
ಬಂಗಾರಪೇಟೆ(ನ.22): ಮುಸ್ಲಿಂ ಸಮುದಾಯದಲ್ಲಿ ಜನಿಸಿ ಸುಮಾರು 20 ವರ್ಷಗಳ ಕಾಲ ರಾಮನ ಜಪ ಮಾಡುತ್ತಾ ಶ್ರೀರಾಮನಾಮವನ್ನು ಕೋಟಿ ಸಾರಿ ಬರೆದಿದ್ದ ಪಾಚಾಸಾಭಿ (100) ವಯೋಸಹಜ ಕಾಯಿಲೆಯಿಂದ ನಿನ್ನೆ(ಸೋಮವಾರ) ಸಂಜೆ ಮೃತಪಟ್ಟಿದ್ದಾರೆ.
ಬಂಗಾರಪೇಟೆ ತಾಲೂಕು ಮಾಗೊಂದಿ ಪಾಚಾಸಾಭಿ ಕನ್ನಡದಲ್ಲಿ ಲೋವರ್ ಸೆಕೆಂಡರಿ ಪಾಸಾಗಿ, ಮೈಸೂರು ಮಹಾರಾಜರ ಕಾಲದಲ್ಲಿ ಉಪಾಧ್ಯಾಯರಾಗಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸೇವೆಯಲ್ಲಿದ್ದಾಗಲೇ ರಜೆಯನ್ನು ಹಾಕಿ ದೇಶಾಂತರ ಹೊರಟು 20 ವರ್ಷಗಳ ಕಾಲ ಸಾಧು ಸಂತರ ಜೊತೆ ಇಡೀ ದೇಶವನ್ನು ಸುತ್ತಾಡಿದರು.
ರಾಯಚೂರು: ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸದಮ್ ಸಿದ್ದೀಖ್ ಇನ್ನಿಲ್ಲ
ಭದ್ರಾಚಲಂನಲ್ಲಿ ಶ್ರೀರಾಮನ ದರ್ಶನ ಪಡೆದು ರಾಮ ನಾಮವನ್ನು ಕೋಟಿ ಬಾರಿ ಬರೆಯಲು ದೃಢ ಸಂಕಲ್ಪ ತೆಗೆದುಕೊಂಡು ಮನೆಗೆ ಬಂದು ರಾಮನಾಮವನ್ನು ಕೋಟಿ ಸಾರಿ ಬರೆದರು. ಅಯೋದ್ಯೆಗೆ ಹೋಗಿ ಶ್ರೀರಾಮನಾಮ ಕೋಟಿಯ ಭಂಡಾರವನ್ನು ರಾಮನಿಗೆ ಸಮರ್ಪಿಸಬೇಕು ಎಂಬ ಮಹದಾಸೆಯನ್ನು ಹೊಂದಿದ್ದರು. ಆದರೆ ಶ್ರೀರಾಮನಾಮ ಕೋಟಿಯ ಭಂಡಾರವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಮಾಚ್‌ರ್‍ನಲ್ಲಿ ಭದ್ರಾಚಲಂಗೆ ತಲುಪಿಸಿದ್ದರು. ಪಾಚಾಸಾಭಿಯ ಅಂತ್ಯ ಸಂಸ್ಕಾರ ಮಾಗೊಂದಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.