
ಕೋಲಾರ (ಫೆ.22): ಸರ್ಕಾರವನ್ನು ನಾವು ಉದ್ಯೋಗ ಕೇಳುವುದಕ್ಕಿಂತ ಉದ್ಯೋಗವನ್ನು ಸೃಷ್ಟಿಸುವಂತ ಉದ್ಯಮಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕೆಂದು ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು. ದಲಿತ್ ಇಂಡಿಯನ್ ಚೆಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ವತಿಯಿಂದ ನಗರದ ಸಾಯಿಧಾಮ್ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ದಲಿತ ಉದ್ಯಮಿಗಳ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ತರಬೇತಿ ಕೇಂದ್ರಕ್ಕೆ 9 ಎಕರೆ ಭೂಮಿ: ಪರಿಶಿಷ್ಟ ಉಪಜಾತಿಗಳಿಗೆ ಮಾನ್ಯತೆ ನೀಡದೆ ಎಲ್ಲರೂ ಸಂಘಟಿತರಾದರೆ ಮಾತ್ರ ಸಮಾಜದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. ರಾಷ್ಟ್ರದಲ್ಲೇ ಅತಿ ಹೆಚ್ಚು ದಲಿತರನ್ನು ಹೊಂದಿರುವ ಕೋಲಾರ ಜಿಲ್ಲೆಯು ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ತರಬೇತಿ ಕೇಂದ್ರ ಸ್ಥಾಪಿಸಲು ಈಗಾಗಲೇ 9 ಎಕರೆ ಭೂಮಿ ಗುರುತಿಸಲಾಗಿದೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿಗಳೂ ಸಮ್ಮತಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.
ಮುಂದಿನ ಸಲ ಕಾಂಗ್ರೆಸ್ ಅಧಿಕಾರಕ್ಕೆ ತರುವುದು ಖಚಿತ: ಡಿ.ಕೆ.ಶಿವಕುಮಾರ್
ಮೀಸಲಾಯಿಯಲ್ಲೂ ಜಾತೀಯತೆ: ಕೆಲವು ಅಧಿಕಾರಿಗಳಿಗೆ ಸಮಾಜದ ಕಟ್ಟಕಡೆಯ ಜನತೆ ಬಗ್ಗೆ ಕಾಳಜಿ ಇಲ್ಲದೆ ಭ್ರಷ್ಟಾಚಾರದಲ್ಲಿ ತೊಡಗುವುದರಿಂದ ಕೆಟ್ಟ ಹೆಸರು ಮಂತ್ರಿಗಳಿಗೆ ಬರುತ್ತಿದೆ. ಇದರಿಂದ ಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾದ ಪ್ರಕರಣವು ನಡೆದಿದೆ. ರಾಜ್ಯದ ಉನ್ನತ ಅಧಿಕಾರಿ ಮಂಜುನಾಥ್ ಕೋಲಾರದಲ್ಲಿನ ತಮ್ಮ ಸಂಬಂಧಿಗಳಿಗೆ ಮಾತ್ರ 27 ಎಕರೆ ಜಾಗವನ್ನು ಕಾನೂನು ಬಾಹಿರವಾಗಿ ಕೈಗಾರಿಕೆ ಅಭಿವೃದ್ದಿಗೆ ಮಂಜೂರು ಮಾಡಿಕೊಡುವ ಮೂಲಕ ಮೀಸಲಾತಿಯಲ್ಲೂ ಜಾತಿಯತೆ ತೋರಿರುವುದು ವಿಷಾದನೀಯ ಎಂದರು.
ಮೀಸಲಾತಿ ಹೆಸರಿನಲ್ಲಿ ನೂರಾರು ಎಕರೆ ಪ್ರದೇಶವನ್ನು ಕೈಗಾರಿಕೆಗೆಂದು ಪಡೆದು ಕೇವಲ ಬೆರಳಕೆ ಎಕರೆಯಷ್ಟು ಜಮೀನು ಮಾತ್ರ ಬಳಸಿಕೊಂಡು ಕೆಲ ವರ್ಷದ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತ ರಿಯಲ್ ಎಸ್ಟೆಟ್ ದಂಧೆಗಳು ಬಹಳಷ್ಟು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಬೇನಾಮಿ ಹೆಸರಿನಲ್ಲಿ ಆಸ್ತಿಪಾಸ್ತಿಗಳನ್ನು ಹೊಂದಿರುವಂತ ಬಿಲಿಯನರ್ಸ್ಗಳು ನಮ್ಮ ದಲಿತ ಸಮುದಾಯದಲ್ಲಿ ತೆರೆಯ ಮರೆಯಲ್ಲಿದ್ದಾರೆ ಎಂದರು.
ದಾಖಲೆ ಸರಿಯಿದ್ದರೆ ಬ್ಯಾಂಕ್ ಸಾಲ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕೆಲವು ಯೋಜನೆಗಳಿಗೆ ಯಾವುದೇ ಭದ್ರತೆ ಇಲ್ಲದೆ ಸುಮಾರು 40 ಕೋಟಿ ರೂಗಳ ವರೆಗೆ ಸಾಲ ಸೌಲಭ್ಯವಿದೆ. ಆದರೆ ಬ್ಯಾಂಕಿನ ನಿಯಮಗಳ ಪ್ರಕಾರ ದಾಖಲೆಗಳನ್ನು ಸಲ್ಲಿಸಬೇಕು, ದಾಖಲೆಗಳು ಸಮರ್ಪಕವಾಗಿದ್ದು ಸಾಲ ನೀಡದೆ ಬ್ಯಾಂಕ್‌ಗಳು ತಿರಸ್ಕರಿಸಿದಲ್ಲಿ ನನ್ನ ಗಮನಕ್ಕೆ ತಂದರೆ ಕೊಡಲೇ ಕ್ರಮ ಕೈಗೊಂಡು ಸಾಲ ಕೊಡಿಸುವುದಾಗಿ ಭರವಸೆ ನೀಡಿದರು.
ಸಹಕಾರ ಸಂಘಗಳ ಚುನಾವಣಾ ಆಯುಕ್ತ ಎನ್.ಸಿ.ಮುನಿಸ್ವಾಮಿ ಮಾತನಾಡಿ, ಉದ್ಯಮಿಗಳೆಂದರೆ ರಿಯಲ್ ಎಸ್ಟೇಟ್ ಅಲ್ಲ. ಸಬ್ಸಿಡಿ ಪಡೆಯುವುದಲ್ಲ. ಉದ್ಯೋಗಗಳನ್ನು ಸೃಷ್ಟಿಸುವಂತಾಗಬೇಕು, ಸರ್ಕಾರದಲ್ಲಿ ಕೈಗಾರಿಕೆಗಳ ಅಭಿವೃದ್ದಿ ಹಲವಾರು ಯೋಜನೆಗಳಿವೆ ಆದರೆ ಇವುಗಳನ್ನು ನಾವು ಎಷ್ಟುಬಳಸುತ್ತಿದ್ದೇವೆ ಎಂಬುದರ ಕುರಿತು ಚಿಂತಿಸುವಂತಾಗಬೇಕು ಎಂದರು.
ಕಾಂಗ್ರೆಸ್, ಜೆಡಿಎಸ್‌ಗೆ ಭವಿಷ್ಯವಿಲ್ಲ: ಸಚಿವ ಅಶ್ವತ್ಥನಾರಾಯಣ
ಬಂಗಾರಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಡಿಐಸಿಸಿಐ ರಾಷ್ಟ್ರೀಯ ಉಪಾಧ್ಯಕ್ಷ ಡಾ.ರಾಜಾ ನಾಯಕ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಕ ಪಿಚ್ಚಯ್ಯ ರಾಪುರಿ, ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೆ.ಎಸ್.ಮಂಜುನಾಥ, ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ಕೆ.ಅಮರೇಶ, ಕೆ.ಎಸ್.ಎಫ್.ಸಿ ಶಾಖಾ ವ್ಯವಸ್ಥಾಪಕ ಬಿ.ಎನ್.ಸುಬ್ಬಾರೆಡ್ಡಿ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧಿಕಾರಿ ಆರ್.ಶ್ರೀನಿವಾಸ್, ಜಿಲ್ಲಾ ಸಂಯೋಜಕ ಎಸ್.ನಾರಾಯಣಸ್ವಾಮಿ, ಮುಖಂಡ ಶ್ರೀನಿವಾಸ್, ಖಾದಿ ಕಮಿಷನ್ ಸದಸ್ಯ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಬೆಳಮಾರನಹಳ್ಳಿ ಆನಂದ್ ಇದ್ದರು.