ನಗರಸಭೆ ಸುಧೀರ್ಘ ನ್ಯಾಯಾಂಗ ಹೋರಾಟದ ಬಳಿಕ ಗೆಲುವು ಸಾಧಿಸಿ, ಏಕಕಾಲಕ್ಕೆ ದೊಡ್ಡ ಪ್ರಮಾಣದ ತೆರವು ಕಾರ್ಯಾಚರಣೆ ನಡೆಸಿ ಸಾವಿರಾರು ಕೋಟಿ ಬೆಲೆ ಬಾಳುವ 34 ಎಕರೆ ಆಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಹುಬ್ಬಳ್ಳಿ(ಜು.14): ಗದಗದಲ್ಲಿ ಗತವೈಭವದಲ್ಲಿ ಸಾಕಷ್ಟು ವ್ಯಾಪಾರ, ವಹಿವಾಟು ನಡೆಸಿದ್ದ ಸಾಲು ವಕಾರ ಕಾಲನ ಹೊಡೆತಕ್ಕೆ ಸಿಕ್ಕು ಅಸ್ಥಿತ್ವ ಕಳೆದುಕೊಂಡಿತ್ತು. ವಕಾರಗಳ ಸ್ಥಾನದಲ್ಲಿ ಬೃಹತ್ ಕಟ್ಟಡ, ವಾಣಿಜ್ಯ ಮಳಿಗೆ, ಮನೆ, ಅಂಗಡಿ ಇತ್ಯಾದಿ ತಲೆ ಎತ್ತಿದ್ದವು. ನಗರಸಭೆ ಸುಧೀರ್ಘ ನ್ಯಾಯಾಂಗ ಹೋರಾಟದ ಬಳಿಕ ಗೆಲುವು ಸಾಧಿಸಿ, ಏಕಕಾಲಕ್ಕೆ ದೊಡ್ಡ ಪ್ರಮಾಣದ ತೆರವು ಕಾರ್ಯಾಚರಣೆ ನಡೆಸಿ ಸಾವಿರಾರು ಕೋಟಿ ಬೆಲೆ ಬಾಳುವ 34 ಎಕರೆ ಆಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ನಗರಸಭೆ ಆಯುಕ್ತ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಒಗ್ಗಟ್ಟು ಪ್ರದರ್ಶಿಸಿ, ಸಮನ್ವಯತೆ ಸಾಧಿಸಿ ಕಟ್ಟುನಿಟ್ಟಿನ ತೆರವು ಕಾರ್ಯಾಚರಣೆ ಮಾಡುವ ಮೂಲಕ ನಗರಸಭೆಗೆ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಉಳಿಸಿಕೊಟ್ಟಿದ್ದಾರೆ.
undefined
ಬೆಳಗ್ಗೆಯೇ ಧಡಬಡ ಸದ್ದು
ವಕಾರ ಸಾಲಿನ ಭೂ ಬಾಡಿಗೆದಾರರಿಗೆ ಶನಿವಾರ ಅಕ್ಷರಶಃ ಶನಿ ಹೆಗಲ ಮೇಲೇರಿತ್ತು. ಶುಕ್ರವಾರವೇ ತೆರವು ಮಾಡುವುದಾಗಿ ಹೇಳಿದ್ದ ಜಿಲ್ಲಾಡಳಿತ ಶನಿವಾರ ಬೆಳಗ್ಗೆ 56 ಜೆಸಿಬಿ, 500ಕ್ಕೂ ಹೆಚ್ಚು ನೌಕರರು ಹಾಗೂ 300ಕ್ಕೂ ಅಧಿಕ ಪೊಲೀಸರ ಭದ್ರತೆಯಲ್ಲಿ ಯುದ್ಧಕ್ಕೆ ಸನ್ನದ್ಧವಾಗೇ ವಕಾರ ಸಾಲು ಪ್ರವೇಶಿಸಿತು. ಬೆಳಬೆಳಗ್ಗೆ 6 ಗಂಟೆಗೆ ಶಸ್ತ್ರ ಸನ್ನದ್ಧ ಜಿಲ್ಲಾಡಳಿತ ಸೈನ್ಯ ನೋಡಿದ ಭೂಬಾಡಿಗೆದಾರರು ನಮ್ಮ ಆಟ ಇಲ್ಲಿಗೆ ಮುಗಿಯಿತು, ಇನ್ನೇನು ಜಾಗ ಖಾಲಿ ಮಾಡುವುದೊಂದೇ ದಾರಿ ಎಂದು ಸ್ವತಃ ತೆರವಿಗೆ ಮುಂದಾದರು
ಜಿಲ್ಲೆಯ ಎಲ್ಲ 9 ಸ್ಥಳೀಯ ಸಂಸ್ಥೆಗಳ ಪೌರ ನೌಕರರು, ಸಿಬ್ಬಂದಿ 500ಕ್ಕೂ ಹೆಚ್ಚು ನೌಕರರು, 300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ, ಹೆಸ್ಕಾಂ, ಅರಣ್ಯ ಇಲಾಖೆ, ಅಗ್ನಿಶಾಮಕ ಸೇರಿದಂತೆ ವಿವಿಧ 10 ತಂಡ ಗಳು ಕಾರ್ಯಾಚರಣೆ ಧಾವಿಸಿದ್ದವು. ಒಟ್ಟು ೫೪ ವಕಾರಗಳಲ್ಲಿ ಜೆಸಿಬಿ ಕಾರ್ಯಾಚರಣೆ ಆರಂಭವಾಗಿತ್ತು. ಇದರ ಮಧ್ಯೆಯೂ ಕೆಲವರು ಅಡ್ಡಿಪಡಿಸಿದರೂ ನ್ಯಾಯಾಲಯದ ಆದೇಶವಿದ್ದು ದರಿಂದ ಅಧಿಕಾರಿಗಳ ನಿರಾಂತಕವಾಗಿ ಕಾರ್ಯಾಚರಣೆ ನಡೆಸಿದರು.
ಭೂ ಬಾಡಿಗೆದಾರರ ಹೈಡ್ರಾಮಾ:
ಭೂ ಬಾಡಿಗೆದಾರರು ರಾತ್ರಿ 11.30 ನಂತರ ಸಭೆ ಸೇರಿ ರಾತ್ರಿಯೇ ಜಿಲ್ಲಾಧಿಕಾರಿಗಳ ಮನೆಗೆ ತೆರಳುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರ ಬೆಳಗ್ಗೆ ಕಾರ್ಯಾಚರಣೆಗೆಂದು ನಗರಸಭೆ ಆವರಣದಿಂದ ಸಿಬ್ಬಂದಿ ತೆರಳುತ್ತಿದ್ದ ವೇಳೆಯಲ್ಲಿ ಗೇಟ್ ಮುಂಭಾಗದಲ್ಲಿ ಜಿಲ್ಲಾಧಿಕಾರಿಗಳ ಕಾರಿಗೆ ಅಡ್ಡ ಮಲಗಿ ಪ್ರತಿಭಟನೆಗೆ ಮುಂದಾದರು. ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ಒಪ್ಪದೇ ಇದ್ದಾಗ ಪೌರ ಕಾರ್ಮಿಕರು ಎತ್ತಿಕೊಂಡು ಹೋಗಿ ಬೇರೆಡೆ ಕೂಡಿಸಿ, ವಾಹನಕ್ಕೆ ದಾರಿ ಬಿಡಿಸಿ ಕಾರ್ಯಾಚರಣೆಗೆ ಅಣಿಯಾದರು.
ಟೀಂ ವರ್ಕ್:
ನ್ಯಾಯಾಲಯದ ಸೂಚನೆಯ ಮೇರೆಗೆ ನಗರಾಭಿವೃದ್ಧಿ ಇಲಾಖೆಯಿಂದ ಹೊರಡಿಸಿದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮತ್ತು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ ತೆರವು ಕಾರ್ಯಾಚರಣೆಗಾಗಿ ವಿಶೇಷ ಟೀಂ ಮಾಡಿ ಶುಕ್ರವಾರ ಸಂಜೆಯ ವೇಳೆಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಇದರಿಂದ ಭೂ ಬಾಡಿಗೆದಾರರಿಗೆ ಬೇರೆ ಮಾರ್ಗವಿಲ್ಲ ದಂತಾಯಿತು. ಎಲ್ಲ ಇಲಾಖೆಗಳನ್ನು ಒಳಗೊಂಡ ಒಂದು ಟೀಂ ಆಗಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಶತಮಾನಗಳ ಹೋರಾಟಕ್ಕೆ ಶನಿವಾರ ಮಹತ್ವಪೂರ್ಣ ಜಯ ಸಿಕ್ಕಂತಾಗಿದೆ.