ಕೈಕಾಲು ಮುರಿವ ಯೋಜನೆ ಕೊಲೆ ವರೆಗೂ ಹೋಯ್ತು

By Kannadaprabha NewsFirst Published Sep 30, 2019, 3:23 PM IST
Highlights

ಕೈ-ಕಾಲು ಮುರಿಯುವ ಉದ್ದೇಶ ಇಟ್ಟುಕೊಂಡಿದ್ದ ಇಲ್ಲಿನ ಸಲಕಿನಕೊಪ್ಪ ಬಳಿ ನಡೆದ ಶೂಟೌಟ್‌ನ ಪ್ರಮುಖ ಆರೋಪಿ ರಾಜೇಶ್, ಇಬ್ಬರ ಮಧ್ಯೆ ವೈಷಮ್ಯ ಹೆಚ್ಚಾದ ಕಾರಣ ಕೊಲೆಯೇ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
 

 ಧಾರವಾಡ (ಸೆ.30): ರಾಜಕೀಯ ವೈಷಮ್ಯದಿಂದಾಗಿ ದಾಂಡೇಲಿಯ ಶ್ಯಾಮ ಸುಂದರ ಅವರನ್ನು ಬರೀ ಕೈ-ಕಾಲು ಮುರಿಯುವ ಉದ್ದೇಶ ಇಟ್ಟುಕೊಂಡಿದ್ದ ಇಲ್ಲಿನ ಸಲಕಿನಕೊಪ್ಪ ಬಳಿ ನಡೆದ ಶೂಟೌಟ್‌ನ ಪ್ರಮುಖ ಆರೋಪಿ ರಾಜೇಶ್, ಇಬ್ಬರ ಮಧ್ಯೆ ವೈಷಮ್ಯ ಹೆಚ್ಚಾದ ಕಾರಣ ಕೊಲೆಯೇ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  4ನೇ ಆರೋಪಿ ಉಮೇಶ್ ಎಸ್. ಎಂಬಾತನನ್ನು ಭಾನುವಾರ ಬಂಧಿಸಲಾಗಿದ್ದು, ಪ್ರಕರಣ ಕುರಿತು ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ್ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಮುಖ ಆರೋಪಿ ರಾಜೇಶ ಸೇರಿದಂತೆ ಮೂವರನ್ನು ಗ್ರಾಮೀಣ ಪೊಲೀಸರು ಎರಡು ದಿನಗಳೊಳಗೆ ಬಂಧಿಸಿದ್ದರು.  4 ನೇ ಆರೋಪಿಯನ್ನು  ಇದೀಗ ಬಂಧಿಸಲಾಗಿದ್ದು ಕೊಲೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ತಿಳಿದು ಬಂದಿದೆ. ಪ್ರಕರಣದಲ್ಲಿ ಬಳಕೆ ಮಾಡಿದ್ದ ಬೈಕ್ ವಶಕ್ಕೆ ಪಡೆದಿದ್ದು, ಕೊಲೆಗೆ ಬಳಿಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವುದು ಬಾಕಿ ಇದೆ ಎಂದು ತಿಳಿಸಿದರು.

ಶ್ಯಾಮಸುಂದರ ಮೈತಕುರಿ ಮತ್ತು ರಾಜೇಶ ಮಧ್ಯೆ ದಾಂಡೇಲಿ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಲಹ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ವ್ಯಾಟ್ಸ್‌ಆ್ಯಪ್ ಸೇರಿದಂತೆ ಇತರ ಸಾಮಾಜಿಕ ಜಾಲ ತಾಣಗಳಲ್ಲಿ ರಾಜೇಶ ಮತ್ತು ಶ್ಯಾಮಸುಂದರ ಮಧ್ಯೆ ಹಲವಾರು ಬಾರಿ ವಾಗ್ವಾದಗಳು ನಡೆದಿದ್ದವು ಎಂದ ಅವರು, ಕಳೆದ ಎರಡು ತಿಂಗಳ ಹಿಂದೆ ಕೇವಲ ಕೈಕಾಲು ಮುರಿಯುವ ಉದ್ದೇಶ ಇರಿಸಿಕೊಂಡಿದ್ದ ರಾಜೇಶ ಈ ಕುರಿತಂತೆ ಯೋಜನೆಯನ್ನೂ ರೂಪಿಸಿದ್ದನು. ಆದರೆ, ವಾಕ್ಸಮರ ಇನ್ನೂ ಹೆಚ್ಚಾಗುತ್ತಿದ್ದಂತೆ ಕೊಲೆಗೆ ಸಂಚು ರೂಪಿಸಿ ಸುಪಾರಿ ಕೊಟ್ಟು ಕೊಲೆ ಮಾಡಿರುವುದು ತಿಳಿದು ಬಂದಿದೆ ಎಂದರು.

ಸುಬ್ರಹ್ಮಣ್ಯ ಸಮರೂ, ಗೌರೀಶ ಸುಳ್ಳದ ಮತ್ತು ಎಸ್. ಉಮೇಶ ಈ ಮೂವರು ರಾಜೇಶನೊಂದಿಗೆ ಹಣಕಾಸಿನ ವ್ಯವಹಾರ ನಡೆಸಿದ್ದು, ಕೊಲೆ ಮಾಡಲು ಒಪ್ಪಿಕೊಂಡಿದ್ದರು. ಕೊಲೆಗೆ ಅವಶ್ಯವಿರುವ ಪಿಸ್ತೂಲ್ ನ್ನು ರಾಜೇಶ ಖರೀದಿಸಿ ತಂದುಕೊಟ್ಟಿದ್ದನು. ನಂತರ ಈ ಮೂವರು ಕಾರನ್ನು ಬೆನ್ನಟ್ಟಿ ಹಳ್ಳಿಗೇರಿ ಸಮೀಪ ಕೊಲೆ ಮಾಡಿ ರಾಜೇಶನಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೊಲೆ ನಡೆದು ಅರ್ಧ ಗಂಟೆಯ ಬಳಿಕ ರಾಜೇಶ ಸ್ಥಳಕ್ಕೆ ಬಂದು ಹೋಗಿದ್ದಾನೆ ಎಂದು ತಿಳಿಸಿದರು. 

ಕೊಲೆಯ ನಂತರ ಈ ಮೂವರು ಕಲಘಟಗಿಗೆ ತೆರಳಿ ಬಟ್ಟೆ ಬದಲಾಯಿಸಿದ್ದಾರೆ. ನಂತರ ಇಬ್ಬರೂ ಬೈಕ್‌ನಲ್ಲಿ ತೆರಳಿದರೆ ಮತ್ತೋರ್ವ ಬಸ್‌ನಲ್ಲಿ ಮರಳಿ ದಾಂಡೇಲಿಗೆ ತೆರಳಿದ್ದಾರೆ ಎಂದರು.

click me!