ಮುಂದುವರೆದ ತಿಕ್ಕಾಟ: ಬಿಜೆಪಿ, ಕಾಂಗ್ರೆಸ್‌ನಿಂದ ಕಾನೂನು ಸಮರ

By Kannadaprabha News  |  First Published May 18, 2020, 7:49 AM IST

ಅಧೀನ ಕಾರ್ಯದರ್ಶಿ ಪತ್ರವೇ ನಿಯಮಬಾಹಿರ?|ಗೆಜೆಟ್‌ ಜಾರಿಯಾದ ತಕ್ಷಣ ಕಾಯ್ದೆ ಅನುಷ್ಠಾನ| ಪಂಚಾಯತ್‌ ಕಾಯ್ದೆ ತಿದ್ದುಪಡಿ 2020ರ ಕುರಿತು ಈಗಾಗಲೇ ರಾಜ್ಯ ಸರ್ಕಾರ ಮಾರ್ಚ್‌ 30ರಂದೇ ಗೆಜೆಟ್‌ ಆದೇಶ ಹೊರಡಿಸಿದೆ| ಇಂದಿನಿಂದಲೇ ಜಾರಿ ಎನ್ನುವ ಸ್ಪಷ್ಟ ಉಲ್ಲೇಖ ಗೆಜೆಟ್‌ನಲ್ಲಿ ಇದೆ| ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಾಡುವ ಕುರಿತು ಗೆಜೆಟ್‌ನಲ್ಲಿ ಇದೆ|


ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.18): ಇಲ್ಲಿಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ವಿರುದ್ಧ ಅವಿಶ್ವಾಸ ಗೊತ್ತುವಳಿ ವಿವಾದ ಮತ್ತೆ ತಾರಕಕ್ಕೇರಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಅವರ ಪತ್ರದಿಂದ ತೆರೆ ಬಿತ್ತು ಎನ್ನುವಾಗಲೇ ಈಗ ಕಾಂಗ್ರೆಸ್‌ ಗೆಜೆಟ್‌ ಹಿಡಿದುಕೊಂಡು ಹೋರಾಟಕ್ಕೆ ಮುಂದಾಗಿದೆ. ಇದರಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಕಾನೂನು ಸಮರ ಶುರುವಾಗುವ ಎಲ್ಲ ಲಕ್ಷಣಗಳು ಕಾಣತೊಡಗಿವೆ.

Tap to resize

Latest Videos

undefined

ಪಂಚಾಯತ್‌ ಕಾಯ್ದೆ ತಿದ್ದುಪಡಿ 2020ರ ಕುರಿತು ಈಗಾಗಲೇ ರಾಜ್ಯ ಸರ್ಕಾರ ಮಾರ್ಚ್‌ 30ರಂದೇ ಗೆಜೆಟ್‌ ಆದೇಶ ಹೊರಡಿಸಿದೆ. ಅಲ್ಲದೆ ಇಂದಿನಿಂದಲೇ ಜಾರಿ ಎನ್ನುವ ಸ್ಪಷ್ಟ ಉಲ್ಲೇಖ ಗೆಜೆಟ್‌ನಲ್ಲಿ ಇದೆ. ಅಲ್ಲದೆ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಾಡುವ ಕುರಿತು ಗೆಜೆಟ್‌ನಲ್ಲಿ ಇದೆ. ಹೀಗಾಗಿ, ಈಗ ಕಾಂಗ್ರೆಸ್‌ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ನೀಡಿದ ಪತ್ರದನ್ವಯದ ಅವಿಶ್ವಾಸ ಗೊತ್ತುವಳಿಗೆ ಅವಕಾಶ ಇಲ್ಲ ಎನ್ನುವ ಪತ್ರದ ವಿರುದ್ಧ ಸಿಡಿದೆದ್ದಿದೆ.
ಪಂಚಾಯತ್‌ ಕಾಯ್ದೆ ತಿದ್ದುಪಡಿ ಗೆಜೆಟ್‌ನ್ನೇ ಅನುಷ್ಠಾನ ಮಾಡಲು ಹಿಂದೇಟು ಹಾಕುವುದು ಸರಿಯಲ್ಲ ಹಾಗೂ ಇದು ಕಾನೂನು ವಿರೋಧಿಯಾಗುತ್ತದೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಕಾಂಗ್ರೆಸ್‌ ನಾಯಕರು ಸರ್ಕಾರದ ಅಧೀನ ಕಾರ್ಯದರ್ಶಿಯನ್ನು ಖಾಸಗಿಯಾಗಿ ಭೇಟಿಯಾಗಿ ಚರ್ಚೆಯನ್ನು ನಡೆಸಿದ್ದಾರೆ.

ಕೊರೋನಾ ಮಧ್ಯೆಯೂ ರಾಜಕೀಯ: BJPಗೆ ಶಾಕ್‌ಗೆ ಕೊಟ್ಟ ಆಪರೇಷನ್‌ ಹಸ್ತ..!

ಹಾಗೊಂದು ವೇಳೆ ಅವಿಶ್ವಾಸಕ್ಕೆ ಅವಕಾಶವನ್ನೇ ನೀಡದೆ ಇದ್ದರೆ ಕಾಂಗ್ರೆಸ್‌ ಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದೆ. ಗೆಜೆಟ್‌ ಪ್ರಕಾರ ಕಾಯ್ದೆಯನ್ನು ಅನುಷ್ಠಾನ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ, ಮೊರೆಯಿಡಲಿದೆ. ಅದಕ್ಕೂ ಮೊದಲು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸುತ್ತಿದೆ.

ಜಿಪಂ ಅಧ್ಯಕ್ಷ ಸೇಫ್‌

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರು ನಾನು ಸೇಫ್‌ ಆಗಿದ್ದೇನೆ ಎಂದು ಭಾವಿಸಿದ್ದಾರೆ. ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಪತ್ರದಿಂದ ನನ್ನ ವಿರುದ್ಧ ಮಂಡನೆಯಾಗಿದ್ದ ಅವಿಶ್ವಾಸ ಗೊತ್ತುವಳಿಯೇ ಅಸಿಂಧುವಾಗಿದೆ ಎಂದು ಭಾವಿಸಿ, ಸಂಸದ ಸಂಗಣ್ಣ ಕರಡಿ ಸೇರಿದಂತೆ ಬಿಜೆಪಿ ನಾಯಕರನ್ನು ಭೇಟಿಯಾಗಿ, ಧನ್ಯವಾದ ಹೇಳಿದ್ದಾರೆ.

ಇಕ್ಕಟ್ಟಿನಲ್ಲಿ ಬಿಜೆಪಿ ಸದಸ್ಯರು

ಅವಿಶ್ವಾಸ ಮಂಡನೆಗೆ ನಾನಾ ಅಡ್ಡಿಯಾಗಿದ್ದರಿಂದ ಕಾಂಗ್ರೆಸ್‌ ತೆಕ್ಕೆಯಲ್ಲಿ ಇರುವ ಬಿಜೆಪಿ ಸದಸ್ಯರು ತೀವ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಂದೆ ಏನಾಗುತ್ತದೆಯೋ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಅವಿಶ್ವಾಸಕ್ಕೆ ಅವಕಾಶವೇ ಇಲ್ಲ ಎನ್ನುವ ಸರ್ಕಾರದ ಅಧೀನ ಕಾರ್ಯದರ್ಶಿಯ ಪತ್ರ ಬಿಜೆಪಿ ಸದಸ್ಯರನ್ನು ಚಿಂತೆಗೀಡು ಮಾಡಿದೆ. ಆದರೆ, ಕಾಗ್ರೆಸ್‌ ನಾಯಕರು ಸಂತೈಸುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ಎದೆಗುಂದುವ ಪ್ರಶ್ನೆಯೇ ಇಲ್ಲ. ಕಾನೂನು ನಮ್ಮ ಪರವಾಗಿ ಇದ್ದು, ನ್ಯಾಯಾಲಯದ ಮೊರೆ ಹೋಗೋಣ ಎಂದು ಧೈರ್ಯತುಂಬಿದ್ದಾರೆ ಎಂದು ಗೊತ್ತಾಗಿದೆ.

ನುಂಗಲಾರದ ತುತ್ತು

ಬಿಜೆಪಿಯ ಬ್ಯಾಟಿಂಗ್‌ನಿಂದ ಕಾಂಗ್ರೆಸ್‌ ವಿಲ ವಿಲ ಒದ್ದಾಡುತ್ತಿದೆ. ಸರ್ಕಾರದ ಅಧೀನ ಕಾರ್ಯದರ್ಶಿಯ ಪತ್ರದ ವಿರುದ್ಧ ಕಾನೂನು ಸಮರ ಸಾರಿದರೂ ಅದು ನಿಧಾನಗತಿಯದ್ದಾಗಿರುವುದರಿಂದ ಮುಂದೇನು ಎಂದು ಈಗಲೇ ಚಿಂತೆ ಮಾಡುತ್ತಿದೆ. ಅಲ್ಲದೆ ಜಿಪಂ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರಿಗೆ ಯಾವುದೇ ಕಾರಣಕ್ಕೂ ಸಹಕಾರ ನೀಡುವ ಪ್ರಶ್ನೆಯೇ ಇಲ್ಲ. ಅಸಹಕಾರವನ್ನು ಪ್ರಾರಂಭಿಸಿ, ಸಭೆಯಲ್ಲಿ ಒಂದೇ ಒಂದು ಫೈಲ್‌ ಪಾಸಾಗದಂತೆ ಮಾಡೋಣ ಎನ್ನುವ ತಯಾರಿಯನ್ನು ನಡೆಸಿದೆ ಎನ್ನಲಾಗಿದೆ.

ಸರ್ಕಾರ ಗೆಜೆಟ್‌ ಹೊರಡಿಸಿದ ದಿನವೇ ಅದನ್ನು ಜಾರಿ ಮಾಡಬೇಕು. ನಿಯಮ ರೂಪಿಸಿಲ್ಲ ಎಂದು ಕಾಯ್ದೆಯನ್ನು ಅನುಷ್ಠಾನ ಮಾಡದೆ ಇರಲು ಆಗುವುದಿಲ್ಲ. ಇದನ್ನು ನಾವು ಪ್ರಶ್ನೆ ಮಾಡುತ್ತೇವೆ ಮತ್ತು ಕಾನೂನು ಸಮರವನ್ನು ಸಾರುತ್ತೇವೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.

ಸರ್ಕಾರದ ಅಧೀನ ಕಾರ್ಯದರ್ಶಿಯವರೇ ಪತ್ರವನ್ನು ನೀಡಿ, ಅವಿಶ್ವಾಸಕ್ಕೆ ಈಗ ಅವಕಾಶ ಇಲ್ಲ. ನಿಯಮ ರೂಪಿಸುವ ಕಾರ್ಯಚಾಲ್ತಿಯಲ್ಲಿದೆ ಎಂದು ಹೇಳಿದ್ದರಿಂದ ಈಗ ಅದು ಮುಗಿದ ಅಧ್ಯಾಯ. ಜಿಪಂ ಅಧ್ಯಕ್ಷ ವಿಶ್ವನಾಥ ರೆಡ್ಡಿಗೆ ಅದೃಷ್ಟವಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ. 
 

click me!