟೋ ಮೊದಲಾದವುಗಳನ್ನು ತೀರಾ ಅಗ್ಗಕ್ಕೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈಗ ಉತ್ತಮ ಅಲ್ಲದಿದ್ದರೂ ಸಹಜ ದರದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ.
ಕಾರ್ಮಿಕರ ಚಲನವಲನ
ಗ್ರಾಮೀಣ ಪ್ರದೇಶದಿಂದ ಕಾರ್ಮಿಕರೇ ಆಗಮಿಸುತ್ತಿರಲಿಲ್ಲ. ಆದರೆ, ಈಗ ಕಳೆದೊಂದು ವಾರದಲ್ಲಿ ನಗರ ಪ್ರದೇಶಗಳಿಗೆ ಕಾರ್ಮಿಕರು ಆಗಮಿಸಲು ಪ್ರಾರಂಭಿಸಿದ್ದಾರೆ. ನಗರ ಪ್ರದೇಶದಲ್ಲಿ ಕಟ್ಟಡ ಕಾಮಗಾರಿಗಳು ಸೇರಿದಂತೆ ಮೊದಲಾದ ಕಾಮಗಾರಿಗಳು ಎಂದಿನಂತೆ ನಡೆಯುತ್ತಿವೆ.