ಮೋದಿ ಭೇಟಿಯ ಸಮಯದಲ್ಲೇ ಮೈಸೂರಿಗೆ ಮತ್ತೊಂದು ಗರಿಮೆ, ಕೌಟಿಲ್ಯನ ಅರ್ಥಶಾಸ್ತ್ರ ತಾಳೆಗರಿ ಹಸ್ತಪ್ರತಿ UNESCO ಮಡಿಲಿಗೆ

Published : Nov 10, 2026, 10:11 AM IST
palm-leaf manuscript of Kautilya’s Arthashastra

ಸಾರಾಂಶ

ಮೈಸೂರಿನ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿರುವ ಕೌಟಿಲ್ಯನ 'ಅರ್ಥಶಾಸ್ತ್ರ'ದ ಪ್ರಾಚೀನ ತಾಳೆಗರಿಗೆ ಯುನೆಸ್ಕೋ ಜಾಗತಿಕ ಮಾನ್ಯತೆ ನೀಡಿದೆ. ಅಲ್ಲದೆ, ಮಹಿಳಾ ಸಬಲೀಕರಣಕ್ಕಾಗಿ ರೋಟರಿ ಸೆಂಟ್ರಲ್ ವತಿಯಿಂದ ಮೈಸೂರಿನಲ್ಲಿ ಮೊದಲ ಪಿಂಕ್ ಆಟೋ ರಿಕ್ಷಾ ವಿತರಿಸಲಾಗಿದೆ.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಗ್ರಹಿಸಿರುವ ಕೌಟಿಲ್ಯನ ‘ಅರ್ಥಶಾಸ್ತ್ರ’ದ ಪ್ರಾಚೀನ ತಾಳೆಗರಿ ಹಸ್ತಪ್ರತಿಗೆ ಜಾಗತಿಕ ಮಟ್ಟದ ಮಾನ್ಯತೆ ದೊರೆತಿದೆ.

ಮೈಸೂರಿನಲ್ಲಿರುವ ತಾಳೆಗರಿಗಳಿಗೆ ಜಾಗತಿಕ ಮನ್ನಣೆ

ಯುನೆಸ್ಕೋ ಮೆಮೋರಿ ಆಫ್‌ ದಿ ವರ್ಲ್ಡ್‌- ಏಷ್ಯಾ ಆ್ಯಂಡ್‌ ದಿ ಫೆಸಿಫಿಕ್‌ ರೀಜನಲ್‌ ರಿಜಿಸ್ಟ್ರೇಷನ್‌ಗೆ ಈ ಅಮೂಲ್ಯ ಹಸ್ತಪ್ರತಿಯನ್ನು ಸೇರ್ಪಡೆಗೊಳಿಸಲಾಗಿದೆ.

ನ.5ರಂದು ಯುನೆಸ್ಕೋ ಪ್ರಮಾಣಪತ್ರದ ಮೂಲಕ ಈ ಸೇರ್ಪಡೆಯನ್ನು ದೃಢೀಕರಿಸಿದೆ. ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಮೆಮೋರಿ ಆಫ್‌ವರ್ಲ್ಡ್‌ ಕಮಿಟಿ ಫಾರ್‌ ಏಷ್ಯಾ ದಿ ಫೆಸಿಫಿಕ್‌ನ 11ನೇ ಅಧಿವೇಶನದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಯುನೆಸ್ಕೋ ಮೆಮೊರಿ ಆಫ್‌ ದಿ ವರ್ಲ್ಡ್‌ ಅಡಿ ಹಸ್ತಾಂತರ

ಮೈಸೂರಿನ ಪ್ರಾಕೃತಿಕ ಸಂಶೋಧನಾಲಯದಲ್ಲಿ ಸಂರಕ್ಷಿಸಲ್ಪಟ್ಟಿರುವ ಈ ಹಸ್ತಪ್ರತಿ ಕೌಟಿಲ್ಯನ ಅರ್ಥಶಾಸ್ತ್ರದ ಸಂಪೂರ್ಣ ತಾಳೆಗರಿ ಪ್ರತಿಯಾಗಿದ್ದು, ಆಡಳಿತ, ಆರ್ಥಿಕ ನೀತಿ, ರಾಜ್ಯನೀತಿ ಹಾಗೂ ರಾಜತಾಂತ್ರಿಕ ಮತ್ತು ಸೈನಿಕ ತಂತ್ರಗಳ ಕುರಿತು ಪ್ರಾಚೀನ ಭಾರತದ ಜ್ಞಾನವನ್ನು ಪ್ರತಿಬಿಂಬಿಸುತ್ತದೆ.

ಕೌಟಿಲ್ಯನ ಅರ್ಥಶಾಸ್ತ್ರದ ಜೊತೆಗೆ ಮಹಾಭಾರತ ಮತ್ತು ಕಲ್ಹಣನ ರಾಜತರಂಗಿಣಿಯ ಹಸ್ತಪ್ರತಿಗಳೂ ಯುನೆಸ್ಕೋದ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ನೋಂದಣಿಗೆ ಸೇರ್ಪಡೆಯಾಗಿವೆ. ಇದರೊಂದಿಗೆ ಈ ಪ್ರಾದೇಶಿಕ ರಿಜಿಸ್ಟರ್‌ನಲ್ಲಿ ಭಾರತದ ಒಟ್ಟು ಸೇರ್ಪಡೆಗಳ ಸಂಖ್ಯೆ 6ಕ್ಕೆ ಏರಿದೆ.

ಮೈಸೂರಿನ ಅರ್ಥಶಾಸ್ತ್ರದ ಹಸ್ತಪ್ರತಿಗೆ ದೊರೆತಿರುವ ಈ ಮಾನ್ಯತೆ ಕೇವಲ ಒಂದು ಪ್ರಾಚೀನ ಗ್ರಂಥಕ್ಕೆ ಸಿಕ್ಕ ಗೌರವವಲ್ಲ. ಭಾರತದ ಆಡಳಿತ ಪರಂಪರೆ, ಜ್ಞಾನ ಪರಂಪರೆ ಹಾಗೂ ಕರ್ನಾಟಕದ ಮೈಸೂರಿನಲ್ಲಿ ಸಂರಕ್ಷಿಸಲ್ಪಟ್ಟಿರುವ ಅಪೂರ್ವ ದಾಖಲೆಗಳಿಗೆ ದೊರೆತಿರುವ ಜಾಗತಿಕ ಮಾನ್ಯತೆಯಾಗಿದೆ.

ರೋಟರಿ ಸೆಂಟ್ರಲ್‌ನಿಂದ ಪ್ರಪ್ರಥಮ ಪಿಂಕ್ ಆಟೋ ರಿಕ್ಷಾ ಕೊಡುಗೆ

ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರೋಟರಿ ಸೆಂಟ್ರಲ್ ಮೈಸೂರು ಸಂಸ್ಥೆಯು ನಗರದ ಪ್ರಪ್ರಥಮ ಪಿಂಕ್ ಆಟೋ ರಿಕ್ಷಾವನ್ನು ತಳಿರು ಫೌಂಡೇಶನ್‌ನ ಮೂರನೇ ತಂಡದ ಫಲಾನುಭವಿ ಜಯಲಕ್ಷ್ಮಿ ಅವರಿಗೆ ಕೊಡುಗೆಯಾಗಿ ನೀಡಿತು.

ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ಈ ಯೋಜನೆಯ ದಾನಿಗಳಾದ ಹೋಟೆಲ್ ಶ್ರೀ ಗಾಯತ್ರಿ ಟಿಫಿನ್ ರೂಮ್ (ಜಿಟಿಆರ್) ಪಾಲುದಾರರಾದ ಕೆ. ಕಸ್ತೂರಿ ಅವರ ಉಪಸ್ಥಿತಿಯಲ್ಲಿ ಬೀಗದ ಕೀ ಹಸ್ತಾಂತರಿಸಿದರು.

ರೋಟರಿ ಸೆಂಟ್ರಲ್ ಮೈಸೂರಿನ ಸದಸ್ಯ ಉಮಾಶಂಕರ್ ಅವರು ಪಿಂಕ್ ಆಟೋ ರಿಕ್ಷಾದ ವಿಮಾ ವೆಚ್ಚಕ್ಕಾಗಿ ₹5,000 ನೀಡಿದರು. ರೋಟರಿ ಕ್ಲಬ್ ಆಫ್ ಲೊರೆಟೊ ಹಿಲ್ಸ್‌ನ ಸದಸ್ಯೆ ಹಾಗೂ ರೋಟರಿ ಜಿಲ್ಲೆ 3181ರ ಪಿಂಕ್ ಆಟೋ ಯೋಜನೆಯ ಸಂಚಾಲಕಿ ಶ್ರುತಿ ಅವರು ಜಯಲಕ್ಷ್ಮಿ ಅವರ ಕುಟುಂಬದ ಬಳಕೆಗಾಗಿ ಅಡುಗೆ ಸ್ಟೌವ್ ಕೊಡುಗೆಯಾಗಿ ನೀಡಿದರು.

ರೋಟರಿ ಸೆಂಟ್ರಲ್‌ಅಧ್ಯಕ್ಷ ವಿಜಯೇಂದ್ರ ಶ್ರೀನಿವಾಸನ್, ಗೌ. ಕಾರ್ಯದರ್ಶಿ ಎನ್. ಸಚ್ಚಿದಾನಂದಮೂರ್ತಿ, ಸಹಾಯಕ ಗೌರ್ನರ್‌ ಡಾ. ಪ್ರತಾಪ್ ಕುಮಾರ್ ಶೆಟ್ಟಿ, ತಳಿರು ಫೌಂಡೇಷನ್‌ಡಾ. ಚಿತ್ರಾ, ಪತ್ರಕರ್ತ ಎಂ.ಟಿ. ಯೋಗೇಶ್ ಮೊದಲಾದವರು ಇದ್ದರು.

PREV
Read more Articles on
click me!

Recommended Stories

₹2500 ಬದಲು ₹1500 ಬರ ಪರಿಹಾರ: ಯಾದಗಿರಿ ರೈತರಿಗೆ ಶಾಕ್‌!
ಹೋರಿ ಬೆದರಿಸುವ ಸ್ಪರ್ಧಗೆ ಯಾರ ಅನುಮತಿ ಕಡ್ಡಾಯ? ಸಾವು-ನೋವು ಸಂಭವಿಸಿದರೆ ಯಾರು ಹೊಣೆ?