
ಬೆಂಗಳೂರು (ಡಿ.26): ಸಿಲಿಕಾನ್ ಸಿಟಿಯ ಜೀವನಾಡಿ ಎಂದೇ ಕರೆಯಲ್ಪಡುವ 'ನಮ್ಮ ಮೆಟ್ರೋ' ರೈಲಿನಲ್ಲಿ ಯುವತಿಯೊಬ್ಬರ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವತಿಯ ಮೈ ಮುಟ್ಟಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಂತ್ರಸ್ತ ಯುವತಿಯು ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಮೆಟ್ರೋ ರೈಲು ಹತ್ತಿ ಪ್ರಯಾಣಿಸುತ್ತಿದ್ದರು. ಈ ವೇಳೆ ರೈಲಿನಲ್ಲಿ ಜನದಟ್ಟಣೆಯ ನಡುವೆ ವ್ಯಕ್ತಿಯೊಬ್ಬ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಲು ಯತ್ನಿಸಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ತಕ್ಷಣವೇ ಪ್ರತಿರೋಧ ತೋರಿದ್ದಾಳೆ.
ರೈಲು ನಿಲ್ದಾಣ ತಲುಪುತ್ತಿದ್ದಂತೆಯೇ ಯುವತಿಯು ಅಲ್ಲಿದ್ದ ಮೆಟ್ರೋ ಭದ್ರತಾ ಸಿಬ್ಬಂದಿಗೆ (Security) ವಿಷಯ ತಿಳಿಸಿ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ, ಆರೋಪಿತ ವ್ಯಕ್ತಿಯನ್ನು ಹಾಗೂ ಯುವತಿಯನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ಒಪ್ಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಎನ್‌ಸಿಆರ್ (NCR - Non-Cognizable Report) ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿದ ಪೊಲೀಸರು, ಆರೋಪಿತ ವ್ಯಕ್ತಿಗೆ ಇಂತಹ ವರ್ತನೆ ಮರುಕಳಿಸದಂತೆ ಖಡಕ್ ಎಚ್ಚರಿಕೆ (Warn) ನೀಡಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ಮೆಟ್ರೋದಲ್ಲಿ ಸಿಸಿಟಿವಿ ಮತ್ತು ಭದ್ರತಾ ಸಿಬ್ಬಂದಿ ಇದ್ದರೂ, ಇಂತಹ ಘಟನೆಗಳು ನಡೆಯುತ್ತಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮೆಟ್ರೋ ಪ್ರಯಾಣಿಕರು ಒತ್ತಾಯಿಸಿದ್ದಾರೆ.