'ಮೋದಿ ಸರ್ಕಾರ ಕೋವಿಡ್‌ ನಿಯಂತ್ರಣದ ಜತೆಗೆ ದೇಶದ ಅಭಿವೃದ್ಧಿಗೆ ಒತ್ತು ನೀಡಿದೆ'

By Kannadaprabha News  |  First Published Jul 11, 2020, 9:20 AM IST

ಆತ್ಮ ನಿರ್ಭರದಿಂದ ದೇಶ ಪ್ರಗತಿ: ಸಂಸದ ಸಂಗಣ್ಣ ಕರಡಿ| ನನ್ನ ಆಸ್ತಿ ನಾನು ಬಹಿರಂಗ ಮಾಡುತ್ತೇನೆ, ಶಿವರಾಜ ತಂಗಡಗಿ ತಮ್ಮ ಆಸ್ತಿ ಬಹಿರಂಗ ಮಾಡಲಿ| ಕೊರೋನಾ ಬಗ್ಗೆ ಜನರು ಭೀತಿಗೊಳಗಾಗಬಾರದು. ಅದು ಭಯಪಡುವಂಥ ಕಾಯಿಲೆಯಲ್ಲ. ಹೀಗಾಗಿ ಶವಸಂಸ್ಕಾರಕ್ಕೆ ವಿರೋಧ ಮಾಡುವುದು ಸರಿಯಲ್ಲ|


ಕೊಪ್ಪಳ(ಜು.11):  ಕೋವಿಡ್‌-19 ಸಂದರ್ಭದಲ್ಲಿ ದೇಶದ ಜನರ ಹಿತ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಯೋಜನೆಯನ್ನು ಘೋಷಣೆ ಮಾಡಿದ್ದು, ಇದರಿಂದ ದೇಶ ಪ್ರಗತಿಯಲ್ಲಿ ಸಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಇದಕ್ಕಾಗಿ 20 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ. ಇದರಲ್ಲಿ ಕೃಷಿ, ರಕ್ಷಣೆ ಹಾಗೂ ಬಾಹ್ಯಾಕಾಶ ವಲಯಕ್ಕೆ ಆದ್ಯತೆ ನೀಡಿದ್ದಾರೆ. ಕೇಂದ್ರ ಸರ್ಕಾರವು ಆತ್ಮನಿರ್ಭರ ಯೋಜನೆಯ 20 ಲಕ್ಷ ಕೋಟಿಯಲ್ಲಿ ಮೊದಲ ಕಂತಿನಲ್ಲಿ 5,94,550 ಕೋಟಿ ಎಂಎಸ್‌ಎಂಇ ಸೇರಿದಂತೆ ವಿವಿಧ ವ್ಯಾಪಾರಕ್ಕೆ ಮೀಸಲಿಟ್ಟಿದ್ದಾರೆ. ಉದ್ಯಮಗಳಿಗೆ ತುರ್ತು ಕಾರ್ಯ ನಿರ್ವಹಣೆ ಬಂಡವಾಳಕ್ಕೆ 3 ಲಕ್ಷ ಕೋಟಿ, ಒತ್ತಡದಲ್ಲಿ ಇರುವ ಎಂಎಸ್‌ಎಂಇಗಳ ಸಾಲ ಯೋಜನೆಗೆ . 20 ಸಾವಿರ ಕೋಟಿ, ಕಾರ್ಮಿಕರಿಗೆ ಇಪಿಎಫ್‌ ಬೆಂಬಲಕ್ಕೆ 2,800 ಕೋಟಿ, ಎಂಜಿಐಸಿಗೆ ವಿಶೇಷ ನಗದು ಯೋಜನೆಗೆ . 30,000 ಕೋಟಿ ಮೀಸಲು ಸೇರಿದಂತೆ ಮೊದಲ ಹಂತದ ಅನುದಾನ ವಿವಿಧ ವಲಯಕ್ಕೆ ಹಂಚಿಕೆ ಮಾಡಿದೆ ಎಂದರು.

Tap to resize

Latest Videos

ಗಂಗಾವತಿ: ನವ ವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ಆರಾಧನೆ

ಇನ್ನೂ 2ನೇ ಕಂತಿನಲ್ಲಿ 3,10,000 ಕೋಟಿ ಘೋಷಣೆ ಮಾಡಲಾಗಿದ್ದು, 3,10,000 ಕೋಟಿ ಎರಡು ತಿಂಗಳ ಕಾಲ ವಲಸಿಗ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ ಪೂರೈಕೆಗೆ ಬಳಕೆ ಮಾಡಲಾಗುತ್ತಿದೆ. 3,500 ಕೋಟಿ ಮುದ್ರಾ, . 1500 ಕೋಟಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಯೋಜನೆ, ಕಿಸಾನ್‌ ಕ್ರೆಡಿಟ್‌, ನಬಾರ್ಡ್‌, ಹೌಸಿಂಗ್‌ ಸೇರಿದಂತೆ ವಿವಿಧ ವಲಯಗಳಿಗೆ ಆದತ್ಯೆ ಮೇರೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಘೋಷಣೆ ಮಾಡಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರವು ಕೋವಿಡ್‌ ಮಹಾಮಾರಿ ನಿಯಂತ್ರಣದ ಜತೆ ಜತೆಗೆ ದೇಶದ ಅಭಿವೃದ್ಧಿಗೆ ಒತ್ತು ನೀಡಲು ಆತ್ಮನಿರ್ಭರ ಯೋಜನೆಯಡಿ 20 ಲಕ್ಷ ಕೋಟಿ ಘೋಷಣೆ ಮಾಡಿದ್ದಾರೆ ಎಂದರು.

ತಂಗಡಗಿ ಆಸ್ತಿಯನ್ನು ಮೊದಲು ಬಹಿರಂಗ ಮಾಡಲಿ

ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಪದೇ ಪದೇ ಕನಕಗಿರಿ ಶಾಸಕ ಬಸವರಾಜ ದಡೆಸ್ಗೂರು ಮೇಲೆ ಆರೋಪ ಮಾಡುತ್ತಾರೆ ಮತ್ತು ನನ್ನ ಮೇಲೆಯೂ ಗುರುತರ ಆರೋಪ ಮಾಡಿದ್ದಾರೆ. ಆದರೆ, ಅವರು ತಮ್ಮ ಆಸ್ತಿಯನ್ನು ಬಹಿರಂಗ ಮಾಡಲಿ, ನಾನು ನನ್ನ ಆಸ್ತಿಯನ್ನು ಬಹಿರಂಗ ಮಾಡುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಅವರು ಸವಾಲು ಹಾಕಿದ್ದಾರೆ.

ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಗಂಗಾವತಿ ಅಮೃತ ಸಿಟಿ ಯೋಜನೆಯಡಿ ಭ್ರಷ್ಟಾಚಾರ ನಡೆದಿದೆ. ನಾನು (ಸಂಗಣ್ಣ ಕರಡಿ) ಶಾಮೀಲಾಗಿದ್ದೇನೆ ಎನ್ನುವ ರೀತಿ ಹೇಳಿಕೆ ನೀಡಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಈ ವರೆಗೂ ಭ್ರಷ್ಟಾಚಾರದ ಕಪ್ಪು ಚುಕ್ಕೆ ನನಗಿಲ್ಲ. ಅವರಿಗೆ ಅನುಮಾನವಿದ್ದರೆ 1978ರಿಂದ ಹಿಡಿದು ಈ ವರೆಗಿನ ಆಸ್ತಿಯನ್ನು ನಾನು ಬಹಿರಂಗ ಪಡಿಸಲು ಸಿದ್ಧನಿದ್ದೇನೆ. ತಂಗಡಗಿ ಅವರು ಶಾಸಕರಾಗಿದ್ದಾಗ ಗಳಿಸಿದ ಆಸ್ತಿಯೆಷ್ಟುಎನ್ನುವುದನ್ನು ಅವರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಗಂಗಾವತಿ ಅಮೃತ್‌ ಸಿಟಿ ಕುರಿತು ನನ್ನ ಅಭಿಪ್ರಾಯ ಮತ್ತು ಶಾಸಕ ಪರಣ್ಣ ಮುನವಳ್ಳಿ ಅವರ ಅಭಿಪ್ರಾಯ ಬೇರೆ ಇರಬಹುದು. ಹೀಗೆಂದ ಮಾತ್ರಕ್ಕೆ ಕಮಿಷನ್‌ ಸಿಕ್ಕಿಲ್ಲ ಎನ್ನುವ ಹೇಳಿಕೆ ತರವಲ್ಲ. ನನ್ನ ಅಭಿಪ್ರಾಯ ಹೇಳುವುದು ತಪ್ಪಾ? ಎಂದು ಕರಡಿ ಕಿಡಿಕಾರಿದರು.

ಕೋವಿಡ್‌-19 ಬಗ್ಗೆ ಜನರು ಭೀತಿಗೊಳಗಾಗಬಾರದು. ಅದು ಭಯಪಡುವಂಥ ಕಾಯಿಲೆಯಲ್ಲ. ಹೀಗಾಗಿ ಶವಸಂಸ್ಕಾರಕ್ಕೆ ವಿರೋಧ ಮಾಡುವುದು ಸರಿಯಲ್ಲ ಎಂದರು. ಮುಖಂಡರಾದ ರಾಘವೇಂದ್ರ ಪಾನಘಂಟಿ, ನವೀನ್‌ ಗುಳಗಣ್ಣವರ್‌, ಬಸಯ್ಯ ಗದಗಿನಮಠ, ಜಿಪಂ ಸದಸ್ಯ ಕೆ. ಮಹೇಶ್‌, ಗಣೇಶ್‌ ಹೊರತಟ್ನಾಳ, ಇತರರು ಉಪಸ್ಥಿತರಿದ್ದರು.
 

click me!