ಮಂಗಳೂರು: ಪ್ಯಾಂಟ್, ಶರ್ಟ್,ಟೈ, ಶೂ ಧರಿಸಿ, ಮೇಕಪ್ ಮಾಡಿದ ಐದು ಮಂದಿ ಯುವತಿಯರು ನಗರದಲ್ಲಿ ಹೈಟೆಕ್ ಭಿಕ್ಷಾಟನೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಇವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.
ನಾವು ರಾಜಸ್ಥಾನದ ರಾಣಿಪುರದವರು. ನೆರೆ ಸಂತ್ರಸ್ತರಾಗಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದು ಹೇಳುತ್ತಾ ಭಿಕ್ಷಾಟನೆ ಮಾಡುತ್ತಿದ್ದ ಅವರ ಕುರಿತು, ಸ್ವಚ್ಛ ಭಾರತ್ ಅಭಿಯಾನದ ಕಾರ್ಯಕರ್ತ ಸೌರಜ್ ಮಂಗಳೂರು ಎಂಬವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಕದ್ರಿ ಪೊಲೀಸರು ಅವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾರೆ.
ತಮ್ಮ ಊರಿನಲ್ಲಿ ನೆರೆ ಬಂದಿದ್ದು, ಅಸ್ತಿಪಾಸ್ತಿ ಎಲ್ಲ ಕೊಚ್ಚಿಹೋಗಿದೆ. ಆಹಾರ ಬಟ್ಟೆ ಬರೆ ಇಲ್ಲದೆ ಸಂತ್ರಸ್ತರಾಗಿದ್ದೇವೆ ಎಂದು ಪತ್ರವೊಂದನ್ನು ಹಿಡಿದುಕೊಂಡು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು.
ಇವರ ಬಗ್ಗೆ ಕನಿಕರ ಪಟ್ಟು ಕೆಲವರು ಹಣ ನೀಡುತ್ತಿದ್ದರು. ಹಣ ಪಡೆದವರಿಂದ ಸಹಿ ಮತ್ತು ಎಷ್ಟು ಮೊತ್ತ ಎಂದು ಬರೆಸಿಕೊಳ್ಳುತ್ತಿದ್ದರು. ಕಡಿಮೆ ಹಣ ಬರೆದವರ ಮೊತ್ತವನ್ನು ಯುವತಿಯರೇ ತಿದ್ದಿ ಹೆಚ್ಚು ಬರೆದು ಇತರರಿಂದ ಹೆಚ್ಚು ವಸೂಲಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಇಂತಹ ಹಲವು ಗುಂಪುಗಳು ನಗರದಲ್ಲಿ ಕಾರ್ಯಾಚರಿಸುತ್ತಿದೆ. ವಿವಿಧ ಕಡೆಗಳಲ್ಲಿ ಇದನ್ನು ಗಮನಿಸಿದ್ದೇನೆ. ಈ ಬಾರಿ ಸಿಕ್ಕಿ ಬಿದ್ದಿದ್ದಾರೆ. ಯುವತಿಯರ ಕುರಿತು ಕನಿಕರದಿಂದ ಕೆಲವರು ಹಣ ನೀಡುತ್ತಿದ್ದಾರೆ. ಈಗಾಗಲೇ ಹಲವು ಸಾವಿರ ರು. ಸಂಗ್ರಹಿಸಿದ್ದಾರೆ. ಆಸ್ತಿ ಕಳೆದುಕೊಂಡಿರುವುದಕ್ಕೆ ದಾಖಲೆಗಳು, ವೈಯಕ್ತಿಕ ಗುರುತಿನ ಚೀಟಿಯೂ ಅವರಲ್ಲಿ ಇಲ್ಲ. ಕಾಣದ ವ್ಯಕ್ತಿಗಳು ಇವರನ್ನು ನಿಯಂತ್ರಿಸುತ್ತಿರುವ ಸಾಧ್ಯತೆಯಿದೆ ಎಂದು ಸೌರಜ್ ಹೇಳುತ್ತಾರೆ.
ಇದನ್ನೂ ಓದಿ: