ಫೆ.20ರೊಳಗೆ ಸಚಿವ ಸ್ಥಾನ ನೀಡಿ: ಸಿಎಂ ಯಡಿಯೂರಪ್ಪಗೆ ಡೆಡ್‌ಲೈನ್‌

By Kannadaprabha NewsFirst Published Feb 5, 2021, 7:44 AM IST
Highlights

ಫೆ.20ರೊಳಗೆ ಮಂತ್ರಿಗಿರಿ ನೀಡಲು ವಿಶ್ವಕರ್ಮ ಮಹಾಸಭೆ ಗಡುವು| ಬೇಡಿಕೆ ಈಡೇರಿಸದಿದ್ದರೆ ಫೆ.20ರ ನಂತರ ಬೃಹತ್‌ ಹೋರಾಟ| ಕೊರೋನಾ ಸಂಕಷ್ಟದಲ್ಲಿರುವುದರಿಂದ ಅಭಿವೃದ್ಧಿ ನಿಗಮದ 87 ಕೋಟಿ ರು. ಸಾಲಮನ್ನಾ ಜೊತೆಗೆ 300 ಕೋಟಿ ರು. ಅನುದಾನ ಮೀಡಲಿಡಬೇಕು| 

ಬೆಂಗಳೂರು(ಫೆ.05):  ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷರೂ ಆದ ವಿಧಾನ ಪರಿಷತ್‌ ಸದಸ್ಯ ಕೆ.ಪಿ.ನಂಜುಡಿ ಅವರಿಗೆ ಸಚಿವ ಸ್ಥಾನ ನೀಡುವುದು ಸೇರಿದಂತೆ ಸಮುದಾಯದ ವಿವಿಧ ಬೇಡಿಕೆ ಈಡೇರಿಸುವಂತೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆಗ್ರಹಿಸಿದೆ. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಬೆಂಗಳೂರು ಯುವ ಘಟಕದ ರಾಜ್ಯಾಧ್ಯಕ್ಷ ಶ್ರೀನಿವಾಸ ಮಳವಳ್ಳಿ ಈ ಕುರಿತು ಮಾತನಾಡಿ, ಫೆ.20ರೊಳಗೆ ನಂಜುಂಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಸಮುದಾಯದ ಮುಖಂಡರ ಸಭೆ ನಡೆಸಿ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು. ಫೆ.20ರಂದು 10 ಸಾವಿರ ಮುಖಂಡರ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ. ಈ ವೇಳೆಗೆ ನಂಜುಂಡಿ ಅವರಿಗೆ ಸಚಿವ ಸ್ಥಾನ ದೊರೆಯದಿದ್ದರೆ ಮುಂದಿನ ಹೋರಾಟ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಪ್ರಸ್ತುತ ಸಮಾಜ ಸಂಘಟನೆಗಾಗಿ ನಡೆಸುತ್ತಿರುವ ಜಿಲ್ಲಾ ಪ್ರವಾಸಗಳನ್ನು ಸರ್ಕಾರ ವಿರುದ್ಧದ ಹೋರಾಟ ಹಾಗೂ ಜಾಗೃತಿ ಕಾರ್ಯಕ್ರಮಗಳಾಗಿ ಬದಲಿಸಲಾಗುವುದು ಎಂದು ಅವರು ಹೇಳಿದರು.

ವಿಶ್ವಕರ್ಮ ಜನಾಂಗ ಅಭಿವೃದ್ಧಿ ನಿಗಮಕ್ಕೆ ನೆರವಾಗಿ: ಸರ್ಕಾರಕ್ಕೆ ಕೆ ಪಿ ನಂಜುಂಡಿ ಆಗ್ರಹ

ವಿಶ್ವಕರ್ಮ ಸಮಾಜಕ್ಕೆ ಶಕ್ತಿ ತುಂಬುವುದಾಗಿ ಹೇಳಿ ಪಕ್ಷಕ್ಕೆ ಕರೆತಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ನಂಜುಂಡಿ ಅವರಿಗೆ ವಿಧಾನ ಪರಿಷತ್‌ ಸದಸ್ಯ ಸ್ಥಾನ ಮಾತ್ರ ನೀಡಿದರು. ಇದು ಗೌರವಯುತ ಸ್ಥಾನವಾದರೂ ಸಮಾಜದ ಸರ್ವಾಂಗಿಣ ಅಭಿವೃದ್ಧಿಗಾಗಿ ನಂಜುಂಡಿ ಅವರಿಗೆ ಸಚಿವ ಸ್ಥಾನ ನೀಡಬೇಕು. ನಂಜುಂಡಿ ಬಿಜೆಪಿ ಸೇರ್ಪಡೆ ನಂತರ ಪಕ್ಷ ಅಧಿಕಾರಕ್ಕೆ ಬರಲು ಸಮುದಾಯದ ಪಾತ್ರವು ಇದೆ. ಆದರೂ ಸರ್ಕಾರ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರ ನೇಮಕದಲ್ಲಿ ಮುಖಂಡರ ಮನವಿ ಪರಿಗಣಿಸಿಲ್ಲ. ಸಮಾಜದ 100ಕ್ಕೂ ಅಧಿಕ ಮಠಗಳಿಗೆ ಈವರೆಗೆ ಅನುದಾನ ನೀಡದೆ ನಿರ್ಲಕ್ಷ್ಯ ತಾಳಿದೆ ಎಂದು ದೂರಿದರು.

ಕಲಬುರಗಿಯ ಏಕದಂಡಗಿಮಠದ ದೊಡ್ಡೇಂದ್ರ ಸ್ವಾಮಿ ಮಾತನಾಡಿ, ಕೊರೋನಾ ಸಂಕಷ್ಟದಲ್ಲಿರುವುದರಿಂದ ಅಭಿವೃದ್ಧಿ ನಿಗಮದ 87 ಕೋಟಿ ರು. ಸಾಲಮನ್ನಾ ಜೊತೆಗೆ 300 ಕೋಟಿ ರು. ಅನುದಾನ ಮೀಡಲಿಡಬೇಕು. ನಿಗಮದ ಅಧ್ಯಕ್ಷರನ್ನಾಗಿ ಲೋಹಿತ್‌ ಕಲ್ಲೂರ್‌ರನ್ನು ನೇಮಿಸಬೇಕು. ಮಠಗಳಿಗೆ ಆರ್ಥಿಕ ಸಹಾಯ, ಸಮುದಾಯ ವಿದ್ಯಾರ್ಥಿಗಳಿಗಾಗಿ ಪ್ರತಿ ತಾಲೂಕಿನಲ್ಲಿ ಹಾಸ್ಟೆಲ್‌ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕೋರಿದರು. ಮಹಾಸಭಾದ ಕಾನೂನು ಘಟಕ ಅಧ್ಯಕ್ಷ ಟಿ.ಕೆ ಪುರಷೋತ್ತಮ, ನಗರ ಘಟಕದ ಅಧ್ಯಕ್ಷ ಗಂಗಾಧರ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಗಣಿ ಮಂಜುನಾಥ್‌ ಮತ್ತಿತರರು ಉಪಸ್ಥಿತರಿದ್ದರು.
 

click me!