
ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನಿರಂತರ ಪ್ರಯತ್ನದ ಫಲವಾಗಿ ದಕ್ಷಿಣ ಕರ್ನಾಟಕ ಅಂಚೆ ವಲಯದ ಪ್ರಧಾನ ಕಚೇರಿಯನ್ನು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.
ಕೇಂದ್ರ ಸಂವಹನ ಹಾಗೂ ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು, ಅ.7 ರಂದು ಯದುವೀರ್ ಅವರಿಗೆ ಬರೆದ ಅಧಿಕೃತ ಪತ್ರದಲ್ಲಿ ಈ ಮಹತ್ವದ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.
ದಕ್ಷಿಣ ಕರ್ನಾಟಕ ಅಂಚೆ ವಲಯದ ಪ್ರಧಾನ ಕಚೇರಿಯನ್ನು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಿಸುವಂತೆ ಕೋರಿ ಯದುವೀರ್ ಅವರು ಆ.7 ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಶೀಲಿಸಿರುವ ಅಂಚೆ ಇಲಾಖೆಯು ಆಡಳಿತಾತ್ಮಕ ವ್ಯವಸ್ಥೆಯನ್ನು ಪುನರ್ ರಚಿಸುವ ಹಾಗೂ ಸುಗಮ ಮತ್ತು ಸಮತೋಲಿತ ಆಡಳಿತವನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಪ್ರಸ್ತಾವನೆಯನ್ನು ಪರಿಗಣಿಸಿದೆ.
ಮೈಸೂರಿಗೆ ಪ್ರಧಾನ ಕಚೇರಿ ಸ್ಥಳಾಂತರಿಸುವ ಪ್ರಸ್ತಾವನೆ ಸಮರ್ಥನೀಯವಾಗಿದೆ ಎಂದು ಪರಿಗಣಿಸಲಾಗಿದ್ದು, ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ಸಚಿವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಪ್ರಾದೇಶಿಕ ಕಚೇರಿಗೆ ಸೂಕ್ತ ಕಟ್ಟಡದ ವ್ಯವಸ್ಥೆ ಮಾಡಿದ ನಂತರ ಸ್ಥಳಾಂತರ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರವು ಮೈಸೂರಿನ ಆಡಳಿತಾತ್ಮಕ ಮಹತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಪ್ರಮುಖ ಸರ್ಕಾರಿ ಕಚೇರಿಗಳನ್ನು ಬೆಂಗಳೂರಿನಾಚೆಗೆ ವಿಕೇಂದ್ರೀಕರಿಸುವ ಮೂಲಕ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಪ್ರಯತ್ನಗಳಿಗೆ ಇದು ಪೂರಕವಾಗಲಿದೆ. ಹೀಗಾಗಿ, ಈ ಪ್ರಸ್ತಾವನೆಯನ್ನು ಪರಿಗಣಿಸಿ ತಾತ್ವಿಕ ಒಪ್ಪಿಗೆ ನೀಡಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳಿಗೆ ಸಂಸದ ಯದುವೀರ್ ಕೃತಜ್ಞತೆ ಸಲ್ಲಿಸಿದ್ದಾರೆ.
ಅಗತ್ಯವಿರುವ ಮುಂದಿನ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ದಕ್ಷಿಣ ಕರ್ನಾಟಕ ಅಂಚೆ ವಲಯದ ಪ್ರಧಾನ ಕಚೇರಿಯನ್ನು ಮೈಸೂರಿಗೆ ಸ್ಥಳಾಂತರಿಸುವ ಕಾರ್ಯವನ್ನು ಸಾಕಾರಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸಲು ಸಂಸದರು ಮುಂದಾಗಿದ್ದಾರೆ.
In-principle approval has been granted to shift the South Karnataka Postal Region headquarters from Bengaluru to Mysuru!
Sincere thanks to PM Shri Narendra Modi ji, Union Minister Jyotiraditya Scindia Ji and the Ministry of Communications for considering this request and strengthening local administrative efficiency.
— Yaduveer Wadiyar (@yaduveerwadiyar) October 12, 2026