ಯಡಿಯೂರಪ್ಪ ದುರ್ಬಲ ಸಿಎಂ ಎಂದ ಸಿದ್ದರಾಮಯ್ಯ| ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರದ ಮೌನ| ಭೇಟಿಗೂ ಅವಕಾಶ ಕೊಡದ ಪ್ರಧಾನಿ ಮೋದಿ| ತಮ್ಮ ಪಕ್ಷದ ನಿಯೋಗಕ್ಕೆ ಅವರು ಹೇಗೆ ಭೇಟಿಯಾದಾರು ಎಂದು ಪ್ರಧಾನಿ ಮೋದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದು| ನೆರೆಪೀಡಿತ ಪ್ರದೇಶಗಳಲ್ಲಿ ತಿರುಗಾಡಿದರೆ ಸಾಲದು, ಅದಕ್ಕೆ ಪರಿಹಾರವೂ ಕೈಗೊಳ್ಳಬೇಕು ಎಂದರು|
ಯಾದಗಿರಿ(ಸೆ.30): ಬಿ.ಎಸ್. ಯಡಿಯೂರಪ್ಪ ಅವರು ‘ದುರ್ಬಲ ಮುಖ್ಯಮಂತ್ರಿ’ ಎಂದು ವ್ಯಂಗ್ಯವಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಹೇಳುವಷ್ಟು ಧೈರ್ಯ ಅವರಲ್ಲಿಲ್ಲ ಎಂದು ಮಾತಿನಲ್ಲೇ ಕುಟುಕಿದರು.
ಕಲಬುರಗಿಯಲ್ಲಿ ಕುರುಬ ಸಮಾಜದ ಸಮಾವೇಶದಲ್ಲಿ ಪಾಲ್ಗೊಂಡ ನಂತರ ರಾಯಚೂರಿಗೆ ತೆರಳುವ ಮಾರ್ಗ ಮಧ್ಯೆ ಭಾನುವಾರ ಸಂಜೆ ಯಾದಗಿರಿಯ ಸರ್ಕೀಟ್ ಹೌಸಿನಲ್ಲಿ ಕೆಲ ನಿಮಿಷಗಳ ಕಾಲ ತಂಗಿದ್ದ ಸಿದ್ದರಾಮಯ್ಯ, ಅಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಮೌನ ತಾಳಿದೆ. ಇದನ್ನು ಪ್ರಶ್ನಿಸಲು ಸಿಎಂ ಅವರಿಗೆ ಆಗುತ್ತಿಲ್ಲ. ನೆರೆ ವಿಚಾರದಲ್ಲಿ ಸಂಸದರೆಲ್ಲರೂ ಭೇಟಿಯಾಗಬೇಕಿತ್ತ, ಅಥವಾ ಎಲ್ಲ ಪಕ್ಷಗಳ ನಿಯೋಗವನ್ನಾದರೂ ಒಯ್ದು ರಾಜ್ಯದಲ್ಲಿನ ನೆರೆ ಪರಿಸ್ಥಿತಿ ಬಗ್ಗೆ ಪ್ರಧಾನಮಂತ್ರಿಗೆ ಮನವರಿಕೆ ಮಾಡಬೇಕಾಗಿತ್ತು ಎಂದು ರಾಜ್ಯ ಸರ್ಕಾರದ ನಿಲುವನ್ನು ಟೀಕಿಸಿದ ಅವರು, 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ ಬಿಜೆಪಿಗೆ ಪ್ರಧಾನಮಂತ್ರಿ ಜೊತೆ ಚರ್ಚಿಸಲು ಆಗುವುದಿಲ್ಲವೇ ? ಎಂದು ಪ್ರಶ್ನಿಸಿದರು.
ಈ ಹಿಂದೆ ಬೆಂಗಳೂರಿಗೆ ಪ್ರಧಾನಿ ಬಂದಿದ್ದಾಗ, ನೆರೆ ವಿಚಾರದಲ್ಲಿ ಮನವಿ ಕೊಡುವ ಬಗ್ಗೆಯೂ ತಮ್ಮ ಪಕ್ಷ ಅನುಮತಿ ಕೇಳಿತ್ತಾದರೂ, ಇದಕ್ಕೆ ಪ್ರಧಾನಿ ಸ್ಪಂದಿಸಲಿಲ್ಲ. ಹೀಗಿದ್ದಾಗ, ತಮ್ಮ ಪಕ್ಷದ ನಿಯೋಗಕ್ಕೆ ಅವರು ಹೇಗೆ ಭೇಟಿಯಾದಾರು ಎಂದು ಪ್ರಧಾನಿ ಮೋದಿಯವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.
ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬಿಎಸ್ವೈ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನೆರೆಪೀಡಿತ ಪ್ರದೇಶಗಳಲ್ಲಿ ತಿರುಗಾಡಿದರೆ ಸಾಲದು, ಅದಕ್ಕೆ ಪರಿಹಾರವೂ ಕೈಗೊಳ್ಳಬೇಕು ಎಂದರು.
ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಮುಂದಾಗಲಿ:
ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದಿಂದ ಸಂಗ್ರಹ ಮಿತಿ ಹೇರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕಾರಣಗಳನ್ನು ಹುಡುಕಿ ನಿರ್ಧಾರ ಕೈಗೊಳ್ಳಬೇಕೇ ಹೊರತು, ಸಂಗ್ರಹದ ಮಿತಿ ಹೇರಿಕೆ ಸರಿಯಲ್ಲ, ಬೆಲೆ ಕುಸಿತದಿಂದ ರೈತರು ಸಂಕಷ್ಟಅನುಭವಿಸಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಿಷ ದಸರಾಗೆ ಸಿದ್ದು ಬೆಂಬಲ:
ಮಹಿಷ ದಸರಾ ಬೆಂಬಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಮಹಿಷಾಸುರ ಪೌರಾಣಿಕ ಇತಿಹಾಸದಲ್ಲಿ ಬಂದು ಹೋಗಿದ್ದ ಪಾತ್ರ. ಈತನ ಉತ್ಸವ ಆಚರಣೆಗೆ ಬಿಜೆಪಿ ಅನಾವಶ್ಯಕ ಅಡ್ಡಿಪಡಿಸುತ್ತಿದೆ. ಬಿಜೆಪಿ ಮಹಿಷ ಉತ್ಸವಕ್ಕೆ ಅಡ್ಡಿಯಾಗುತ್ತಿದೆ ಎಂದ ಅವರು, ಸಂಸದ ಪ್ರತಾಪಸಿಂಹ ವರ್ತನೆ ಖಂಡನೀಯ, ಮಹಿಷ ದಸರಾ ಬೇಡವೆನ್ನಲು ಅವರ್ಯಾರು ಎಂದು ಪ್ರಶ್ನಿಸಿದರು.
ಬಳ್ಳಾರಿ ಜಿಲ್ಲೆ ವಿಭಜನೆ ವೈಯುಕ್ತಿಕವಾಗಿ ಮನಸ್ಸಿಲ್ಲ:
ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರವಾಗಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕವಾಗಿ ನಾನು ವಿಭಜನೆಯನ್ನು ವಿರೋಧಿಸುತ್ತೇನೆ, ಬೆಳಗಾವಿಯನ್ನೂ ನಾನು ವಿಭಜನೆ ಮಾಡಿದ್ದಿಲ್ಲ. ಬಳ್ಳಾರಿ ಜಿಲ್ಲೆ ವಿಭಜನೆ ಸರಿಯಲ್ಲ, ಈ ಬಗ್ಗೆ ಪರ ವಿರೋಧ ಚರ್ಚೆಗಳನ್ನು ಪರಿಗಣಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿ ಎಂದರು.
ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ:
ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಕ್ರಮ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆಗೆ ಸಂಸದ ರಾಹುಲ್ ಗಾಂಧಿ ಬೆಂಬಲಿಸಿದ ಕುರಿತು ಚುಟುಕಾಗಿಯೇ ಉತ್ತರಿಸಿದ ಸಿದ್ಧರಾಮಯ್ಯ, ಇದು ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಬೆಕಾಗುತ್ತದೆ ಎಂದರು. ಈ ಹಿಂದೆ ಸಿಎಂ ಆಗಿದ್ದಾಗ, ಕೇರಳ ಮುಖ್ಯಮಂತ್ರಿಯಾಗಿದ್ದ ಚಾಂಡಿ ಅವರ ನಿಯೋಗ ಬಂಡೀಪುರದಲ್ಲಿ ರಾತ್ರಿ ಸಂಚಾರ ಕೋರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿತ್ತು. ವನ್ಯಜೀವಿಗಳ ರಕ್ಷಣೆ ಹಿನ್ನೆಲೆಯಲ್ಲಿ ಅಲ್ಲಿ ಸಂಚಾರಕ್ಕೆ ನಿಷೇಧಿಸಲಾಗಿತ್ತು. ಈಗ ಕೇರಳದ ವಯನಾಡ್ ಸಂಸದ ನಿಷೇಧ ತೆರವುಗೊಳಿಸಿ ಅಲ್ಲಿನ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅ.10 ರೊಳಗೆ ಪ್ರತಿಪಕ್ಷದ ನಾಯಕ:
ಪ್ರತಿಪಕ್ಷದ ನಾಯಕ ಸ್ಥಾನ ಅಕ್ಟೋಬರ್ ಹತ್ತರೊಳಗೆ ನಿರ್ಧಾರವಾಗುತ್ತದೆ ಎಂದು ಹೇಳಿದ ಸಿದ್ಧರಾಮಯ್ಯ, ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ ಎಂದರು. ಪ್ರತಿಪಕ್ಷ ಸ್ಥಾನ 10ರೊಳಗೆ ಆಗಬೇಕು, ಅಧಿವೇಶನ ಹಿನ್ನೆಲೆಯಲ್ಲಿ ಇದನ್ನು ಮಾಡಬೇಕಾಗುತ್ತದೆ ಎಂದ ಅವರು, ಈ ಬಗ್ಗೆ ತಮ್ಮ (ಸಿದ್ಧರಾಮಯ್ಯ) ಹೆಸರು ತೇಲಿ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಅದೇನೂ ನಂಗೆ ಗೊತ್ತಿಲ್ಲ, ಹೈಕಮಾಂಡ್ ನೋಡ್ಕಳ್ತದೆ ಎಂದರು.
ಸಿಬಿಐ ಹೆದರಿಕೆ, ಅನಿಲ್ ಲಾಡ್ ಬಿಜೆಪಿಗೆ:
ಕಾಂಗ್ರೆಸ್ ಮುಖಂಡ, ಬಳ್ಳಾರಿಯ ಅನಿಲ್ ಲಾಡ್ ಬಿಜೆಪಿ ಒಲವು ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲಾಡ್‌ಗೆ ಸಿಬಿಐ ತನಿಖೆಯ ಹೆದರಿಕೆ ಇರಬೇಕು, ಅದೇ ಕಾರಣಕ್ಕೆ ಆತ ಬಿಜೆಪಿ ಸೇರ್ತಿರಬಹುದು ಎಂದು ಹೇಳಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾ ವ್ಯಕ್ತಪಡಿಸಿದ ಅವರು, ಅಧಿಕಾರದ ಆಸೆಗೆ, ಹಣದ ಆಸೆ ಮೂಡಿಸಿ ಶಾಸಕರನ್ನು ಕೊಂಡುಕೊಳ್ಳಲಾಗಿತ್ತು. ಇದಾದ ಮೇಲೆ ಬಿಎಸ್‌ವೈಸಿಎಂ ಆಗಿರೋದು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸ್ಥಾನದಲ್ಲಿ ಗೆಲ್ಲಲಿದ್ದು, ನಂತರ ಸರ್ಕಾರದ ಭವಿಷ್ಯ ತಿಳಿಯಲಿದೆ ಎಂದರು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ, ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ್ದೇನೆ ಅಷ್ಟೇ. ಈಗ ಮತ್ತೇ ಎಚ್ಡಿಕೆ ಮಾತುಗಳಿಗೆ ಹೇಳುವುದಿಲ್ಲ ಎಂದು ಅವರು ಹೇಳಿದರು.
ಕಲಬುರಗಿಯಲ್ಲಿ ನಡೆದ ಕುರುಬ ಸಮಾಜದ ಸಭೆ ಹಾಗೂ ಮತ್ತೆ ಅಹಿಂದದತ್ತ ಒಲವು ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ, ಹಾಗೇನಿಲ್ಲ, ಸಮುದಾಯದ ಜನರ ಅಭಿಮಾನ ಅಷ್ಟೇಎಂದು ಪ್ರತಿಕ್ರಿಯಿಸಿದರು. ಕಲ್ಯಾಣ ಕರ್ನಾಟ ಹೆಸರು ಬದಲಾಯಿಸಿದರೆ ಸಾಲದು, ಇಲ್ಲಿ ಅಭಿವೃದ್ಧಿ ಆಗಬೇಕು ಎಂದು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಟಾಂಗ್ ನೀಡಿದ ಸಿದ್ಧರಾಮಯ್ಯ, ತಮ್ಮ ಸರ್ಕಾರ ಈ ಭಾಗಕ್ಕೆ 371 (ಜೆ) ವಿಶೇಷ ಸ್ಥಾನಮಾನ ನೀಡಿದೆ, ಇದರಿಂದ ಅನೇಕರಿಗೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.