ಮೂವರು ಪಕ್ಷೇತರ, ಓರ್ವ ಜೆಡಿಎಸ್‌ ಮುಖಂಡ ಬಿಜೆಪಿ ಮಡಿಲಿಗೆ

By Kannadaprabha NewsFirst Published Oct 12, 2020, 11:36 AM IST
Highlights

ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಬಿರುಸುಕೊಂಡ ಬೆನ್ನಲ್ಲೇ ಪಕ್ಷಾಂತರ ಪರ್ವವೂ ಜೋರಾಗಿದೆ. ಜೆಡಿಎಸ್ ಮುಖಂಡನೋರ್ವ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಮುಂಡರಗಿ (ಅ.12):  ಮುಂಡರಗಿ ಪುರಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ವಾರ್ಡ ನಂ. 15ರ ಸದಸ್ಯ ಜ್ಯೋತಿ ನಾಗರಾಜ ಹಾನಗಲ್, ವಾರ್ಡ ನಂ. 2ರ ಸದಸ್ಯ ಪ್ರಕಾಶ ಹುಚ್ಚಪ್ಪ ಹಲವಾಗಲಿ, ವಾರ್ಡ ನಂ. 8ರ ಶಾಂತವ್ವ ಪರುಶರಾಮ ಕರಡಿಕೊಳ್ಳ, ವಾರ್ಡ ನಂ. 3ರ ಜೆಡಿಎಸ್‌ ಸದಸ್ಯೆ ಸುಮಾ ಅಂದಪ್ಪ ಬಳ್ಳಾರಿ ಭಾನುವಾರ ಮುಂಡರಗಿಯಲ್ಲಿ ಬಿಜೆಪಿ ಅಧ್ಯಕ್ಷ ಹಾಗೂ ಮುಖಂಡರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡ ಕರಬಸಪ್ಪ ಹಂಚಿನಾಳ ಮಾತನಾಡಿ, ಇದೀಗ ಪುರಸಭೆಯಲ್ಲಿ 12 ಜನ ಬಿಜೆಪಿ ಸದಸ್ಯರಿದ್ದು, ಮೂರು ಜನ ಪಕ್ಷೇತರ ಸದಸ್ಯರು ಹಾಗೂ ಓರ್ವ ಜೆಡಿಎಸ್‌ ಸದಸ್ಯರು ಬಿಜೆಪಿ ಪಕ್ಷಕ್ಕೆ ಸೇರ್ಪೆಗೊಂಡಿದ್ದು, ಪಕ್ಷದಲ್ಲಿನ ಸದಸ್ಯರಿಗೆ ನೀಡುವಷ್ಟುಗೌರವವನ್ನು ಈ ನಾಲ್ಕು ಜನ ಸದಸ್ಯರಿಗೂ ನೀಡಲಾಗುವುದು. ಸೇರ್ಪಡೆಗೊಂಡ ಸದಸ್ಯರನ್ನು ಪಕ್ಷ ಗೌರವದಿಂದ ನೋಡಿಕೊಳ್ಳಲಿದ್ದು, ಅವರೆಲ್ಲರೂ ಪಕ್ಷದ ತತ್ವ ಸಿದ್ಧಾಂತಕ್ಕೆ ಒಪ್ಪಿ ಕಾರ್ಯನಿರ್ವಹಿಸಬೇಕು ಎಂದರು.

ಇಬ್ಬರು ಸಚಿವರ ಖಾತೆ ದಿಢೀರ್ ಬದಲು

ಪಕ್ಷೇತರ ಸದಸ್ಯರಾದ ಜೋತಿ ಹಾನಗಲ್‌ ಮಾತನಾಡಿ, ನಾವು ಮೂಲತಃ ಬಿಜೆಪಿ ಪಕ್ಷದವರೇ ಆಗಿದ್ದು, ಚುನಾವಣೆ ಸಂದರ್ಭದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೆವು. ಇದೀಗ ನಾವು ಮರಳಿ ನಮ್ಮ ಮನೆಗೆ ಬಂದಿದ್ದು, ಪಕ್ಷದ ಚೌಕಟ್ಟಿನಲ್ಲಿ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿ ಪಕ್ಷದ ಅಭಿವದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಇನ್ನೋರ್ವ ಸದಸ್ಯ ಪ್ರಕಾಶ ಹಲವಾಗಲಿ, ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದ ನಾನು ಅನಿವಾರ್ಯ ಕಾರಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸದಸ್ಯನಾಗಿರುವೆ. ಇದೀಗ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ನನ್ನ ವಾರ್ಡಿನ ಅಭಿವದ್ಧಿಗೆ ಶ್ರಮಿಸುವುದರ ಜತೆಗೆ ಪಕ್ಷಕ್ಕೆ ನಿಷ್ಟನಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು. ಪರಶುರಾಮ ಕರಡಿಕೊಳ್ಳ ಹಾಗೂ ಸುಮಾ ಬಳ್ಳಾರಿ ಹಾಗೂ ಮಹೇಶ ಲಮಾಣಿ ಮಾತನಾಡಿದರು.

ಎಪಿಎಂಸಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ ಮಾತನಾಡಿ, 4 ಜನ ಸದಸ್ಯರಿಂದ ಪಕ್ಷಕ್ಕೆ ಹೆಚ್ಚಿನ ಬಲಬಂದಿದೆ. ನಮ್ಮ 12 ಜನರ ಜತೆಗೆ ಈ ನಾಲ್ಕು ಜನಕ್ಕೂ ಗೌರವ ಹಾಗೂ ಸಹಕಾರ ಮತ್ತು ಸೌಲಭ್ಯಗಳನ್ನು ನೀಡಲಾಗುವುದು ಎಂದರು.

ಮುಂಡರಗಿ ಮಂಡಳದ ಬಿಜೆಪಿ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಅಧ್ಯಕ್ಷತೆವಹಿಸಿ ಮಾತನಾಡಿ, ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಆಡಳಿತ ಮೆಚ್ಚಿ 4 ಜನ ಸದಸ್ಯರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ಮುಂಡರಗಿ ಪುರಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 12ರಿಂದ 16ಕ್ಕೆ ಏರಿಕೆಯಾದಂತಾಗಿದೆ. ಶಾಸಕರ ಹಾಗೂ ಸಂಸದ ಮತ ಸೇರಿ ಪುರಸಭೆ ಅಧ್ಯಕ್ಷರ ಆಯ್ಕೆಗೆ 18 ಜನ ಸದಸ್ಯರ ಬೆಂಬಲ ದೊರೆಯಲಿದ್ದು, ಮುಂಡರಗಿ ಪುರಸಭೆಯಲ್ಲಿ ಬಿಜೆಪಿ ಬಾವುಟ ಹಾರಲಿದೆ. ಪಕ್ಷಕ್ಕೆ ಬಂದವರನ್ನು ಪಕ್ಷ ಎಲ್ಲ ಸದಸ್ಯರಂತೆ ಗೌರವದಿಂದ ಕಾಣುತ್ತದೆ ಎಂದರು.

click me!