ಮುರ್ಡೇಶ್ವರ ಬಳಿ ಕೋಟ್ಯಂತರ ರು ವೆಚ್ಚದಲ್ಲಿ ಗೋಸ್ವರ್ಗ ನಿರ್ಮಾಣ

By Kannadaprabha NewsFirst Published Feb 5, 2021, 8:23 AM IST
Highlights

ಆಧುನಿಕತೆಯ ಟಚ್‌ ನೀಡಿ ಪ್ರಸಿದ್ಧವಾದ ಮುರ್ಡೇಶ್ವರ ಬಳಿ ಗೋಸ್ವರ್ಗ, ಧ್ಯಾನಮಂದಿರ ತಲೆ ಎತ್ತಿದೆ. ಫೆ. 15ರಂದು ಇದು ಲೋಕಾರ್ಪಣೆಗೊಳ್ಳಲಿದೆ.
 

ವದರಿ :  ವಸಂತಕುಮಾರ ಕತಗಾಲ

 ಕಾರವಾರ (ಫೆ.05):  ಪೌರಾಣಿಕತೆಗೆ ಆಧುನಿಕತೆಯ ಟಚ್‌ ನೀಡಿ ಪ್ರಸಿದ್ಧವಾದ ಮುರ್ಡೇಶ್ವರ ಬಳಿ ಮತ್ತೊಂದು ಶ್ರದ್ಧೆ, ಭಕ್ತಿ, ಪ್ರವಾಸಿ ತಾಣ ಗೋಸ್ವರ್ಗ, ಧ್ಯಾನಮಂದಿರ ತಲೆ ಎತ್ತಿದೆ. ಒಬ್ಬರೇ ವ್ಯಕ್ತಿ ಯಾರಲ್ಲಿಯೂ ಕೈಯೊಡ್ಡದೆ ಕೋಟ್ಯಂತರ ರು. ವೆಚ್ಚದಲ್ಲಿ ಗೋಸ್ವರ್ಗ ನಿರ್ಮಿಸುವ ಮೂಲಕ ಬೆರಗುಗೊಳಿಸಿದ್ದಾರೆ. ಫೆ. 15ರಂದು ಇದು ಲೋಕಾರ್ಪಣೆಗೊಳ್ಳಲಿದೆ.

ಮುರ್ಡೇಶ್ವರ ಸಮೀಪದ ಬೈಲೂರು ಗ್ರಾಮದ ದೊಡ್ಡ ಬಲಸೆ ಕೃಷ್ಣಾನಂದ ಶಿವರಾಮ ಭಟ್‌ ಈ ಬೃಹತ್‌ ಯೋಜನೆಯ ರೂವಾರಿ. ಭಟ್ಕಳ ತಾಲೂಕು ಬೈಲೂರು ಗ್ರಾಮದ ನೀರಗದ್ದೆ (ಬಸ್ತಿಮಕ್ಕಿ) ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗೋಸ್ವರ್ಗ ತಲೆ ಎತ್ತಿದೆ.

ಪ್ರತಿ ತಾಲೂಕಿಗೆ 2 ಗೋಶಾಲೆ ಆರಂಭ: ಸಚಿವ ಪ್ರಭು ಚವ್ಹಾಣ

ಕೃಷ್ಣಾನಂದ ಭಟ್‌ (ಬಲಸೆ ಭಟ್ಟರೆಂದೆ ಪ್ರಸಿದ್ಧಿ) ಮುರ್ಡೇಶ್ವರ ದೇವಾಲಯದ ಉಪಾಧಿವಂತರು. ಪೌರೋಹಿತ್ಯವೇ ಜೀವನಾಧಾರ. ಜ್ಯೋತಿಷಿಯೂ ಹೌದು. ಅವರಿಗೀಗ 60ರ ಹರೆಯ. ಜೀವನವೇ ನಶ್ವರ. ನಾವು ಹೋಗುವಾಗ ಏನೂ ಕೊಂಡೊಯ್ಯುವುದಿಲ್ಲ. ಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ಕೊಡುಗೆ ನೀಡಿದ್ದು ಮಾತ್ರ ಚಿರಕಾಲ ಉಳಿಯಲಿದೆ ಎಂಬ ಭಾವನೆಯಿಂದ ಬದುಕಿನಲ್ಲಿ ಗಳಿಸಿದ್ದೆಲ್ಲವನ್ನೂ ಗೋಸ್ವರ್ಗಕ್ಕೆ ಧಾರೆ ಎರೆದಿದ್ದಾರೆ. ಯಾರಲ್ಲಿಯೂ ಕೈಯೊಡ್ಡಿಲ್ಲ. ಸಾಲವನ್ನೂ ಮಾಡಿಲ್ಲ. ಮನೆಯಲ್ಲಿ ಇರುವ ಬಂಗಾರವನ್ನೆಲ್ಲ ಅಡವಿಟ್ಟು ಹಣ ತಂದಿದ್ದಾರೆ.

ಏನೆಲ್ಲ ಇದೆ?:  ಒಟ್ಟೂ70 ಗುಂಟೆ ಸ್ಥಳದಲ್ಲಿ ಧ್ಯಾನಮಂದಿರ ಹಾಗೂ ಗೋಸ್ವರ್ಗ ನಿರ್ಮಾಣಗೊಂಡಿದೆ. ಆಚಾರ್ಯಭವನ (ಧ್ಯಾನಮಂದಿರ)ದಲ್ಲಿ ಪ್ರವೇಶಿಸುತ್ತಿದ್ದಂತೆ ಶಂಕರಾಚಾರ್ಯರ ಆಕರ್ಷಕ ಮೂರ್ತಿ ಕಣ್ಣಿಗೆ ಬೀಳುತ್ತದೆ. ಒಂದು ದಿಕ್ಕಿನಲ್ಲಿ ರಾಘವೇಶ್ವರ ಶ್ರೀಗಳು, ಇನ್ನೊಂದು ದಿಕ್ಕಿನಲ್ಲಿ ರಾಘವೇಂದ್ರ ಭಾರತೀ ಶ್ರೀಗಳು, ಮತ್ತೊಂದು ದಿಕ್ಕಿನಲ್ಲಿ ರಾಮಚಂದ್ರ ಭಾರತಿ ಶ್ರೀಗಳು, ಮಗದೊಂದು ದಿಕ್ಕಿನಲ್ಲಿ ಹಿಂದಿನ ರಾಘವೇಶ್ವರ ಭಾರತಿ ಶ್ರೀಗಳ ಶಿಲ್ಪ ಇದೆ. ಶಂಕರಾಚಾರ್ಯರು ಬರೆದ ಭಜಗೋವಿಂದಂನ 31 ಶ್ಲೋಕಗಳನ್ನು ನಾಲ್ಕು ದಿಕ್ಕುಗಳಲ್ಲೂ ಬರೆಯಲಾಗಿದೆ.

ಈ ಬೃಹತ್‌ ಕಟ್ಟಡದ ಸುತ್ತಮುತ್ತ ಗೋವುಗಳ ನೆಲೆ. ದೇಸಿ ತಳಿಯ ಗೋವುಗಳ ಫೋಟೋಗಳನ್ನು ಅವುಗಳ ತಳಿಯ ಹೆಸರಿನೊಂದಿಗೆ ಅನಾವರಣ ಮಾಡಲಾಗಿದೆ. ಗೋವುಗಳಿಗೆ ಬಿಸಿಲಿನಿಂದ ರಕ್ಷಣೆ, ದಿನವಿಡಿ ನೀರು, ಮೇವಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸದ್ಯಕ್ಕೆ ಮಲೆನಾಡು ಗಿಡ್ಡ ತಳಿಯ ನೂರಕ್ಕೂ ಹೆಚ್ಚು ಗೋವುಗಳು ಇಲ್ಲಿರಲಿವೆ. (ಫೆ. 12ರಂದು ಗೋವುಗಳು ಬರಲಿವೆ.)

ಸಭಾಭವನ, ಶ್ರೀಗಳು ಬಂದಾಗ ತಂಗಲು ಕೊಠಡಿ, ಶೌಚಾಲಯ, ವಿಶಾಲವಾದ ಅಡುಗೆ ಮನೆ, ಹತ್ತಾರು ಕೊಠಡಿಗಳು, ಬಾಗಿಲಿನ ಕಂಬಗಳನ್ನು ಶಿಲೆಗಳಲ್ಲೇ ಮಾಡಲಾಗಿದೆ. ಗಣಪತಿ, ವಿಷ್ಣು, ಶಿವ ಮೂರ್ತಿಗಳು, ಗಂಗೆ, ಯಮುನೆ, ಗಜಲಕ್ಷ್ಮೀ ಹಾಗೂ ಕಾಮಧೇನು ಮೂರ್ತಿಗಳು ಗಮನ ಸೆಳೆಯುತ್ತವೆ.

ಇಷ್ಟಕ್ಕೂ ಶಂಕರಾಚಾರ್ಯರ ಸ್ಮರಣೆ ಹಾಗೂ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳೆ ಇದಕ್ಕೆಲ್ಲ ಪ್ರೇರಣೆ. ರಾಘವೇಶ್ವರ ಶ್ರೀಗಳೂ ಕೂಡ ಇಲ್ಲಿಗೆ ಆಗಮಿಸಿ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಬಲಸೆ ಭಟ್ಟರು ಹೇಳುತ್ತಾರೆ.

ಬಲಸೆ ಭಟ್ಟರ ಕೊಡುಗೆ ಅದ್ಭುತವಾದದ್ದು. ಸಮಾಜಕ್ಕಾಗಿ ಬಲುದೊಡ್ಡ ತ್ಯಾಗ ಮಾಡಿದ್ದಾರೆ. ಅವರೊಂದು ಮಾದರಿ ಎಂದು ಸ್ಥಳೀಯರಾದ ವಿಶ್ವನಾಥ ಭಟ್‌ ಹೇಳುತ್ತಾರೆ.

ಧ್ಯಾನಮಂದಿರ ಹಾಗೂ ಗೋಸ್ವರ್ಗ ಸಮರ್ಪಣ ಸಮಾರಂಭಕ್ಕಾಗಿ ಫೆ. 13ರಿಂದ ಧಾರ್ಮಿಕ ಸಪ್ತಾಹವನ್ನು ಏರ್ಪಡಿಸಿದ್ದಾರೆ. ರಾಘವೇಶ್ವರ ಶ್ರೀಗಳು ಫೆ. 15ರಂದು ಲೋಕಾರ್ಪಣೆ ಮಾಡಲಿದ್ದಾರೆ. ಪ್ರತಿದಿನ ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ, ಯಕ್ಷಗಾನ ಸಪ್ತಾಹ ಏರ್ಪಡಿಸಲಾಗಿದೆ.

ನಮ್ಮ ಜೀವವೇ ನಶ್ವರ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದರೆ ಮಾತ್ರ ನಾವು ಬದುಕಿದ್ದು ಸಾರ್ಥಕ. ನಿಸ್ವಾರ್ಥವಾಗಿ ಆದಾಯದ ನಿರೀಕ್ಷೆ ಇಲ್ಲದೆ, ಗೋವಿನ ರಕ್ಷಣೆಯೂ ಆಗುವುದಾದರೆ ಅದಕ್ಕಿಂದ ದೊಡ್ಡ ಭಾಗ್ಯ ಯಾವುದೂ ಇಲ್ಲ. ಇದನ್ನು ಕಟ್ಟಿದ್ದು ಮಾತ್ರ ನಾನು. ಆದರೆ ಇದು ಎಲ್ಲರಿಗೂ ಸೇರಿದ್ದು.

ಕೃಷ್ಣಾನಂದ ಶಿವರಾಮ ಭಟ್‌- ಗೋಸ್ವರ್ಗದ ನಿರ್ಮಾತೃ

click me!