
ಮೈಸೂರು (ಡಿ.26): ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಮುಂಭಾಗ ಸಂಭವಿಸಿದ ಭೀಕರ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಂಜನಗೂಡು ಮೂಲದ ಮಂಜುಳಾ (45) ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಕ್ರಿಸ್‌ಮಸ್ ರಜೆಯ ಸಂಭ್ರಮದಲ್ಲಿದ್ದ ಪ್ರವಾಸಿಗರ ಮೇಲೆ ವಿಧಿ ಅಟ್ಟಹಾಸ ಮೆರೆದಿದೆ.
ಘಟನೆಯ ವಿವರ
ಗುರುವಾರ ಸಂಜೆ ಅರಮನೆ ಮುಂಭಾಗ ಬಲೂನ್ ವ್ಯಾಪಾರಿ ಸಲೀಂ ಎಂಬಾತ ತನ್ನ ಸೈಕಲ್ ಮೇಲೆ ಹೀಲಿಯಂ ಸಿಲಿಂಡರ್ ಇಟ್ಟುಕೊಂಡು ಪ್ರವಾಸಿಗರಿಗೆ ಬಲೂನ್ ಮಾರಾಟ ಮಾಡುತ್ತಿದ್ದ. ರಾಣೆಬೆನ್ನೂರು ಮೂಲದ ಕೆಎಸ್‌ಆರ್‌ಟಿಸಿ ಎಫ್‌ಡಿಎ ಅಧಿಕಾರಿ ಕೊಟ್ರೇಶ್ ಬೀರಪ್ಪ ಅವರು ತಮ್ಮ ಮಕ್ಕಳಿಗೆ ಬಲೂನ್ ಕೊಡಿಸಲು ಬಂದಿದ್ದ ವೇಳೆ, ವ್ಯಾಪಾರಿ ಸಲೀಂ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೆ ಸಿಲಿಂಡರ್‌ನಿಂದ ಗಾಳಿ ತುಂಬಿಸುತ್ತಿದ್ದ. ಈ ವೇಳೆ ಅತಿಯಾದ ಒತ್ತಡದಿಂದಾಗಿ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ವ್ಯಾಪಾರಿ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದ.
ಸ್ಫೋಟದ ತೀವ್ರತೆಗೆ ನಂಜನಗೂಡು ಪಟ್ಟಣದ ಚಾಮಲಾಪುರ ಬೀದಿಯ ನಿವಾಸಿ ಮಂಜುಳಾ ಅವರ ಕಾಲುಗಳು ಹಾಗೂ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ತಡರಾತ್ರಿ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನೀಡಲಾಯಿತಾದರೂ, ರಕ್ತಸ್ರಾವ ಹೆಚ್ಚಾದ ಕಾರಣ ಇಂದು ಅವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಲಕ್ಷ್ಮೀ ಹಾಗೂ ಶಹೀನಾ ಎಂಬುವವರು ಸಹ ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. 'ರಸ್ತೆ ಬದಿಯಲ್ಲಿ ಪರವಾನಗಿ ಇಲ್ಲದೆ ಅಪಾಯಕಾರಿ ಸಿಲಿಂಡರ್ ಬಳಸುವವರ ಮೇಲೆ ಜಿಲ್ಲಾಡಳಿತ ನಿಗಾ ಇಡಬೇಕು. ಮೃತ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ' ಎಂದು ತಿಳಿಸಿದರು.
ಗಾಯಾಳು ಕೊಟ್ರೇಶ್ ಬೀರಪ್ಪ ನೀಡಿದ ದೂರಿನನ್ವಯ ಮೃತ ವ್ಯಾಪಾರಿ ಸಲೀಂ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯತನದ ಸಾವಿನ ಪ್ರಕರಣ (FIR) ದಾಖಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಸ್ಫೋಟಕ ಅನಿಲಗಳ ಬಳಕೆಗೆ ಕಡಿವಾಣ ಹಾಕಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.