KPTCL ವಿದ್ಯುತ್ ಯೋಜನೆಗೆ ಬೆಂಗಳೂರಿನಲ್ಲಿ 321 ಬೃಹತ್‌ ಮರಗಳನ್ನು ಕಡಿಯಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅನುಮತಿ

Published : Oct 13, 2026, 09:47 AM IST
GBA Approves Felling 321 Trees KPTCL Hoodi Substation

ಸಾರಾಂಶ

ಪೂರ್ವ ಬೆಂಗಳೂರಿನಲ್ಲಿ ನಿರಂತರ ವಿದ್ಯುತ್ ಪೂರೈಕೆಗಾಗಿ ಕೆಪಿಟಿಸಿಎಲ್ ಬೃಹತ್ ಭೂಗತ ಕೇಬಲ್ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಕಾಮಗಾರಿಗಾಗಿ ಹೂಡಿ ಸಬ್‌ಸ್ಟೇಷನ್ ಆವರಣದಲ್ಲಿರುವ 321 ಮರಗಳನ್ನು ಕತ್ತರಿಸಲು ಹಾಗೂ 16 ಮರಗಳನ್ನು ಸ್ಥಳಾಂತರಿಸಲು ಜಿಬಿಎ ಅನುಮೋದನೆ ನೀಡಿದೆ.

ಬೆಂಗಳೂರು (ಅ.13): ಸಿಲಿಕಾನ್ ಸಿಟಿಯ ಪೂರ್ವ ಭಾಗದಲ್ಲಿ ವಿದ್ಯುತ್ ಪ್ರಸರಣ ಜಾಲವನ್ನು ಬಲಪಡಿಸುವ ಮತ್ತು ನಿರಂತರ ವಿದ್ಯುತ್ ಸರಬರಾಜು ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಬೃಹತ್ ಮಟ್ಟದ ಮರಗಳ ತೆರವು ಕಾರ್ಯಾಚರಣೆಗೆ ಅನುಮೋದನೆ ನೀಡಿದೆ. ಪೂರ್ವ ಬೆಂಗಳೂರಿನಲ್ಲಿರುವ ಹಾಲಿ 400/220 ಕೆವಿ 'ಹೂಡಿ ಸಬ್‌ಸ್ಟೇಷನ್' (Hoodi Substation) ಆವರಣದಲ್ಲಿರುವ ಒಟ್ಟು 321 ಮರಗಳನ್ನು ಕತ್ತರಿಸಲು ಹಾಗೂ 16 ಮರಗಳನ್ನು ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು (Translocation) ಜಿಬಿಎ ಷರತ್ತುಬದ್ಧ ಗ್ರೀನ್ ಸಿಗ್ನಲ್ ನೀಡಿದೆ. ಈ ಯೋಜನೆಯ ನಡುವೆಯೂ ಆವರಣದ ಪರಿಧಿಯಲ್ಲಿರುವ (Periphery) ಕೇವಲ 3 ಪ್ರಮುಖ ಮರಗಳನ್ನು ಕತ್ತರಿಸದೆ ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.

340 ಮರಗಳ ತೆರವಿಗೆ ಕೋರಿದ್ದ ಕೆಪಿಟಿಸಿಎಲ್

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು (KPTCL) ಸಬ್‌ಸ್ಟೇಷನ್ ಆಧುನಿಕೀಕರಣ ಕಾಮಗಾರಿಗಾಗಿ ಒಟ್ಟು 340 ಮರಗಳನ್ನು ಕತ್ತರಿಸಲು ಅನುಮತಿ ಕೋರಿ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಹಾಗೂ ವೃಕ್ಷ ಅಧಿಕಾರಿಗೆ (Tree Officer) ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅಕ್ಟೋಬರ್ 7 ರಂದು ಅಧಿಕೃತ ಮೆಮೊರಾಂಡಂ ಜಾರಿಗೊಳಿಸಿ 321 ಮರಗಳ ಕಡಿತ ಹಾಗೂ 16 ಮರಗಳ ಸ್ಥಳಾಂತರಕ್ಕೆ ಅಂತಿಮ ಅನುಮೋದನೆ ನೀಡಿದ್ದಾರೆ.

ಏನಿದು ಕೆಪಿಟಿಸಿಎಲ್‌ನ ಬಿಲಿಯನ್ ಡಾಲರ್ ಪ್ರಾಜೆಕ್ಟ್?

ಬೆಂಗಳೂರು ನಗರದ '220 ಕೆವಿ ಇನ್ನರ್ ರಿಂಗ್ ಟ್ರಾನ್ಸ್‌ಮಿಷನ್ ನೆಟ್‌ವರ್ಕ್' ಅನ್ನು ಬಲಪಡಿಸುವುದು ಈ ಪ್ರಾಜೆಕ್ಟ್‌ನ ಮೂಲ ಉದ್ದೇಶವಾಗಿದೆ. ಇದಕ್ಕಾಗಿ ಕೆಪಿಟಿಸಿಎಲ್ ಎರಡು ಬೃಹತ್ ಭೂಗತ ಕೇಬಲ್ (Underground Cable) ಮಾರ್ಗಗಳನ್ನು ನಿರ್ಮಿಸಲಿದೆ: ಹೂಡಿ ಸಬ್‌ಸ್ಟೇಷನ್‌ನಿಂದ 220/66 ಕೆವಿ ಇಡಿಸಿ (EDC) ಸಬ್‌ಸ್ಟೇಷನ್‌ಗೆಬರೋಬ್ಬರಿ 13.93 ಕಿಲೋಮೀಟರ್ ಉದ್ದದ ಅತ್ಯಾಧುನಿಕ ಭೂಗತ ಕೇಬಲ್ ಮಾರ್ಗ ಹಾಗೂ ಕೋರಮಂಗಲ ಸಬ್‌ಸ್ಟೇಷನ್‌ನಿಂದ ಇಡಿಸಿ ಸಬ್‌ಸ್ಟೇಷನ್‌ಗೆ 4.683 ಕಿಲೋಮೀಟರ್ ಉದ್ದದ ಮತ್ತೊಂದು ಪ್ರಮುಖ ಭೂಗತ ಕೇಬಲ್ ಸಂಪರ್ಕ ಯೋಜನೆ ಇದಾಗಿದೆ.

ಮರಗಳ ಬಲಿಗೆ ಕೆಪಿಟಿಸಿಎಲ್ ನೀಡಿದ ಸಮರ್ಥನೆ ಏನು?

ಈ ಬೃಹತ್ ಯೋಜನೆ ಹಾಗೂ ಮರಗಳ ತೆರವು ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೆಪಿಟಿಸಿಎಲ್‌ನ ಹಿರಿಯ ಅಧಿಕಾರಿಗಳು, "ಪೂರ್ವ ಬೆಂಗಳೂರು ಸೇರಿದಂತೆ ನಗರದ ಪ್ರಮುಖ ವಾಣಿಜ್ಯ ಮತ್ತು ವಸತಿ ಪ್ರದೇಶಗಳಲ್ಲಿ ವಿದ್ಯುತ್ ಬಳಕೆ ಗರಿಷ್ಠ ಪ್ರಮಾಣಕ್ಕೆ (Peak Capacity) ತಲುಪಿದೆ. ಹಾಲಿ ಇರುವ ಪ್ರಸರಣ ಮಾರ್ಗಗಳ ಮೇಲೆ ವಿಪರೀತ ಒತ್ತಡವಿದ್ದು, ತಾಂತ್ರಿಕ ಅಡೆತಡೆಗಳು ಉಂಟಾಗುತ್ತಿವೆ. ನಗರದ ಪ್ರಮುಖ ಭಾಗಗಳಿಗೆ ಯಾವುದೇ ಅಡಚಣೆಯಿಲ್ಲದೆ, ತಡೆರಹಿತ ವಿದ್ಯುತ್ ಸರಬರಾಜು ಖಚಿತಪಡಿಸಿಕೊಳ್ಳಲು ಈ ಜಾಲವನ್ನು ಮೇಲ್ದರ್ಜೆಗೆ ಏರಿಸುವುದು ತೀರಾ ಅನಿವಾರ್ಯವಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

PREV
Read more Articles on
click me!

Recommended Stories

ಕಾರಂತ ಬಡಾವಣೆ ಸೈಟ್ ಅರ್ಜಿ ಸಲ್ಲಿಕೆಯಲ್ಲಿ ಮಹತ್ವದ ಬದಲಾವಣೆ? ಠೇವಣಿ ಮೊತ್ತ ದುಬಾರಿ!
ವಿವಿಧ ಕಾಮಗಾರಿಗಳ 80 ಫೈಲ್ಸ್ 2 ತಿಂಗಳಿನಿಂದ ಸಚಿವರ ಬಳಿಯಲ್ಲಿರೋದು ಯಾಕೆ? NR ರಮೇಶ್