ಮೈಸೂರು : ಬಿಜೆಪಿ ಮೈತ್ರಿಕೂಟದ ವಿರುದ್ಧ ಮತ ಚಲಾಯಿಸಲು ಕಟ್ಟಡ ಕಾರ್ಮಿಕರ ಮನವಿ

By Kannadaprabha NewsFirst Published Apr 14, 2024, 3:30 PM IST
Highlights

ಬಿಜೆಪಿ ಕಳೆದ 10 ವರ್ಷದ ಆಡಳಿತಾವಧಿಯಲ್ಲಿ ಕಟ್ಟಡ ನಿರ್ಮಾಣ ವಲಯವನ್ನು ಅತ್ಯಂತ ದುಸ್ಥಿತಿಗೆ ತಳ್ಳಿದೆ. ಇದರಿಂದಾಗಿ ಕೋಟ್ಯಂತರ ಕಟ್ಟಡ ನಿರ್ಮಾಣ ಕಾರ್ಮಿಕರ ಬದುಕು ಚಿಂತಾಜನಕವಾಗಿದೆ. ಹೀಗಾಗಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೈತ್ರಿಕೂಟದ ವಿರುದ್ಧ ಮತ ಚಲಾಯಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಮನವಿ ಮಾಡಿದರು.

  ಮೈಸೂರು :  ಬಿಜೆಪಿ ಕಳೆದ 10 ವರ್ಷದ ಆಡಳಿತಾವಧಿಯಲ್ಲಿ ಕಟ್ಟಡ ನಿರ್ಮಾಣ ವಲಯವನ್ನು ಅತ್ಯಂತ ದುಸ್ಥಿತಿಗೆ ತಳ್ಳಿದೆ. ಇದರಿಂದಾಗಿ ಕೋಟ್ಯಂತರ ಕಟ್ಟಡ ನಿರ್ಮಾಣ ಕಾರ್ಮಿಕರ ಬದುಕು ಚಿಂತಾಜನಕವಾಗಿದೆ. ಹೀಗಾಗಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೈತ್ರಿಕೂಟದ ವಿರುದ್ಧ ಮತ ಚಲಾಯಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಮನವಿ ಮಾಡಿದರು.

ಮೋದಿ ನೇತೃತ್ವದ ಸರ್ಕಾರ ಕಾರ್ಮಿಕ ಹಕ್ಕುಗಳನ್ನು ದಮನ ಮಾಡಿದೆ. ಈಗ ಇರುವ ಕಲ್ಯಾಣ ಸೌಲಭ್ಯಗಳನ್ನು ತೆಗೆದು ಹಾಕುವ ಯತ್ನ ನಡೆಸಿದ್ದು, ಎಲ್ಲರಿಗೂ ತಿಳಿದ ವಿಷಯವಾಗಿದೆ. ಮೋದಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕರ ಜೀವನದ ಮೇಲೆ ವ್ಯವಸ್ಥಿತ ದಾಳಿ ಮಾಡಿದ್ದು, ದೇಶದ ದುಡಿಯುವ ಜನರಿಗೆ ದ್ರೋಹ ಎಸಗಲಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಸೌಲಭ್ಯಗಳು ರದ್ದಾಗುವ ಅಪಾಯವಿದೆ. ಇದರೊಡನೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ವೇಳೆ ದುರುಪಯೋಗವಾಗಿದೆ ಎಂದು ಅವರು ದೂರಿದರು.

ನಿರ್ಮಾಣ ಕಂಪನಿಗಳಿಂದ ಬಿಜೆಪಿಗೆ ಸಾವಿರಾರು ಕೋಟಿ ಹಣ ಸಂದಾಯವಾಗಿದೆ. ಚುನಾವಣಾ ಬಾಂಡ್ ಗಳ ಅತಿ ದೊಡ್ಡ ಫಲಾನುಭವಿ ಬಿಜೆಪಿಯೇ ಆಗಿದೆ. ಇಸ್ರೇಲ್ ಬಿಕ್ಕಟ್ಟು ವೇಳೆ ಅಲ್ಲಿಗೆ ಭಾರತೀಯ ಕಾರ್ಮಿಕರನ್ನು ಕಳುಹಿಸುವ ಒಪ್ಪಂದ ಕೇಂದ್ರ ಮಾಡಿಕೊಂಡಿದ್ದು, ಇವರಿಗೆ ಯಾವುದೇ ಭದ್ರತೆ ಒದಗಿಸಿಲ್ಲ ಎಂದು ಅವರು ಆರೋಪಿಸಿದರು.

ಈ ಎಲ್ಲಾ ಅಂಶಗಳನ್ನು ಗಮನಿಸಿ ಈ ಬಾರಿಯ ಚುನಾವಣೆ ವೇಳೆ ಬಿಜೆಪಿ ಹಾಗೂ ಅದರ ಮೈತ್ರಿಕೂಟದ ವಿರುದ್ಧ ಮತ ಚಲಾಯಿಸಬೇಕು. ರಾಜ್ಯದಲ್ಲಿ ಇಂಡಿಯಾ ಒಕ್ಕೂಟದ ಭಾಗವಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಕಾರ್ಮಿಕರ ಹಿತದೃಷ್ಟಿಯಿಂದ ಚುನಾಯಿಸಬೇಕು ಎಂದು ಅವರು ಕೋರಿದರು.

ಫೆಡರೇಷನ್ ಜಿಲ್ಲಾಧ್ಯಕ್ಷ ಎಚ್.ಎಂ. ಬಸವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ, ಖಜಾಂಚಿ ಸೋಮಶಂಕರ್, ಕೃಷ್ಣ, ಮಹದೇವಸ್ವಾಮಿ ಇದ್ದರು.

click me!