
ಮೈಸೂರಿನಲ್ಲಿ ಅಕ್ಟೋಬರ್ 13 ರಿಂದ ಆರಂಭವಾಗಿರುವ ಯುವ ದಸರಾ 2026 ಕಾರ್ಯಕ್ರಮವು 17ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಪ್ರಭುದೇವ ಉದ್ಘಾಟಿಸಲಿರುವ ಈ ಕಾರ್ಯಕ್ರಮದಲ್ಲಿ ಅಜನೀಶ್ ಲೋಕನಾಥ್, ಸಿದ್ ಶ್ರೀರಾಮ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಪ್ರತಿದಿನ ಸಂಜೆ ಸಂಗೀತ ಮನರಂಜನೆಯ ರಸದೌತಣವೂ ನಡೆಯುತ್ತಿದೆ. ಇದರ ನಡುವೆಯೇ, ನೇರಪ್ರಸಾರದಲ್ಲಿ ಬಂದಿರುವ ರ್ಯಾಪರ್ ಚಂದನ್ ಶೆಟ್ಟಿ ಅವರು ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ.
ಅ.14 ರಂದು ಸಂಗೀತ ನಿರ್ದೇಶಕ ಮತ್ತು ಗಾಯಕ ಶಂಕರ್- ಎಹಸಾನ್- ಲಾಯ್ ಅವರು ಸಂಗೀತ ಕಾರ್ಯಕ್ರಮ ನೀಡಿದ್ದರು. ನಿನ್ನೆ ಬಹುಭಾಷಾ ಗಾಯಕ ಸಿದ್ ಶ್ರೀರಾಮ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಮಳೆಯ ಕಾರಣದಿಂದ ನಿನ್ನೆಯ ಕೆಲವು ಷೋಗಳು ರದ್ದಾಗಿದ್ದು, ಅದರ ಬಗ್ಗೆ ಚಂದನ್ ಶೆಟ್ಟಿ (Chandan Shetty) ಮಾಹಿತಿ ನೀಡಿದ್ದಾರೆ. ನಿನ್ನೆಯ ಕಾರ್ಯಕ್ರಮ ಇಂದು ಹಮ್ಮಿಕೊಳ್ಳಲಾಗಿದೆ. ಅದರ ಜೊತೆಗೇ ಇಂದು ಅರ್ಥಾತ್ ಅಕ್ಟೋಬರ್ 16ರಂದು ಸ್ಯಾಂಡಲ್ವುಡ್ ನೈಟ್ಸ್ ಕಾರ್ಯಕ್ರಮ ಇದ್ದು, ಇದನ್ನು ರದ್ದು ಮಾಡದಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ, ಶಿವರಾಜ್ ಕುಮಾರ್, ರಚಿತಾ ರಾಮ್, ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ಅನುರಾಧಾ ಭಟ್ ಸೇರಿದಂತೆ ಹಲವು ಕಲಾವಿದರು ಭಾಗವಹಿಸಲಿದ್ದು, ನಾಳೆ ಅರ್ಥಾತ್ ಅ.17ರಂದು ಗಾಯಕರಾದ ಜಾಸ್ಮಿನ್ ಸ್ಯಾಂಡ್ಲಾಸ್ ಅವರಿಂದ ಹಾಗೂ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ. ಆದರೆ ಇಂದು ಕೂಡ ಮಳೆಯ ನಿರೀಕ್ಷೆ ಇರುವುದರಿಂದ ಕಾರ್ಯಕ್ರಮ ರದ್ದಾಗಬಾರದು ಎನ್ನುವುದು ಸ್ಯಾಂಡಲ್ವುಡ್ ಪ್ರಿಯರ ಮಾತು
ಈ ಬಗ್ಗೆ ತಿಳಿಸಿರುವ ಚಂದನ್ ಶೆಟ್ಟಿ ಅವರು, ಇವತ್ತು ಯುವ ದಸರಾ ಕಾರ್ಯಕ್ರಮ ನಡೆಯುತ್ತಿದೆ. ನಿನ್ನೆಯ ಷೋ ರೀತಿ ಇವತ್ತಿನ ಷೋ ಕೂಡ ಕ್ಯಾನ್ಸಲ್ ಆಗಬಾರದು ಎಂದು ಎಲ್ಲರೂ ಸೇರಿ ಡಿಸ್ಕಸ್ ಮಾಡಿ, ಡಿಸಿ ಅವರು ಕಾಲ್ ಮಾಡಿ ನೀವೇ ಮೊದಲು ಶುರು ಮಾಡಿ ಎಂದಿದ್ದಾರೆ. ಆದ್ದರಿಂದ ಸಂಜೆ 5 ಗಂಟೆಗೆ ನಾನೇ ಕಾರ್ಯಕ್ರಮ ಆರಂಭ ಮಾಡುತ್ತಿದ್ದೇನೆ. ದಯವಿಟ್ಟು ಎಲ್ಲರೂ ಈ ಸ್ಯಾಂಡಲ್ವುಡ್ ನೈಟ್ಸ್ಗೆ ಬನ್ನಿ ಎಂದು ಮೆಮೋರೇಬಲ್ ನೈಟ್ಸ್ ಆಗಿ ಮಾಡೋಣ. ನಾನು ಬಂದ ಮೇಲೆ ಬೇರೆ ಕಲಾವಿದರು ಬರ್ತಾರೆ. ಮೈಸೂರಿನ ಉತ್ತೇನಹಳ್ಳಿ ಗ್ರೌಂಡ್ಸ್ನಲ್ಲಿ ಇದು ನಡೆಯುತ್ತಿದ್ದು, ಎಲ್ಲರೂ ಬನ್ನಿ ಎಂದು ಮನವಿ ಮಾಡಿದ್ದಾರೆ ಚಂದನ್ ಶೆಟ್ಟಿ.