ಕೆಲ ಮಠಾಧೀಶರ ವಿರುದ್ಧ ಮಹಿಳೆಯರಿಬ್ಬರು ಮಾತನಾಡಿರುವ ಆಡಿಯೋ ನಿರಾಧಾರವಾಗಿದ್ದು, ಮಠಾಧೀಶರ ಹಿತರಕ್ಷಣೆಗೆ ಬಿಜೆಪಿ ಬದ್ಧವಾಗಿದೆ ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ, ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.
ಬೆಳಗಾವಿ (ಸೆ.11) : ಕೆಲ ಮಠಾಧೀಶರ ವಿರುದ್ಧ ಮಹಿಳೆಯರಿಬ್ಬರು ಮಾತನಾಡಿರುವ ಆಡಿಯೋ ನಿರಾಧಾರವಾಗಿದ್ದು, ಮಠಾಧೀಶರ ಹಿತರಕ್ಷಣೆಗೆ ಬಿಜೆಪಿ ಬದ್ಧವಾಗಿದೆ ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ, ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಬ್ಬರು ಮಠಾಧೀಶರ ಬಗ್ಗೆ ಮಾತನಾಡಿರುವ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದರಿಂದ ನೊಂದು ಬೈಲಹೊಂಗಲ ತಾಲೂಕಿನ ನೇಗಿನಹಾಳ ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾದರು. ತಮ್ಮ ವಿರುದ್ಧ ಸುಳ್ಳು ಆಪಾದನೆಯ ಆಡಿಯೋ ಕಿವಿಗೆ ಬಿದ್ದ ತಕ್ಷಣ ಮಾನಸಿಕವಾಗಿ ನೊಂದಿದ್ದ ಶ್ರೀಗಳನ್ನು, ಕೆಲ ಕುಹಕಿಗಳು ಇದನ್ನೇ ದೊಡ್ಡದಾಗಿ ಮಾಡಿದ್ದರಿಂದ ನಾವು ಶ್ರೀಗಳನ್ನು ಕಳೆದುಕೊಂಡೆವು ಎಂದರು.
POCSO Case ಚಿತ್ರದುರ್ಗ ಮುರುಘಾ ಶ್ರೀಗಳಿಗೆ ಶಾಕ್ ಕೊಟ್ಟ ಕೋರ್ಟ್, ಶರಣರಿಗೆ ಜೈಲೇ ಗತಿ..!
ಮಠಾಧೀಶರ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸಿ, ಆ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಮಠಾಧೀಶರ ಚಾರಿತ್ರ್ಯ ಹಾಳು ಮಾಡಲಾಗುತ್ತಿದೆ. ಈ ನಾಡಿನಲ್ಲಿ ಸಾಧು ಸಂತರ ಹಾಗೂ ಸನ್ಯಾಸಿಗಳ ತ್ಯಾಗದಿಂದ ಇಂದು ಪ್ರತಿಯೊಂದು ಸಮಾಜದ ಜನರು ಅವರ ಮಾರ್ಗದರ್ಶನದಲ್ಲಿ ಸಂಸ್ಕಾರಯುತವಾಗಿ ಸಾಮರಸ್ಯದ ಜೀವನ ನಡೆಸುವಾಗ ಕೆಲ ಪಟ್ಟಭದ್ರ ಹಿತಾಸಕ್ತಿಯ ಜನರ ಆಧಾರರಹಿತ ಟೀಕೆ ಟಿಪ್ಪಣೆಗಳಿಂದ ಧಾರ್ಮಿಕ ಗುರು ಪರಂಪರೆಗೆ ಧಕ್ಕೆ ಉಂಟಾಗುತ್ತಿದೆ ಎಂದರು.
ಭಾರತ ಪ್ರಪಂಚಕ್ಕೆ ಸಂಸ್ಕಾರ, ಸಂಸ್ಕೃತಿ ಹಾಗೂ ಧಾರ್ಮಿಕ ವಿಚಾರ ನೀಡಿದ ಹಾಗೂ ನೀಡುತ್ತಿರುವ ದೇಶವಾಗಿದೆ. ಈ ದೇಶದಲ್ಲಿರುವ ಋುಷಿ ಮುನಿಗಳು, ಸನ್ಯಾಸಿಗಳು ಇರುವಷ್ಟುಯಾವ ದೇಶದಲ್ಲಿಯೂ ಇಲ್ಲ. ಇವರಿಗೆ ನೀಡುವ ಪೂಜ್ಯನೀಯ ಸ್ಥಾನ ದೇಶದಲ್ಲಿ ಬೇರೆ ಯಾರಿಗೂ ಸಿಗದು. ಆದರೆ ಕೆಲವೊಂದು ಷಡ್ಯಂತ್ರಗಳ ಮೂಲಕ ಇಂದು ರಾಜ್ಯದಲ್ಲಿ ಕೆಲ ಮಠಾಧೀಶರ ಬಗ್ಗೆ ಇಲ್ಲಸಲ್ಲದ ನಿರರ್ಥಕ ಅರೋಪಗಳನ್ನು ಮಾಡುತ್ತಾ ಪರಸ್ಪರ ಮಾತನಾಡಿದ ಮಹಿಳೆಯರಿಬ್ಬರು ಮಾಡಿದ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ನಾಡಿನ ಅನೇಕ ಮಠಾಧೀಶರಿಗೆ ಮುಜುಗರ ಉಂಟು ಮಾಡುವುದರೊಂದಿಗೆ ಅವರ ಚಾರಿತ್ರ್ಯ ಹಾಳುಮಾಡುವ ಉದ್ದೇಶ ಹೊಂದಿದೆ. ಮಠಾಧೀಶರ ಮೇಲೆ ಲೈಂಗಿಕ ಅಸ್ತ್ರವನ್ನಿಟ್ಟುಕೊಂಡು ವ್ಯವಸ್ಥಿತ ಸಂಚು ರೂಪಿಸಿರುವ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಾನು ಮುಂದೆಯೂ ಮುರುಘಾ ಮಠಕ್ಕೆ ಹೋಗಿ, ದರ್ಶನ ಮಾಡುವೆ: ಎಂ.ಬಿ.ಪಾಟೀಲ್
ಮಠಾಧೀಶರ ವಿರುದ್ಧ ಸುಳ್ಳು ಆರೋಪ ಹೊರಿಸಿ ಮಾತನಾಡಿರುವ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಯಾರಿಗಾದರೂ ಅನ್ಯಾಯವಾಗಿದ್ದರೆ ಅವರಿಗೆ ನ್ಯಾಯ ಸಿಗಲೇಬೇಕು. ಯಾವುದೆ ವ್ಯಕ್ತಿ ಎಷ್ಟೇ ದೊಡ್ಡವರಿರಲಿ ಅವರು ತಪ್ಪು ಮಾಡಿದ್ದರೆ ಈ ಮಣ್ಣಿನ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲು ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ನೀಡಿದ ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ಇದನ್ನು ಬಿಟ್ಟು ವಾಕ್ ಸ್ವಾತಂತ್ರ್ಯ ಇದೆ ಎಂದು ಧರ್ಮದ ಅಪಮಾನ ಮಾಡುವುದು, ಈ ರೀತಿ ಎಲ್ಲಾ ಮಠಾಧೀಶರ ಬಗ್ಗೆ ಚಾರಿತ್ರ್ಯ ಹಾಳು ಮಾಡುವವರನ್ನು ತಕ್ಷಣ ಬಂಧಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವುದೇ ಬಿಜೆಪಿ ನಿಲುವಾಗಿದೆ ಎಂದರು.