ಬಾಗಲಕೋಟೆ: ಕೂಡಲಸಂಗಮ ಶ್ರೀಗಳ ಹೇಳಿಕೆಗೆ ಮುಸ್ಲಿಂ ಯುನಿಟಿ ಖಂಡನೆ

By Kannadaprabha NewsFirst Published Dec 28, 2022, 1:45 PM IST
Highlights

ಸ್ವಾಮೀಜಿ ಅವರು ಒಂದು ಧರ್ಮವನ್ನು ದ್ವೇಶ ಮಾಡುವ ರೀತಿಯಲ್ಲಿ ನೀಡಿರುವ ಹೇಳಿಕೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅಬ್ದುಲ್‌ ಜಬ್ಬಾರ ಕಲಬುರ್ಗಿ 

ಬಾಗಲಕೋಟೆ(ಡಿ.28): ಮುಸ್ಲಿಂರು ಈ ದೇಶದಲ್ಲಿ ಹುಟ್ಟಿದವರಲ್ಲ, ಆದರೂ ಸಹ ಅವರಿಗೆ ಅಲ್ಪ ಸಂಖ್ಯಾತರು ಎಂದು ಪರಿಗಣಿಸಿ ಮೀಸಲಾತಿ ನೀಡಲಾಗಿದೆ ಎಂದು ಹೇಳಿರುವ ಕೂಡಲಸಂಗಮದ ಜಯಮೃತ್ಯಂಜಯ ಶ್ರೀಗಳ ಹೇಳಿಕೆಗೆ ಕರ್ನಾಟಕ ಮುಸ್ಲಿಂ ಯುನಿಟಿ ಖಂಡಿಸಿದೆ. ಸಂಘಟನೆಯ ಸಂಚಾಲಕ ಅಬ್ದುಲ್‌ ಜಬ್ಬಾರ ಕಲಬುರ್ಗಿ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾಮೀಜಿ ಅವರು ಒಂದು ಧರ್ಮವನ್ನು ದ್ವೇಶ ಮಾಡುವ ರೀತಿಯಲ್ಲಿ ನೀಡಿರುವ ಹೇಳಿಕೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟಕ್ಕೆ ಮುಸ್ಲಿಂ ಸಮುದಾಯ ಯಾವತ್ತೂ ವಿರೋಧಿ​ಸಿಲ್ಲ. ಬದಲಾಗಿ ಇದೇ ಶ್ರೀಗಳ ನೇತೃತ್ವದಲ್ಲಿ ಕೂಡಲಸಂಗಮದಿಂದ ಆರಂಭಗೊಂಡ ಪಾದಯಾತ್ರೆಗೆ ಹುನಗುಂದ ಪಟ್ಟಣದಲ್ಲಿ ಇಡಿ ಮುಸ್ಲಿಂ ಸಮುದಾಯ ಸ್ವಾಗತ ಕೋರಿತ್ತು. ಹೀಗಿದ್ದರೂ ಸಹ ಸಮುದಾಯವನ್ನು ದ್ವೇಶ ಮಾಡುವಂತಹ ಹೇಳಿಕೆಯನ್ನು ಏಕೆ ನೀಡಿದ್ದಾರೆ? ತಾವು ನೀಡಿರುವ ಹೇಳಿಕೆಯನ್ನು ಸ್ವಯಂ ಪ್ರೇರಿತರಾಗಿ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ದಲಿತರ ಶ್ರೇಯೋಭಿವೃದ್ಧಿಗೆ ಸವಲತ್ತು ಪಡೆದುಕೊಳ್ಳಿ: ಸಚಿವ ಕಾರಜೋಳ

1921ರಲ್ಲಿಯೇ ಮುಸ್ಲಿಂರಿಗೆ ಮೀಸಲಾತಿ:

ಮೀಸಲಾತಿಯನ್ನು ಮುಸ್ಲಿಂರಿಗೆ ಧರ್ಮದ ಆಧಾರದ ಮೇಲೆ ನೀಡಿಲ್ಲ. ಬದಲಾಗಿ ಸಾಮಾಜಿಕವಾಗಿ ಹಿಂದುಳಿದಿರುವುದನ್ನು ಪರಿಗಣಿಸಿ ಮೀಸಲಾತಿಯನ್ನು ನೀಡಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 1921ರಲ್ಲಿಯೇ ಮೈಸೂರು ಮಹರಾಜರು ಲೆಸ್ಲಿ ಮಿಲ್ಲರ್‌ ಆಯೋಗ ರಚಿಸಿ ಸ್ಪಷ್ಟವಾದ ನಿಲುವು ತೆಗೆದುಕೊಂಡಿದ್ದರ ಪರಿಣಾಮ ಮುಸ್ಲಿಂ ಸಮುದಾಯಕ್ಕೆ ಅಂದಿನಿಂದಲೇ ಮೀಸಲಾತಿ ಆರಂಭಗೊಂಡಿದೆ. ಹೀಗಿರುವಾಗ ಶ್ರೀಗಳ ಹೇಳಿಕೆ ಯಾವ ಆಧಾರದ ಮೇಲೆ ನಿಂತಿದೆ ಎಂದು ತಿಳಿಸಿದರು.

ಹಿಂದುಳಿದ ಮರ್ಗಗಳ ಆಯೋಗ ಮೀಸಲಾತಿ ಕೊಡುವುದರ ಕುರಿತು ನಿರ್ಧರಿಸುತ್ತದೆ. ಈ ಹಿಂದೆ ರಾಜ್ಯದಲ್ಲಿ ಹಾವನೂರು ಆಯೋಗ, ಚನ್ನಪ್ಪ ರಡ್ಡಿ ಆಯೋಗ, ವೆಂಕಟಸ್ವಾಮೀ ಆಯೋಗಗಳು ಅಧ್ಯಯನ ನಡೆಸಿ ಸಾಮಾಜಿಕವಾಗಿ ಹಿಂದುಳಿದಿರುವುದನ್ನು ಪರಿಣಿಸಿ ಸಮುದಾಯಕ್ಕೆ 2ಬಿ ಅಡಿ ಶೇ.4ರಷ್ಟುಮೀಸಲಾತಿಯನ್ನು ನೀಡಿದ್ದಾರೆ. ಇದನ್ನು ಪರಿಗಣಿಸದೇ ಈ ದೇಶದಲ್ಲಿ ಮುಸ್ಲಿಂರು ಹುಟ್ಟಿದವರಲ್ಲ ಎಂಬ ಶ್ರೀಗಳ ಹೇಳಿಕೆ ಸಮುದಾಯಕ್ಕೆ ಬಹಳ ಬೇಸರವನ್ನುಂಟು ಮಾಡಿದೆ ಎಂದು ನೋವು ವ್ಯಕ್ತಪಡಿಸಿದರು.

ಜಿಲ್ಲಾ ವಕ್ಫ್ಅಧ್ಯಕ್ಷ ಸರಕಾವಸ ಮಾತನಾಡಿ, ಪಂಚಮಸಾಲಿ ಸಮುದಾಯದವರ ಜೊತೆ ಉತ್ತಮ ಸಂಬಂಧವಿರುವ ಮುಸ್ಲಿಂ ಸಮುದಾಯ ರಾಜ್ಯದಲ್ಲಿ 40 ವಿಧಾನಸಭಾ ಕ್ಷೇತ್ರದಲ್ಲಿ ಪಂಚಮಸಾಲಿ ಅಭ್ಯರ್ಥಿಗಳ ಗೆಲುವನ್ನು ನಿರ್ಧರಿಸುತ್ತದೆ. ಇದನ್ನು ಶ್ರೀಗಳು ಅರ್ಥ ಮಾಡಿಕೊಂಡು ಸಮುದಾಯಗಳ ನಡುವೆ ದ್ವೇಶ ವೈಷಮ್ಯ ಬಿತ್ತುವ ಕೆಲಸವನ್ನು ಮಾಡಬಾರದು ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ವಕ್‌​ಉಪಾಧ್ಯಕ್ಷ ಎ.ಐ.ಜಮಾದಾರ, ರಫೀಕ್‌ ಮುಲ್ಲಾ ಉಪಸ್ಥಿತರಿದ್ದರು.

click me!