ನಾನು ನಿಮಗಿಂತಲೂ ಸೀನಿಯರ್. ನನಗೆ ಡಿಕ್ಟೇಟ್ ಮಾಡಲು ಬರಬೇಡಿ. ಇದೇ ಕೊನೆ... ಇದನ್ನು ಮುಂದುವರೆಸಿದರೆ ಚೆನ್ನಾಗಿರುವುದಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೇರವಾಗಿ ಎಚ್ಚರಿಸಿದ್ದಾರೆ.
ಬೆಂಗಳೂರು(ಫೆ.21): ಸ್ಪೀಕರ್ ಆದವರು ಆ ಸ್ಥಾನದ ಘನತೆ, ಗೌರವ ಉಳಿಸುವಂತೆ ವರ್ತಿಸಿ. ನಾನು ನಿಮಗಿಂತಲೂ ಸೀನಿಯರ್. ನನಗೆ ಡಿಕ್ಟೇಟ್ ಮಾಡಲು ಬರಬೇಡಿ. ಇದೇ ಕೊನೆ. ಇದನ್ನು ಮುಂದುವರೆಸಿದರೆ ಚೆನ್ನಾಗಿರುವುದಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೇರವಾಗಿ ಎಚ್ಚರಿಸಿದ್ದಾರೆ.
ಸದಾ ಶಾಂತ ಹಾಗೂ ಮೃದು ಭಾಷಿಕರಾಗಿಯೇ ಕಾಣಿಸಿಕೊಳ್ಳುವ ರಾಮಲಿಂಗಾ ರೆಡ್ಡಿ ಅವರು ಗುರುವಾರ ಸದನದಲ್ಲಿ ಏಕಾಏಕಿ ರೌದ್ರಾವತಾರ ಪ್ರದರ್ಶಿಸಿ ವಿಧಾನಸಭೆ ಸದಸ್ಯರನ್ನು ಅಚ್ಚರಿಗೆ ಗುರಿ ಮಾಡಿದರು. ರಾಜ್ಯಪಾಲರ ವಂದನಾರ್ಪಣೆ ನಿರ್ಣಯದ ಮೇಲೆ ಮಾತನಾಡಲು ರಾಮಲಿಂಗಾರೆಡ್ಡಿ, ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವಕಾಶ ಕೇಳಿದರು. ಈ ವೇಳೆ ಮೊದಲು ಶಿಸ್ತು ಪಾಲಿಸಿ. ನಾನು ಹೆಸರು ಕರೆದಾಗ ಮಾತನಾಡಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು. ಆದರೂ, ಅವಕಾಶ ನೀಡುವಂತೆ ಶಿವಲಿಂಗೇಗೌಡ ಪಟ್ಟು ಹಿಡಿದರು.
undefined
ಸಚಿವರ ರಾಜೀನಾಮೆ ಕೊಡ್ಸಿ ಮುಂದೆ ಬಾ: ಯತ್ನಾಳ್‌ಗೆ ಸಿದ್ದು ಆಹ್ವಾನ
ಆಗ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನಾನು ಹೆಸರು ಕರೆದವರು ಮಾತ್ರ ಮಾತನಾಡಿ. ನನಗೆ ಯಾರಿಗೆ ಅವಕಾಶ ಕೊಡಬೇಕು ಎನಿಸುತ್ತದೆಯೋ ಅವರ ಹೆಸರು ಕರೆಯುತ್ತೇನೆ. ಸದನದಲ್ಲಿ ಶಾಸಕರು ಹೇಗೆ ಭಾಗವಹಿಸಬೇಕು ಎಂಬುದಕ್ಕೆ ನಿಯಮಾವಳಿ ಇದೆ. ಅದು ಮೀರಿದರೆ ನಾನೇನು ಕ್ರಮ ಕೈಗೊಳ್ಳಬೇಕು ಎಂಬುದಕ್ಕೂ ನಿಯಮ ಇದೆ. ಅಪಾಯಕ್ಕೆ ಅವಕಾಶ ಕೊಡಬೇಡಿ ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಗರಂ ಆದ ರಾಮಲಿಂಗಾರೆಡ್ಡಿ, ಶಾಲಾ ಮಕ್ಕಳಿಗೆ ಹೆದರಿಸಿದಂತೆ ಹೆದರಿಸಲು ಬರಬೇಡಿ. ನಿಮ್ಮ ಮನಸ್ಸಿಗೆ ಯಾರಿಗೆ ಕೊಡಬೇಕು ಎನಿಸುತ್ತದೆಯೋ ಅವರಿಗೆ ಹೇಗೆ ಕೊಡುತ್ತೀರಿ ಎಂದು ಪ್ರಶ್ನೆ ಮಾಡಿದರು.
ಮಹಾಶಿವರಾತ್ರಿ: ಶಿವನ ಪೂಜೆ, ಉಪವಾಸ, ಜಾಗರಣೆಗೆ ಬೆಂಗಳೂರು ಸಜ್ಜು
ವಿಶ್ವೇಶ್ವರ ಹೆಗಡೆ ಕಾಗೇರಿ, ಹೌದು. ನಾನು ಹೇಗೆ ನಡೆಸಬೇಕು ಎಂದು ನನಗೆ ನೀವು ಹೇಳಬೇಕಾಗಿಲ್ಲ. ನೀವು ಕುಳಿತುಕೊಳ್ಳಿ ಅಷ್ಟೇ ಎಂದು ಹೇಳಿದರು. ಈ ಮಾತಿಗೆ ಕ್ರುದ್ಧರಾದ ರಾಮಲಿಂಗಾ ರೆಡ್ಡಿ ಅವರು ಸ್ಪೀಕರ್ ಕಡೆಗೆ ತೋರು ಬೆರಳು ತೋರುತ್ತಾ, ‘ನಾನು ನಿಮಗಿಂತಲೂ ಸೀನಿಯರ್ ಇದ್ದೀನಿ. ನಿಮಗಿಂತಲೂ ಮೊದಲೇ ಸದನಕ್ಕೆ ಬಂದಿದ್ದೇನೆ. ನನಗೆ ಡಿಕ್ಟೇಟ್ ಮಾಡಲು ಬರಬೇಡಿ. ನನಗೆ ಶಿಸ್ತು ಹೇಳಿಕೊಡಲು ಬರಬೇಡಿ. ಇದೇ ಕೊನೆ.. ಇದನ್ನು ಮುಂದುವರೆಸಿದರೆ ಚೆನ್ನಾಗಿರುವುದಿಲ್ಲ’ ಎಂದು ಎಚ್ಚರಿಸಿದರು.
ಕ್ರಮ ಕೈಗೊಳ್ಳಬೇಕಾಗುತ್ತದೆ- ಕಾಗೇರಿ:
ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನೀವು ಈ ರೀತಿ ಮಾತನಾಡಿದರೆ ನಾನು ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದಕ್ಕೆ ಮತ್ತಷ್ಟುಕ್ರುದ್ಧರಾದ ರಾಮಲಿಂಗಾರೆಡ್ಡಿ, ‘ಏನು ಮಾಡುತ್ತೀರಿ? ಏನು ನನ್ನ ಹೆದರಿಸೋಕೆ ಬರುತ್ತೀರಾ?’ ಎಂದು ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ರಾಮಲಿಂಗಾರೆಡ್ಡಿ ಅವರ ಬಳಿ ಬಂದು ತಿಳಿ ಹೇಳುವ ಪ್ರಯತ್ನ ಮಾಡಿದರು. ಬಳಿಕ ಹಿರಿಯ ಸದಸ್ಯರಿಗೆ ಮಾತನಾಡಲು ಅವಕಾಶ ನೀಡದ ಮೇಲೆ ಈ ಸದನಕ್ಕೆ ಏಕೆ ಬರಬೇಕು. ನೀವೇ ಸದನ ಮಾಡಿಕೊಳ್ಳಿ ಎಂದು ಸದನದಿಂದ ಹೊರ ನಡೆದರು.
ಸೌಮ್ಯಾರೆಡ್ಡಿಯಿಂದಲೂ ಆರೋಪ:
ಬಳಿಕ ಜಯನಗರ ಶಾಸಕಿ ಸೌಮ್ಯಾರೆಡ್ಡಿ, ನೀವು ಯಾವಾಗಲೂ ನಮಗೆ ಮಾತನಾಡಲು ಅವಕಾಶ ಕೊಡುವುದಿಲ್ಲ. ಇಂದಿಗೆ ಎರಡನೇ ಅಧಿವೇಶನವೂ ಪೂರ್ಣಗೊಂಡಿದೆ. ನಮಗೆ ಎರಡೂ ಅಧಿವೇಶನದಿಂದ ಒಂದು ಸಲವಾದರೂ ಮಾತನಾಡಲು ಅವಕಾಶ ನೀಡಿಲ್ಲ. ಹೀಗೆ ಮಾಡಿದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.