ರಸ್ತೆ ಗುಂಡಿಗೆ ಕಟ್ಟಡ ತ್ಯಾಜ್ಯ ಸುರಿದ ಪಾಲಿಕೆ, ಅಗತ್ಯಕ್ಕಿಂತ ಹೆಚ್ಚು ತ್ಯಾಜ್ಯ ಸುರಿದು ಅವಾಂತರ ಮೈಸೂರು ರೋಡಲ್ಲಿ ಬೈಕ್ ಸಂಚಾರಕ್ಕೆ ಸವಾಲು. ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು (ಸೆ.11): ನಗರದಲ್ಲಿ ನಿರಂತರ ಮಳೆಯಿಂದ ರಸ್ತೆ ಗುಂಡಿ ಸಂಖ್ಯೆ ಹೆಚ್ಚಾಗಿದ್ದು, ವಾಹನ ಸವಾರರು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮೈಸೂರು ರಸ್ತೆಯಲ್ಲಿ ಗುಂಡಿಗೆ ಕಟ್ಟಡ ತ್ಯಾಜ್ಯ ಸುರಿದು ಬಿಬಿಎಂಪಿ ಅಧಿಕಾರಿಗಳು ಅವೈಜ್ಞಾನಿಕವಾಗಿ ಕಟ್ಟಡ ಅವಶೇಷ (ಡೆಬ್ರಿ)ದಿಂದ ರಸ್ತೆ ಗುಂಡಿ ಮುಚ್ಚಲು ಹೋಗಿ ದೊಡ್ಡ ಎಡವಟ್ಟು ಮಾಡಿದ್ದಾರೆ. ಕಳೆದ ಹಲವಾರು ದಿನದಿಂದ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದ ಹಾಟ್ ಬಿಟುಮಿನ್ ಮಿಕ್ಸ್ ಪ್ಲಾನ್ ಕೆಲಸ ಮಾಡುತ್ತಿಲ್ಲ. ಇದರಿಂದ ಗುಂಡಿ ಮುಚ್ಚುವುದಕ್ಕೆ ಸಾಧ್ಯವಾಗುತ್ತಿಲ್ಲ. ಸಿಮೆಂಟ್ ಹಾಗೂ ಕೋಲ್ಡ್ ಬಿಟುಮಿನ್ ಮಿಕ್ಸ್ ಬಳಸಿ ರಸ್ತೆ ಗುಂಡಿ ಮುಚ್ಚುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ಆದರೆ, ಆ ಕೆಲಸವೂ ಆಗುತ್ತಿಲ್ಲ. ಈ ನಡುವೆ ಬಿಬಿಎಂಪಿ ಅಧಿಕಾರಿಗಳು ಸಿಟಿ ಮಾರ್ಕೆಟ್, ಸಿರ್ಸಿ ಸರ್ಕಲ್‌ನ ಮೈಸೂರು ರೋಡ್‌ನಲ್ಲಿ ಕಟ್ಟಡಗಳ ಅವಶೇಷ ಸುರಿದು ಗುಂಡಿ ಮುಚ್ಚಿದ್ದಾರೆ. ವಿಚಿತ್ರವೆಂದರೇ ಗುಂಡಿ ಮುಚ್ಚಲು ಅಗತ್ಯವಿರುವುದಕ್ಕಿಂತ ಹೆಚ್ಚು ಕಟ್ಟಡದ ಅವಶೇಷವನ್ನು ಸ್ಥಳದಲ್ಲಿ ಸುರಿಯಲಾಗಿದೆ. ಇದರಿಂದ ಸಂಚಾರ ದಟ್ಟಣೆಗೆ ಉಂಟಾಗುತ್ತಿದೆ. ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ 7 ಕಡೆ ಕಟ್ಟಡ ಅವಶೇಷ ಸುರಿದ ಬಿಬಿಎಂಪಿ ಅಧಿಕಾರಿಗಳು, ರಸ್ತೆ ಗುಂಡಿ ಮುಚ್ಚುವ ತೇಪೆ ಕೆಲಸ ಮಾಡಿದ್ದಾರೆ. ಮತ್ತೆ ಮತ್ತೊಂದು ಮಳೆ ಬಂದರೆ ಕಟ್ಟಡದ ಅವಶೇಷ ಹೊರ ಬಂದು ಮತ್ತೊಂದು ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ, ಪಾಲಿಕೆ ಅಧಿಕಾರಿಗೆ ವಾಹನ ಸವಾರರು ಮತ್ತು ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ.
ವೈಜ್ಞಾನಿಕವಾಗಿ ಗುಂಡಿ ಮುಚ್ಚುವ ವಿಧಾನ: ರಸ್ತೆ ಗುಂಡಿಯನ್ನು ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಬೇಕು. ಬಳಿಕ ಗುಂಡಿಯಲ್ಲಿ ಇರುವ ಧೂಳನ್ನು ತೆಗೆದು ಸ್ವಚ್ಛಗೊಳಿಸಬೇಕು. ನಂತರ ದ್ರವ ರೂಪದ ಡಾಂಬರನ್ನು ಹಾಕಬೇಕು. ಬಳಿಕ ಬಿಸಿ ಗಾಳಿಯ ಮೂಲಕ ಅದನ್ನು ಗಟ್ಟಿಮಾಡಬೇಕು. ಹಾಟ್ ಅಥವಾ ಕೋಲ್ಡ್ ಬಿಟುಮಿನ್ ಮಿಕ್ಸ್ ಹಾಕಿ ಗುಂಡಿ ಮುಚ್ಚಿ ರೋಲ್ ಮಾಡಬೇಕು.
ಜಿಯೋ, ಏರ್‌ಟೆಲ್ ಸೇರಿ 4 ಕಂಪನಿಗಳ ಕೇಬಲ್ ಜಪ್ತಿ
ಬೆಂಗಳೂರು; ಪಟ್ಟಾಭಿರಾಮನಗರ ವಾರ್ಡ್ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೇ ಮರ ಮತ್ತು ಕಂಬದ ಮೇಲೆ ಅನಧಿಕೃತವಾಗಿ ನೇತಾಡುವಂತೆ ಒಎಫ್‌ಸಿ ಕೇಬಲ್ ಅಳವಡಿಸಿದ ನಾಲ್ಕು ಟೆಲಿಕಾಂ ಸಂಸ್ಥೆಗಳಿಗೆ ಬಿಬಿಎಂಪಿಯು ತಲಾ .20 ಲಕ್ಷದಂತೆ .80 ಲಕ್ಷ ದಂಡ ವಿಧಿಸಿದೆ.
Karnataka Rains: ಕಲ್ಯಾಣ ಕರ್ನಾಟಕದಲ್ಲಿ ಮಳೆ: ಸಿಡಿಲಿಗೆ 2 ಬಲಿ
ಅನಧಿಕೃತವಾಗಿ ಒಎಫ್‌ಸಿ ಕೇಬಲ್ ಅಳವಡಿಸಿರುವ ಕುರಿತು ಬಿಬಿಎಂಪಿ ಜಯನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಬಂದ ದೂರು ಆಧಾರಿಸಿ ಪರಿಶೀಲಿಸಿದ ಅಧಿಕಾರಿಗಳು ಜಿಯೋ ಡಿಜಿಟಲ್ ಫೈಬರ್ ಪ್ರೈವೆಟ್ ಲಿಮಿಟೆಡ್, ಭಾರತಿ ಏರ್‌ಟೆಲ್ ಲಿಮಿಟೆಡ್, ಟೆಲಿಸೋನಿಕ್ ನೆಟ್‌ವರ್ಕ್ಸ್ ಹಾಗೂ ವಾಕ್ ಟೆಲಿಇನ್‌ಫ್ರಾ ಸಲ್ಯೂಷನ್ಸ್ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ. ಜತೆಗೆ ಈ ಸಂಸ್ಥೆಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Bengaluru Landslide; ಆರ್‌ಆರ್ ನಗರದಲ್ಲಿ ಉರುಳಿಬಿದ್ದ 20 ಟನ್ ತೂಕದ ಬಂಡೆ!
ಈ ಹಿಂದೆ ಸಲ್ಲಿಸಲಾದ ದೂರಿನ ಕುರಿತು ಮೂರು ದಿನದಲ್ಲಿ ಸಮಜಾಯಿಷಿ ನೀಡುವಂತೆ ಸಂಸ್ಥೆಗಳಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿತ್ತು. ಜತೆಗೆ ಅನಧಿಕೃತವಾಗಿ ಅಳವಡಿಕೆ ಮಾಡಿದ ಕೇಬಲ್ ತೆರವು ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಸಂಸ್ಥೆಗಳು ಕ್ರಮ ಕೈಗೊಂಡಿಲ್ಲ. ಹಾಗಾಗಿ, ಇದೀಗ ದಂಡ ವಿಧಿಸುವುದರೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.