ಶಿವರಾತ್ರಿ ಅಂಗವಾಗಿ ಇಂದು ಎಲ್ಲಾ ಶಿವ ದೇಗುಲಗಳಲ್ಲಿ ವಿಶೇಷ ಪೂಜೆ| ಗುರುವಾರದಿಂದಲೇ ದೇಗುಲದ ಸಿಂಗಾರ ಕಾರ್ಯ|ಬಿಲ್ವ ಪತ್ರೆ ಸೇರಿದಂತೆ ಹೂವು, ಹಣ್ಣು, ತರಕಾರಿ ಖರೀದಿ ಜೋರು|ಕನಕ ನಗರದಲ್ಲಿ ‘ವಜ್ರ ಪಂಜರ’ ನಾಟಕ ಆಯೋಜನೆ|
ಬೆಂಗಳೂರು(ಫೆ.21): ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಗರದ ಶಿವ ದೇವಾಲಯಗಳಲ್ಲಿ ಗುರುವಾರದಿಂದಲೇ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಇಂದು(ಶುಕ್ರವಾರ) ನಡೆಯಲಿರುವ ಶಿವರಾತ್ರಿ ಹಬ್ಬದಂದು ವಿಶೇಷ ಪೂಜೆ, ಉಪವಾಸ ಮತ್ತು ಜಾಗರಣೆಯ ಮೂಲಕ ಶಿವ ಸ್ಮರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ನಗರದ ಕಾಡು ಮಲ್ಲೇಶ್ವರದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಗವಿಪುರದ ಗವಿಗಂಗಾಧರೇಶ್ವರ ದೇವಾಲಯ, ಗುಟ್ಟಹಳ್ಳಿಯ ಪಂಚಲಿಂಗೇಶ್ವರ ಸ್ವಾಮಿ ದೇವಾಲಯ, ಹಲಸೂರಿನ ಸೋಮೇಶ್ವರ, ಮುರುಗೇಶಪಾಳ್ಯದ ಶಿವ ದೇವಾಲಯ, ಆನಂದರಾವ್ ವೃತ್ತದ ಶಿವಸಾಯಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಗುರುವಾರದಿಂದಲೇ ಸಿಂಗಾರ ಕಾರ್ಯ ನಡೆಯುತ್ತಿತ್ತು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೆಂಗೇರಿಯ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಓಂಕಾರ ಆಶ್ರಮ ಮಹಾಸಂಸ್ಥಾನದ ಶ್ರೀದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ಶುಕ್ರವಾರದಿಂದ ಎರಡು ದಿನಗಳ ಕಾಲ ನಡೆಯುವ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಎಲ್ಲ ಭಕ್ತರಿಗೂ ಓಂಕಾರೇಶ್ವರ ಜ್ಯೋತಿರ್ಲಿಂಗ ಗರ್ಭಗುಡಿ ಪ್ರವೇಶಿಸಿ ದರ್ಶನ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಸವೇಶ್ವರನಗರದ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ಮಹಾ ಶಿವರಾತ್ರಿ ಆಚರಣೆಯ ಅಂಗವಾಗಿ ಮಹಾಶಿವರಾತ್ರಿ ಮತ್ತು ರುದ್ರಹೋಮ ಹಮ್ಮಿಕೊಂಡಿದೆ.
ಶ್ರೀಸತ್ಯ ಸಾಯಿ ಸೇವಾ ಸಂಘಟನೆ ವತಿಯಿಂದ ಕಾಡುಗೋಡಿಯ ಸಾಯಿ ಕೃಷ್ಣ ಕಲ್ಯಾಣ ಮಂಟಪದಲ್ಲಿ ಮಹಾಶಿವರಾತ್ರಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಭಕ್ತರಿಂದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಲ್ಲೇಶ್ವರದ ಐದನೇ ಅಡ್ಡ ರಸ್ತೆಯಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘದಿಂದ ಹರಿಹರಪುರ ಮಠದ ಶ್ರೀಗಳ ಅನುಗ್ರಹಿಸಿರುವ ಮೃತ್ತಿಕಾ ಶಿವಲಿಂಗವನ್ನು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಶಿವರಾತ್ರಿ ಹಬ್ಬದ ಪ್ರಯುಕ್ತ ಅಮರೇಶ್ವರ ವಿಜಯ ನಾಟಕ ಮಂಡಳಿ ವತಿಯಿಂದ ಆರ್.ಟಿ.ನಗರದ ಕನಕ ನಗರದ ಶ್ರೀಸಿದ್ಧಿವಿನಾಯಕ ಮತ್ತು ಶ್ರೀಮೀನಾಕ್ಷಿ ಸುಂದರೇಶ್ವರ ದೇವಸ್ಥಾನದ ಆವರಣದಲ್ಲಿ ‘ವಜ್ರ ಪಂಜರ’ ನಾಟಕವನ್ನು ಹಮ್ಮಿಕೊಂಡಿದೆ.
ಮಾರುಕಟ್ಟೆಗಳಲ್ಲಿ ವ್ಯಾಪಾರ
ಶಿವರಾತ್ರಿ ಹಬ್ಬದ ಪ್ರಯುಕ್ತ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಗುರುವಾರ ಬೆಳಗ್ಗೆಯಿಂದ ಜನ ಜಂಗುಳಿ ತುಂಬಿತ್ತು. ವಿಶೇಷವಾಗಿ ಬಿಲ್ವ ಪತ್ರೆ ಸೇರಿದಂತೆ ಹೂವು, ಹಣ್ಣು ತರಕಾರಿಗಳ ಖರೀದಿಯಲ್ಲಿ ಜನ ನಿರತರಾಗಿದ್ದರು.
ಇಂದು ಮುಂಜಾನೆಯಿಂದಲೇ ವಿಶೇಷ ಪೂಜೆ
ಇಂದು ಮುಂಜಾನೆಯಿಂದಲೇ ಎಲ್ಲ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಮೂಲಕ ಪೂಜೆ, ಮಂಗಳರಾತಿ, ಶಿವನ ಸ್ಮರಣೆ ನಡೆಯಲಿವೆ. ಶಿವನ ಸಹಸ್ರನಾಮ ಪಠಣ, ವೇದಾಂತ ಉಪನ್ಯಾಸ, ಸಂಗೀತೋತ್ಸವ ಮತ್ತು ಅಹೋರಾತ್ರಿ ಶಿವನಾಮ ಜಪ ನಡೆಯಲಿದೆ. ದೇವಾಲಯಗಳಿಗೆ ಹೆಚ್ಚು ಭಕ್ತರು ಬರುವ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ.