ಹೊಸ ಮಹಾರಾಣಿ ಕಾಲೇಜಿಗೆ ಬಸ್ ಇಲ್ಲದೇ ಪರದಾಟ

By Web DeskFirst Published Sep 22, 2018, 5:51 PM IST
Highlights

ಮಹಾರಾಣಿ ಕಾಲೇಜಿಗೆ ಬಹುತೇಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಚಾಮರಾಜನಗರ, ಮಂಡ್ಯ ಹಾಗೂ ಹುಣಸೂರು, ಪಿರಿಯಾಪಟ್ಟಣದಿಂದ ಆಗಮಿಸುವುದು ಸರ್ವೇ ಸಾಮಾನ್ಯ. ಹುಣಸೂರು, ಪಿರಿಯಾಪಟ್ಟಣದಿಂದ ಬರುವ ವಿದ್ಯಾರ್ಥಿನಿಯರಿಗೆ ಕಾಲೇಜು ಬಳಿಯೇ ಬಸ್ ನಿಲುಗಡೆಯ ಸೌಲಭ್ಯವಿದ್ದು, ಮಂಡ್ಯ, ಚಾಮರಾಜ ನಗರದಿಂದ ಬರುವವರಿಗೆ ಆಕಾಶವಾಣಿ ಮೂಲಕ ಬರುವ ಬಸ್ಸುಗಳ ಸೌಲಭ್ಯವಿದೆ.

ಮೈಸೂರು(ಸೆ.22): ಇಷ್ಟು ದಿನ ಮಹಾರಾಣಿ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕೊರತೆಯಿದ್ದ ಕಟ್ಟಡವನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. ಆದರೆ ತರಗತಿಗೆ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿನಿಯರಿಗೆ ಸೂಕ್ತ ಬಸ್ ಸೌಲಭ್ಯವಿಲ್ಲದೆ ಎರಡರಿಂದ ಮೂರು ಕೀ.ಮೀ. ದೂರದಿಂದ ನಡೆದುಕೊಂಡು ಬರುವ ದುಸ್ಥಿತಿ ಬಂದೊದಗಿದೆ.

ಮಹಾರಾಣಿ ಕಾಲೇಜಿಗೆ ಬಹುತೇಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಚಾಮರಾಜನಗರ, ಮಂಡ್ಯ ಹಾಗೂ ಹುಣಸೂರು, ಪಿರಿಯಾಪಟ್ಟಣದಿಂದ ಆಗಮಿಸುವುದು ಸರ್ವೇ ಸಾಮಾನ್ಯ. ಹುಣಸೂರು, ಪಿರಿಯಾಪಟ್ಟಣದಿಂದ ಬರುವ ವಿದ್ಯಾರ್ಥಿನಿಯರಿಗೆ ಕಾಲೇಜು ಬಳಿಯೇ ಬಸ್ ನಿಲುಗಡೆಯ ಸೌಲಭ್ಯವಿದ್ದು, ಮಂಡ್ಯ, ಚಾಮರಾಜ ನಗರದಿಂದ ಬರುವವರಿಗೆ ಆಕಾಶವಾಣಿ ಮೂಲಕ ಬರುವ ಬಸ್ಸುಗಳ ಸೌಲಭ್ಯವಿದೆ. ಆದರೆ ಗದ್ದಿಗೆ, ಮಾನಂದವಾಡಿ ರಸ್ತೆಯ ಮುಖೇನ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಿಗೆ ಸರಿಯಾದ ಬಸ್ ಸೌಲಭ್ಯವಿಲ್ಲದೆ ಪಡಿಪಾಟಲು ಅನುಭವಿಸುವಂತಾಗಿದೆ.

ಗದ್ದಿಗೆ, ಬೀರಿಹುಂಡಿ, ಕುಮಾರಬೀಡು, ಬೋಗಾದಿ ಕಡೆಯಿಂದ ಬರುವ ಬಸ್ಸುಗಳು ಮೈಸೂರು ವಿವಿ ಅತಿಥಿಗೃಹದ ಬಳಿ ನಿಲುಗಡೆ ಹೊಂದಿ ನಂತರ ಕುಕ್ಕರಹಳ್ಳಿ ರಸ್ತೆಯ ಮೂಲಕ ಫೈರ್‌ಬ್ರಿಗೇಡ್‌ಗೆ ಬಂದು ರಾಮಸ್ವಾಮಿ ಮುಖಾಂತರ ನಗರ ಬಸ್ ನಿಲ್ದಾಣಕ್ಕೆ ಹೋಗುತ್ತವೆ. ಈ ಭಾಗದ ವಿದ್ಯಾರ್ಥಿನಿಯರು ಮೈಸೂರು ವಿವಿ ಅತಿಥಿ ಗೃಹ ಅಥವಾ ಫೈರ್ ಬ್ರಿಗೇಡ್ ಮತ್ತು ರಾಮಸ್ವಾಮಿ ವೃತ್ತದಲ್ಲಿ ಇಳಿದುಕೊಳ್ಳುತ್ತಾರೆ. 

ರಾಮಸ್ವಾಮಿ ಯಲ್ಲಿ ಇಳಿದುಕೊಂಡವರು ಬೇರೆ ಬಸ್ಸುಗಳನ್ನು ಹತ್ತಿ ಮೆಟ್ರೋಪೋಲ್‌ಗೆ ಬಂದರೆ, ಮಿಕ್ಕವರು ಮೈವಿವಿ ಅತಿಥಿಗೃಹದ ಬಳಿ ಇಳಿದುಕೊಂಡು ಮಾನಸಗಂಗೋತ್ರಿ ಮೂಲಕ ಸುಮಾರು ಎ ರಡು ಕಿ.ಮೀ. ಪಡುವಾರಹಳ್ಳಿಗೆ ನಡೆದುಕೊಂಡು ಬರುತ್ತಾರೆ. ಸುಮಾರು 2 ಕಿ.ಮೀ. ನಡೆದುಕೊಂಡು
ಬರುವಂತಾಗಿದೆ.

ಕಾಲೇಜು ಮುಗಿಸು ಹೊರ ಬರುವ ವಿದ್ಯಾರ್ಥಿನಿಯರು ಕಲಾಮಂದಿರ ರಸ್ತೆಯ ಮೂಲಕ ಮೆಟ್ರೋಪೋಲ್‌ಗೆ ಬಂದು ಅಲ್ಲಿಂದ ಬಸ್ಸುಗಳಲ್ಲಿ ಸಿಟಿ ಬಸ್ ನಿಲ್ದಾಣ ತಲುಪುತ್ತಾರೆ.  ಒಟ್ಟಿನಲ್ಲಿ ಮಹಾರಾಣಿ ಕಾಲೇಜಿಗೆ ಆಗಮಿಸುವ ನೂರಾರು ವಿದ್ಯಾರ್ಥಿನಿಯರಿಗೆ ಬಸ್ ಸೌಲಭ್ಯದ ಕೊರತೆಯೇ ಹೆಚ್ಚಾಗಿ ಪರಿಣಮಿಸಿದ್ದು, ಅಧಿಕಾರಿಗಳು ಆದಷ್ಟು ಬೇಗ ಕ್ರಮ ವಹಿಸಿ ಹೆಚ್ಚು ಬಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಕೋರಿದ್ದಾರೆ.

- ಉತ್ತನಹಳ್ಳಿ ಮಹದೇವ
 

click me!