
ಮೈಸೂರು (ಏ.14): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಟೋ ಚಾಲಕರು ಅಕ್ಷರಶಃ ಬೀದಿಗಿಳಿದಿದ್ದಾರೆ. ಆಟೋ ಗ್ಯಾಸ್‌ಗಾಗಿ ಚಾಲಕರು ಪರದಾಡುತ್ತಿರುವ ದೃಶ್ಯ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿ ಕಂಡುಬಂದಿದೆ. ಬೆಳಿಗ್ಗೆ 5 ಗಂಟೆಯಿಂದಲೇ ಗ್ಯಾಸ್‌ಗಾಗಿ ಚಾಲಕರು ಸಾಲುಗಟ್ಟಿ ನಿಂತಿದ್ದು, ಸುಮಾರು ಒಂದು ಕಿಲೋಮೀಟರ್‌ವರೆಗೆ ಕ್ಯೂ ಹಬ್ಬಿದೆ. ದಿವಾನ್ಸ್ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಈ ದೃಶ್ಯ ಕಂಡುಬಂದಿದ್ದು, ಗ್ಯಾಸ್ ಲಭ್ಯವಿಲ್ಲದೆ ಚಾಲಕರು ಅತಂತ್ರರಾಗಿದ್ದಾರೆ. ಬಂಕ್ ಮುಂಭಾಗದಲ್ಲಿ ಆಟೋಗಳ ಸರಣಿಯೇ ನಿಂತಿದ್ದು, ರಸ್ತೆ ಸಂಚಾರಕ್ಕೂ ಅಡ್ಡಿಯುಂಟಾಗಿದೆ. ಹೊಟ್ಟೆಪಾಡಿಗಾಗಿ ಬೆಳಿಗ್ಗೆಯೇ ಕೆಲಸಕ್ಕೆ ಬರಬೇಕಾದ ಚಾಲಕರು, ಗ್ಯಾಸ್‌ಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ಯಾಸ್‌ಗಾಗಿ ಪರದಾಡುತ್ತಿದ್ದ ಆಟೋ ಚಾಲಕರ ಪಾಲಿಗೆ ಕಿರಣ್ ಎಂಬ ವ್ಯಕ್ತಿ ಆಪದ್ಬಾಂಧವರಾಗಿ ಕಾಣಿಸಿಕೊಂಡಿದ್ದಾರೆ. ಕಷ್ಟದಲ್ಲಿದ್ದ ಚಾಲಕರಿಗೆ ನೆರವಾಗಲು ಮುಂದಾದ ಕಿರಣ್, ಸಾಲಿನಲ್ಲಿ ನಿಂತಿದ್ದ ಪ್ರತಿಯೊಬ್ಬ ಆಟೋ ಚಾಲಕನಿಗೆ ತಲಾ 200 ರೂಪಾಯಿಗಳನ್ನು ಉಚಿತವಾಗಿ ನೀಡಿದ್ದಾರೆ. ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತಿದ್ದ ನೂರಾರು ಚಾಲಕರಿಗೆ ಕಿರಣ್ ಸುಮಾರು 5 ಲಕ್ಷ ರೂಪಾಯಿ ಹಣವನ್ನು ವಿತರಿಸಿದ್ದಾರೆ. ಪ್ರತಿಯೊಬ್ಬರಿಗೆ 200 ರೂಪಾಯಿಯಂತೆ ಹಣ ನೀಡಿದ್ದಾರೆ. ಕಿರಣ್ ಅವರು ವೃತ್ತಿಯಲ್ಲಿ ಆಟೋ ಚಾಲಕರಿಗೆ ಫೈನಾನ್ಸ್ ನೀಡುವ ಕೆಲಸ ಮಾಡುತ್ತಿದ್ದಾರೆ. ಚಾಲಕರ ಕಷ್ಟವನ್ನು ಹತ್ತಿರದಿಂದ ಕಂಡಿರುವ ಅವರು ಈ ಸಹಾಯ ಹಸ್ತ ಚಾಚಿದ್ದಾರೆ.
ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಕಿರಣ್, "ಆಟೋ ಚಾಲಕರು ಇಂದು ಗ್ಯಾಸ್‌ಗಾಗಿ ತುಂಬಾ ಕಷ್ಟಪಡುತ್ತಿದ್ದಾರೆ. ನಾನು ಆಟೋ ಚಾಲಕರಿಗೆ ಫೈನಾನ್ಸ್ ನೀಡುವ ಉದ್ಯಮದಲ್ಲಿದ್ದೇನೆ. ದಿನಪೂರ್ತಿ ಕೆಲಸ ಮಾಡಿದರೆ ಮಾತ್ರ ಅವರ ಜೀವನ ನಡೆಯುತ್ತದೆ. ಅಂತಹವರು ಕೆಲಸ ಬಿಟ್ಟು ಇಲ್ಲಿ ಕಾಯುತ್ತಿದ್ದಾರೆ. ಅವರ ಸಂಕಷ್ಟಕ್ಕೆ ಸಣ್ಣದೊಂದು ನೆರವು ನೀಡಬೇಕೆಂದು ಈ ಹಣ ನೀಡುತ್ತಿದ್ದೇನೆ," ಎಂದು ಹೇಳಿದ್ದಾರೆ.