ಪಂಚಮಸಾಲಿ ಸಮಾಜಕ್ಕೆ ಶೈಕ್ಷಣಿಕ, ಉದ್ಯೋಗದಲ್ಲಿ ಅನ್ಯಾಯ| ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ| ಧರಣಿ, ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎನ್ನುವುದು ಅಷ್ಟೊಂದು ಸಮಜಂಸವಲ್ಲ| ಮೀಸಲಾತಿ ನೀಡಲು ಕಾಲಾವಕಾಶ ನೀಡಬೇಕು| ಸರ್ಕಾರಕ್ಕೆ ಕಾಲಾವಕಾಶದ ಗಡುವು ನೀಡಬೇಕು: ಸಂಸದ ಕರಡಿ ಸಂಗಣ್ಣ|
ಕೊಪ್ಪಳ(ಫೆ.26): ದಿಢೀರ್ ಅಂತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಲು ಸಾಧ್ಯವಿಲ್ಲ. ಜಯಮೃತ್ಯುಂಜಯ ಸ್ವಾಮೀಜಿಗಳು ಸರ್ಕಾರಕ್ಕೆ ಕಾಲಾವಕಾಶ ಕೊಡಬೇಕು. ನಾವು ಸ್ವಾಮೀಜಿಗೆ ಅವರಿಗೆ ಪ್ರತಿಭಟನೆ ಕೈ ಬಿಡಲು ಮನವಿ ಮಾಡಿದ್ದೇವೆ. ಸಿಎಂ ಆದೇಶದಂತೆ ಸಚಿವರಾದ ಸಿ.ಸಿ. ಪಾಟೀಲ್, ನಿರಾಣಿ, ಬೊಮ್ಮಾಯಿ ಅವರು ಸ್ವಾಮೀಜಿ ಅವರನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದ್ದಾರೆ.
ಮಾ.4 ರವರೆಗೆ ಪಂಚಮಸಾಲಿ ಸಮಾಜದ ಪ್ರತಿಭಟನೆಗೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ನೀಡುವ ಬಗ್ಗೆ ಕಾನೂನಾತ್ಮಕ ಅದ್ಯಯನ ಮಾಡಬೇಕು. ಹಿಂದುಳಿದ ಆಯೋಗಕ್ಕೆ ವರದಿ ನೀಡಲು ಸಿಎಂ ಹೇಳಿದ್ದಾರೆ. ವರದಿ ಬಂದರೆ ಅದಕ್ಕೊಂದು ಬೆಲೆ ಇರುತ್ತದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ದಿಢೀರ್ ಆಗಿ ನಿರ್ಣಯ ಮಾಡುವುದು ಸರಿ ಅಲ್ಲ. ಸ್ವಲ್ಪ ಸರ್ಕಾರಕ್ಕೆ ಕಾಲಾವಕಾಶ ಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಪಂಚಮಸಾಲಿಗಳಿಗೆ ಮೀಸಲಾತಿ ಯಾಕೆ ಬೇಕು?
ಪಂಚಮಸಾಲಿ ಸಮಾಜಕ್ಕೆ ಶೈಕ್ಷಣಿಕ, ಉದ್ಯೋಗದಲ್ಲಿ ಅನ್ಯಾಯ ಆಗುತ್ತಿದೆ. ಹೀಗಾಗಿ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲಾಗಿದೆ. ಈ ಶ್ರೇಯಸ್ಸು ಸ್ವಾಮೀಜಿಗಳಿಗೆ ಸಲ್ಲುತ್ತದೆ. ರ್ಯಾಲಿ ಮಾಡಿ ಸರ್ಕಾರದ ಕಣ್ಣು ತೆರುಸುವ ಕೆಲಸ ಮಾಡಬೇಕೆಂದು ಪಾದಯಾತ್ರ ಹಮ್ಮಿಕೊಳ್ಳಲಾಗಿತ್ತು. ಅದನ್ನು ಸಕ್ಸಸ್ ಮಾಡಲಾಗಿದೆ. ಈಗ ಧರಣಿ, ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎನ್ನುವುದು ಅಷ್ಟೊಂದು ಸಮಜಂಸವಲ್ಲ. ಮೀಸಲಾತಿ ನೀಡಲು ಕಾಲಾವಕಾಶ ನೀಡಬೇಕು. ಸರ್ಕಾರಕ್ಕೆ ಕಾಲಾವಕಾಶದ ಗಡುವು ನೀಡಬೇಕು. ಆ ಅವಧಿಯೊಳಗೆ ಮಾಡದಿದ್ದರೆ ಹೋರಾಟ ಮಾಡಬೇಕು ಎಂದು ತಿಳಿಸಿದ್ದಾರೆ.
ಸ್ವಾಮೀಜಿಗಳನ್ನು ದಾರಿ ತಪ್ಪಿಸುವ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾರು ದಾರಿ ತಪ್ಪಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸ್ವಾಮೀಜಿಯವರು ಎಲ್ಲರ ಅಭಿಪ್ರಾಯ ಕೇಳಲಿ. ಆದರೆ ತಮ್ಮದೇ ಆದ ನಿರ್ಧಾರವನ್ನ ಕೈಗೊಳ್ಳಲಿ. ಆಶಾವಾದ ಇರಬೇಕು ಹೊರತು ನಿರಾಶವಾದಿಗಳಾಗಬಾರದು. ನಮಗೆ ಮೀಸಲಾತಿ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.