ಬಸವತತ್ವ ಪಾಲನೆಯಲ್ಲಿ ಇಸ್ಲಾಂ ಕುಟುಂಬ: ಲಿಂಗಾಯತ ಮಠಕ್ಕೆ ಮುಸ್ಲಿಂ ಯುವಕ ಪೀಠಾಧಿಕಾರಿ

By Kannadaprabha News  |  First Published Feb 21, 2020, 10:27 AM IST

ವೀರಶೈವ- ಲಿಂಗಾಯತ ಮಠದ ಉತ್ತರಾಧಿಕಾರಿಯಾಗಿ ಮುಸ್ಲಿಂ ಯುವಕ ನೇಮಕ ದಿವಾನ್‌ ರಹೀಮಾನ ಶರೀಫ್‌ ಮುಲ್ಲಾ| ಗದಗ ಜಿಲ್ಲೆಯ ರೋಣ ತಾಲೂಕಿನ ಪುಟ್ಟಗ್ರಾಮ ಅಸೂಟಿಯಲ್ಲಿ ನಿರ್ಮಾಣವಾಗುತ್ತಿರುವ ಖಜೂರಿಯ ಮುರುಘರಾಜೇಂದ್ರ ಕೋರಣೇಶ್ವರ ಮಠ| 


ಗದಗ(ಫೆ.21): ಮುಸ್ಲಿಂ ಯುವಕರೊಬ್ಬರನ್ನು ವೀರಶೈವ- ಲಿಂಗಾಯತ ಮಠದ ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಮೂಲಕ ಕಲಬುರಗಿ ಜಿಲ್ಲೆ ಖಜೂರಿಯ ಮುರುಘರಾಜೇಂದ್ರ ಕೋರಣೇಶ್ವರ ಮಠ (ಶಾಂತಿಧಾಮ) ಮಹತ್ವದ ಸಾಮಾಜಿಕ, ಧಾರ್ಮಿಕ ಪರಿವರ್ತನೆಗೆ ನಾಂದಿ ಹಾಡಿದೆ. 

ಗದಗ ಜಿಲ್ಲೆಯ ರೋಣ ತಾಲೂಕಿನ ಪುಟ್ಟಗ್ರಾಮ ಅಸೂಟಿಯಲ್ಲಿ ನಿರ್ಮಾಣವಾಗುತ್ತಿರುವ ಖಜೂರಿಯ ಮುರುಘರಾಜೇಂದ್ರ ಕೋರಣೇಶ್ವರ ಮಠ (ಶಾಂತಿಧಾಮ)ದ ಶಾಖಾ ಮಠಕ್ಕೆ ಉತ್ತರಾಧಿಕಾರಿಯಾಗಿ ದಿವಾನ್‌ ರಹೀಮಾನ ಶರೀಫ್‌ ಮುಲ್ಲಾ ಅವರನ್ನು ನೇಮಕ ಮಾಡಲಾಗಿದೆ. ಮುಲ್ಲಾ ಅವರಿಗೆ ಮೂರು ತಿಂಗಳ ಹಿಂದೆಯೇ ಲಿಂಗ ದೀಕ್ಷೆ ನೀಡಲಾಗಿದ್ದು, ಇದೀಗ ಉತ್ತರಾಧಿಕಾರಿ ಎಂದೂ ಸಹ ನೇಮಿಸಲಾಗಿದೆ. ಶೀಘ್ರದಲ್ಲಿಯೇ ಪಟ್ಟಾಧಿಕಾರ ಕಾರ್ಯಕ್ರಮ ನೆರವೇರಲಿದೆ.
12ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆ, ಸರ್ವಧರ್ಮ ಸಮನ್ವಯ ಸಾಧಿಸಿದ್ದ ಜಗಜ್ಯೋತಿ ಬಸವೇಶ್ವರರ ತತ್ವ, ಸಿದ್ಧಾಂತಗಳನ್ನು ಪಾಲಿಸುತ್ತಿರುವ ಕೋರಣೇಶ್ವರ ಮಠದ ಮುರುಘರಾಜೇಂದ್ರ ಶ್ರೀಗಳು ಇದೀಗ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಗೆ ಮುಂದಾಗುವ ಮೂಲಕ ಸಾಮಾಜಿಕ, ಧಾರ್ಮಿಕ ವಿಪ್ಲವದಿಂದ ದ್ವೇಷದ ಜ್ವಾಲೆಯೇ ಏಳುತ್ತಿರುವ ಈ ಸಂದರ್ಭದಲ್ಲಿ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ರಾಜ್ಯದ ಇತಿಹಾಸದಲ್ಲಿಯೇ ಧಾರ್ಮಿಕವಾಗಿ ಅತಿ ಮಹತ್ವದ ಘಟನೆ ಇದೆಂದು ಬಣ್ಣಿಸಲಾಗುತ್ತಿದೆ

Tap to resize

Latest Videos

ಹಿನ್ನೆಲೆ:

ಕಲಬುರ್ಗಿ ಜಿಲ್ಲೆ ಖಜೂರಿಯಲ್ಲಿರುವ ಮುರುಘರಾಜೇಂದ್ರ ಕೋರಣೇಶ್ವರ ಸಂಸ್ಥಾನ ಮಠವೂ ಮುರಘ ಪರಂಪರೆಯ ಮಠ. ಇಲ್ಲಿಯ ಸ್ವಾಮೀಜಿಗಳು ಸಹ ಅಪ್ಪಟ ಬಸವಪ್ರಿಯರು. ಅವರ ಮಠಕ್ಕೆ ಎಲ್ಲ ಜಾತಿ ಜನಾಂಗಗಳ ಭಕ್ತರಿದ್ದು, ಸದ್ಯ ಚರ್ಚೆಗೆ ಗ್ರಾಸವಾಗಿರುವ ಇಸ್ಲಾಂ ಧರ್ಮದವರನ್ನು ಅನುಯಾಯಿಗಳನ್ನಾಗಿ ಹೊಂದಿದ್ದಾರೆ. ಬಸವ ತತ್ವದಲ್ಲಿ ಮುನ್ನಾ ತೋರಿದ ಆಸಕ್ತಿಯನ್ನು ಗಮನಿಸಿದ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿ ಕಳೆದ ವರ್ಷದ ನವೆಂಬರ್‌ 10ರಂದು ಮುನ್ನಾಗೆ ಗದಗ ಜಿಲ್ಲೆಯ ಅಸೂಟಿ ಗ್ರಾಮದಲ್ಲಿಯೇ ಲಿಂಗದೀಕ್ಷೆ ನೀಡಿ, ಮುನ್ನಾನನ್ನು ದಿವಾನ್‌ ರಹೀಮಾನ ಶರೀಫ್‌ ಮುಲ್ಲಾ ಎಂದು ನಾಮಕರಣ ಮಾಡಿದ್ದರು. ಇದೀಗ ಅಸೂಟಿಯಲ್ಲಿಯೂ ತಮ್ಮ ಶಾಖಾ ಮಠವೊಂದನ್ನು ಸ್ಥಾಪಿಸುತ್ತಿದ್ದು ಅಲ್ಲಿಯ ಮಠಕ್ಕೆ ರಹೀಮಾನ್‌ ಶರೀಫ್‌ ಮುಲ್ಲಾ ಅವರನ್ನು ಉತ್ತರಾಧಿಕಾರಿ ಎಂದು ನೇಮಕ ಮಾಡಿದ್ದಾರೆ. ಈಗಾಗಲೇ ಲಿಂಗ ದೀಕ್ಷೆ ಪಡೆದುಕೊಂಡಿರುವ ದಿವಾನ್‌ ಶರೀಫರು ಫೆ.26ರ ನಂತರ ನಡೆಯಲಿರುವ ಬಸವ ತತ್ವ ಉತ್ಸವದಲ್ಲಿ ಅಧಿಕೃತವಾಗಿ ಮಠದ ಪೀಠವೇರುವ ಸಾಧ್ಯತೆ ಇದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

32 ವರ್ಷದ ದಿವಾನ್‌ ಶರೀಫ ಮುಲ್ಲಾ ಕುಟುಂಬಕ್ಕೆ ಅಸೂಟಿ ಗ್ರಾಮದ ಹೊರವಲಯದಲ್ಲಿ ಮೂರು ಎಕರೆ ಜಮೀನು ಇದೆ. ಅದೇ ಜಮೀನನ್ನೇ ಅವರ ತಂದೆ- ತಾಯಿ ಮಠಕ್ಕೆ ನೀಡಿದ್ದು, ಅದೇ ಸ್ಥಳದಲ್ಲಿಯೇ ಈಗ ಕೋರಣೇಶ್ವರ ಮಠವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ.

ಪೀಠಾಧಿಪತಿಯಾಗುತ್ತಿರುವ ಶರೀಫ ಅವರಿಗೆ ಈಗಾಗಲೇ ಮದುವೆಯಾಗಿದ್ದು, ನಾಲ್ಕು ಜನ ಮಕ್ಕಳೂ ಇದ್ದಾರೆ. ತಂದೆ ರಹಮಾನ್‌ ಸಾಬ್‌ ಹಾಗೂ ತಾಯಿ ಫಾತೀಮ ಕೋರಣೇಶ್ವರ ಮಠದ ಭಕ್ತರಾಗಿದ್ದರು. ಹಾಗಾಗಿ ತಮ್ಮ ಜಮೀನಿನಲ್ಲಿ ಮಠವನ್ನು ಕಟ್ಟಿಸಿ ಬಸವತತ್ವವನ್ನು ಪರಿಪಾಲನೆ ಮಾಡಬೇಕು ಎನ್ನುವುದು ಆ ಕುಟುಂಬದ ಉದ್ದೇಶವಾಗಿದೆ.

ದಿವಾನ್‌ ರಹೀಮಾನ್‌ ಶರೀಫ್‌ ಮುಲ್ಲಾ ಅವರು ಬಸವ ತತ್ವ, ವೀರಶೈವ, ಲಿಂಗಾಯತ ಧರ್ಮದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದಾರೆ. ಬಸವಣ್ಣನವರ ಸಾಮಾಜಿಕ ಕ್ರಾಂತಿಯಿಂದ ಪ್ರಭಾವಿತರಾಗಿದ್ದಾರೆ. ಅವರ ತಂದೆ ತಾಯಿ ಸಹ ಲಿಂಗಾಯಿತ- ವೀರಶೈವ ಧರ್ಮದ ತಿರುಳನ್ನು ಓದಿಕೊಂಡಿದ್ದು, ಮಗನೂ ಸಹ ಅದೇ ದಾರಿಯಲ್ಲಿ ನಡೆದಿದ್ದಾರೆ. ಈ ಕುಟುಂಬ ಮೊದಲಿನಿಂದಲೂ ಕೋರಣೇಶ್ವರ ಮಠದ ಭಕ್ತರಾಗಿದ್ದು, ಆಗಾಗ ಮಠಕ್ಕೆ ಹೋಗುತ್ತಿದ್ದರು. ತಮ್ಮ ಗ್ರಾಮದಲ್ಲೂ ಮಠದ ಶಾಖೆ ಆರಂಭಿಸುವಂತೆ ಶ್ರೀಗಳನ್ನು ಕೋರಿದ್ದು, ತಾವೇ ಜಮೀನು ನೀಡುವುದಾಗಿ ತಿಳಿಸಿದ್ದರು. ಇವರ ಭಕ್ತಿ, ಬಸವ ತತ್ವದಲ್ಲಿನ ನಂಬಿಕೆ, ಆಸಕ್ತಿ, ಅಧ್ಯಯನ ಶೀಲತೆಯನ್ನು ಮನ್ನಿಸಿ ಶ್ರೀಗಳು ಅವರ ಪುತ್ರನಿಗೆ ಲಿಂಗ ದೀಕ್ಷೆ ನೀಡಿ ನೀಡಿ ಇದೀಗ ಉತ್ತರಾಧಿಕಾರಿ ಎಂದು ಮಠಕ್ಕೆ ನೇಮಿಸಿದ್ದಾರೆ.
 

click me!