
ಮೈಸೂರು (ಜೂ.19): ನಗರದ ಮರಿಮಲ್ಲಪ್ಪ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗೆ ಕಾಲೇಜಿನ ಆವರಣದಲ್ಲೇ ಹೃದಯಾಘಾತ(heart attack) ಸಂಭವಿಸಿ ಎರಡು ಬಾರಿ ಕುಸಿದು ಬಿದ್ದು, ನಂತರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಮೂಲತಃ ಮದ್ದೂರು ತಾಲೂಕು ಯರಗನಹಳ್ಳಿಯ ವೈ.ಕೆ.ಮಾದೇಶ್(YK Madesh) ಮೃತಪಟ್ಟ ವಿದ್ಯಾರ್ಥಿ. ಈತ ಮೈಸೂರಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅಕ್ಕನ ಜೊತೆ ಮನೆ ಮಾಡಿಕೊಂಡು ಓದುತ್ತಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ತರಗತಿಯಿಂದ ಹೊರಬಂದ ಮಾದೇಶ್ 2.05ಕ್ಕೆ ಕಾಲೇಜು ಆವರಣದಲ್ಲಿಯೇ ಕುಸಿದು ಬಿದ್ದರು. ಹಿಂದಿನಿಂದ ಬರುತ್ತಿದ್ದ ವಿದ್ಯಾರ್ಥಿಗಳು ಆತನನ್ನು ಮೇಲೆತ್ತಿದ್ದರು. ಒಂದೆರಡು ಹೆಜ್ಜೆ ಹಾಕಿದ ಮಾದೇಶ್ ಮತ್ತೆ ಕುಸಿದು ಬಿದ್ದರು.
ಚಿಕ್ಕ ವಯಸ್ಸಿನಲ್ಲೇ ಹೃದಯದಲ್ಲಿ ರಂದ್ರ ಪತ್ತೆ
ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪೋಷಕರಿಗೂ ಸಹ ಕರೆ ಮಾಡಿದ್ದಾರೆ. ವೈದ್ಯರ ಪ್ರಯತ್ನದ ಬಳಿಕವೂ ಮಾದೇಶ್ ಬದುಕುಳಿಯಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಹೃದಯದಲ್ಲಿ ರಂದ್ರ ಪತ್ತೆಯಾಗಿತ್ತು. ಅದಕ್ಕೆ ಪೋಷಕರು ಚಿಕಿತ್ಸೆ ಕೊಡಿಸಿದ್ದರು ಎಂದು ತಿಳಿದುಬಂದಿದೆ. ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ವೈ.ಕೆ.ಮಾದೇಶ್ ಎಸ್ಸೆಸ್ಸೆಲ್ಸಿ ಪೂರೈಸಿ 609 ಅಂಕಗಳಿಸಿದ್ದರು.