Bagalakote: ಸರ್ಕಾರದ ಕಬ್ಬಿನ ಬೆಲೆ ನಿಗದಿ ಕ್ರಮಕ್ಕೆ ಮುಧೋಳ ರೈತರ ಅಸಮಾಧಾನ

By Suvarna News  |  First Published Dec 6, 2022, 10:12 PM IST

ಬೆಂಗಳೂರಿನ ಕಬ್ಬು ನಿಯಂತ್ರಣ ಮಂಡಳಿಯಲ್ಲಿ ಸರ್ಕಾರದ ಕಬ್ಬಿನ ಬೆಲೆ ನಿಗದಿ ಕ್ರಮಕ್ಕೆ ಮುಧೋಳ ರೈತರ ಅಸಮಾಧಾನ. ಬೆಳಗಾವಿ ಅಧಿವೇಶನ ಕಾಯ್ದು ನೋಡುವ ತಂತ್ರಕ್ಕೆ ಮುಂದಾದ ಮುಧೋಳ ರೈತರು. ಎಥೆನಾಲ್​ ಉತ್ಪನ್ನದ ಕಾರ್ಖಾನೆಗಳಿಗೆ ಎಪ್​ಆರ್​ಪಿ ದರದ ಮೇಲೆ 50 ರೂ. ನಿಗದಿ ಮಾಡಿದ ಸರ್ಕಾರ. ಸರ್ಕಾರದ ಕ್ರಮಕ್ಕೆ ಬೇಸತ್ತ ರೈತ ಸಮೂಹ. 


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಡಿ.6): ಕಬ್ಬಿಗೆ ಬೆಂಬಲ ಬೆಲೆ ನೀಡುವ ವಿಚಾರದಲ್ಲಿ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಸರ್ಕಾರದ ಮಧ್ಯೆ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಇವುಗಳ ಮಧ್ಯೆ ನಿನ್ನೆಯಷ್ಟೇ ಸಕ್ಕರೆ ಸಚಿವ ಮುನೇನಕೊಪ್ಪ ಎಥೆನಾಲ್ ಉತ್ಪನ್ನದ ಕಾರ್ಖಾನೆಗಳಿಗೆ ಎಪ್​ಆರ್ಪಿ ದರದ ಜೊತೆ 50 ರೂ. ನೀಡುವಂತೆ ಹೇಳಿದ್ದು, ಆದ್ರೆ ಇದು ಬಾಗಲಕೋಟೆ ಜಿಲ್ಲೆಯ ಮುಧೋಳ ರೈತರಲ್ಲಿ ಮಾತ್ರ ತೃಪ್ತಿ ತಂದಿಲ್ಲ, ಈ ಮಧ್ಯೆ ಬೆಳಗಾವಿ ಅಧಿವೇಶನದವರೆಗೆ ಕಾದು ನೋಡುವ ತಂತ್ರಕ್ಕೆ ಬಾಗಲಕೋಟೆ ಜಿಲ್ಲೆಯ ಕಬ್ಬು ಬೆಳೆಗಾರರು ಮುಂದಾಗಿದ್ದು, ಹೋರಾಟದ ಮುನ್ಸೂಚನೆ ನೀಡಿದ್ದಾರೆ.  

Tap to resize

Latest Videos

undefined

ರಾಜ್ಯದಲ್ಲಿ ಕಬ್ಬು ಬೆಳೆಗಾರರು ಬೆಂಬಲ ಬೆಲೆಗಾಗಿ ಮಾಡುತ್ತಿರೋ ಹೋರಾಟ ಮುಂದುವರೆದಿದ್ದು, ಇವುಗಳ ಮಧ್ಯೆ ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಸರ್ಕಾರದ ಮಟ್ಟದಲ್ಲಿ ಕಬ್ಬು ನಿಯಂತ್ರಣ ಮಂಡಳಿ ಮೂಲಕ ಸಭೆ ನಡೆದು, ಎಥೆನಾಲ್ ಉತ್ಪನ್ನ ಮಾಡುವ ಸಕ್ಕರೆ ಕಾರ್ಖಾನೆಗಳು ಎಪ್​ಆರ್​ಪಿ ದರದ ಜೊತೆಗೆ ಟನ್​ಗೆ 50 ರೂಪಾಯಿ ನೀಡುವಂತೆ ಸಕ್ಕರೆ ಸಚಿವ ಶಂಕರ ಮುನೇನಕೊಪ್ಪ ಆದೇಶ ಮಾಡಿದ್ದು, ಆದರೆ ಈ ಆದೇಶ ಬಾಗಲಕೋಟೆ ಜಿಲ್ಲೆಯ ಕಬ್ಬು ಬೆಳೆಗಾರ ರೈತರಿಗೆ ಮಾತ್ರ ಖುಷಿ ತಂದಿಲ್ಲ. ಬದಲಾಗಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ಕಬ್ಬು ಬೆಳೆಗಾರರಿಗೆ 600 ರೂಪಾಯಿ ವರೆಗೆ ಪ್ರೋತ್ಸಾಹ ಧನ ಕೊಡುವಂತಾಗಬೇಕು ಜೊತೆಗೆ ಸಕ್ಕರೆ ಕಾರ್ಖಾನೆಗಳಿಗೆ ಆದೇಶ ಮಾಡಿ ನಿಗದಿಯಾಗುವ ಬೆಂಬಲ ಬೆಲೆಯನ್ನ ನೀಡುವಂತಾಗಬೇಕು. ಆದ್ರೆ ಈಗ ಎಪ್​ಆರ್​ಪಿ ದರದ ಜೊತೆಗೆ 50 ರೂ. ನೀಡಲು ಆದೇಶಿಸಿರುವುದು ತೃಪ್ತಿ ತಂದಿಲ್ಲ, ಇದಕ್ಕೆ ನಮ್ಮ ಮುಧೋಳ ಭಾಗದ ರೈತರ ವಿರೋಧವಿದೆ ಎಂದು ರೈತ ಮುಖಂಡ ಸುಭಾಷ ಶಿರಬೂರ ತಿಳಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಸಿಎಂ ಬೊಮ್ಮಾಯಿ ಕಬ್ಬು ಬೆಳೆಗಾರರ ಸಮಸ್ಯೆ ಚರ್ಚೆಗೆ ರೈತರ ಕರೆ             
ಇನ್ನು ಮುಧೋಳ ಕಬ್ಬು ಬೆಳೆಗಾರ ರೈತರು ಸಾಕಷ್ಟು ದಿನ ಹೋರಾಟ ಮಾಡಿದ ಬಳಿಕ ಸ್ವತಃ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರೇ ಮದ್ಯಸ್ಥಿಕೆ ವಹಿಸಿ ಸಕ್ಕರೆ ಕಾರ್ಖಾನೆಗಳಿಂದ 2850 ರೂಪಾಯಿ ಬೆಲೆ ಕೊಡಿಸುವ ಭರವಸೆ ನೀಡಿದ್ರು, ಜೊತೆಗೆ ಮುಧೋಳ ರೈತ ರೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ರು. ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಹಿಂಪಡೆದು ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಆರಂಭಗೊಂಡು ಕಬ್ಬು ನುರಿಸುವಿಕೆ ನಡೆಯುತ್ತಿದ್ದು, ಈ ಮದ್ಯೆ ಸಕ್ಕರೆ ಕಾರ್ಖಾನೆಗಳು 2850 ರೂ. ಪಾವತಿಸುವ ಬಗ್ಗೆ ರೈತರು ಕಾಯುತ್ತಿದ್ದಾರೆ.

Sugar Factory Movie:'ಶುಗರ್ ಫ್ಯಾಕ್ಟರಿ' ಸಿನಿಮಾದ ಅದ್ದೂರಿ ಆಡಿಯೋ ಲಾಂಚ್

ಈ ನಡುವೆ ಮುಖ್ಯಮಂತ್ರಿಗಳು ಸಹ ಇನ್ನೂ ಸಭೆ ಕರೆದಿಲ್ಲ, ಇದೇ ತಿಂಗಳು ಬೆಳಗಾವಿ ಅಧಿವೇಶನದಲ್ಲಿ ಸಂಪೂರ್ಣ ಕಬ್ಬಿನ ಬೆಲೆ ಬಗ್ಗೆ ಚರ್ಚೆ ಮಾಡಬೇಕು ಮತ್ತು ಕಬ್ಬು ಬೆಳೆಗಾರರ ಜೊತೆ ಸಿಎಂ ಚರ್ಚೆ ನಡೆಸಬೇಕು. ಒಂದೊಮ್ಮೆ ಇದನ್ನ ಮಾಡದೇ ಹೋದಲ್ಲಿ ಮತ್ತೇ ಹೋರಾಟ ಮಾಡುವುದು ಅನಿವಾರ್ಯವೆಂದು ಮುಧೋಳ ರೈತರಾದ ಈರಪ್ಪ ಹಂಚಿನಾಳ ಎಚ್ಚರಿಸಿದ್ದಾರೆ.

Davanagere News: ವಿದ್ಯುತ್‌ ಅವಘಡ: ಬತ್ತ,ಕಬ್ಬು ಬೆಂಕಿಗಾಹುತಿ!                            

ಒಟ್ಟಿನಲ್ಲಿ ಬೆಂಗಳೂರಿನಲ್ಲಿ ನಿನ್ನೆ ನಡೆದ ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ಕೈಗೊಂಡ ತೀರ್ಮಾನ ಬಾಗಲಕೋಟೆ ಜಿಲ್ಲೆಯ ಮುಧೋಳ ರೈತರಿಗೆ ತೃಪ್ತಿ ತಂದಿಲ್ಲ. ಇವುಗಳ ಮಧ್ಯೆ ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಮುಧೋಳ ರೈತರು ಕಾದು ನೋಡುವ ತಂತ್ರ ಅನುಸರಿಸುವಂತಾಗಿದೆ.

click me!