ಕೋಲಾರದ ಹೊರವಲಯದಲ್ಲಿರುವ ಮಂಗಗಳಿಗೆ ಸಂಸದ ಎಸ್.ಮುನಿಸ್ವಾಮಿ ಅವರು ಬಾಳೆ, ಕಲ್ಲಂಗಡಿ, ಪಪ್ಪಾಯಿ ಮುಂತಾದ ಹಣ್ಣುಗಳನ್ನು ಹಾಕಿದ್ದಾರೆ.
ಕೋಲಾರ(ಏ.07): ನಗರದ ಹೊರವಲಯದಲ್ಲಿರುವ ಮಂಗಗಳಿಗೆ ಸಂಸದ ಎಸ್.ಮುನಿಸ್ವಾಮಿ ಅವರು ಬಾಳೆ, ಕಲ್ಲಂಗಡಿ, ಪಪ್ಪಾಯಿ ಮುಂತಾದ ಹಣ್ಣುಗಳನ್ನು ಹಾಕಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿರುವುದರಿಂದ ಪ್ರವಾಸಿ ತಾಣವಾದ ಅಂತರಗಂಗೆ ಕ್ಷೇತ್ರಕ್ಕೆ ಪ್ರವಾಸಿಗರು ಆಗಮಿಸದೆ ಇರುವುದರಿಂದ ಅಂತರಗಂಗೆಯಲ್ಲಿರುವ ಮಂಗಗಳಿಗೆ ಆಹಾರವಿಲ್ಲದಂತೆ ಆಗಿದೆ.
ಈ ಹಿನ್ನೆಲೆಯಲ್ಲಿ ಕಳೆದ 15 ದಿವಸಗಳಿಂದ ಮಂಗಗಳಿಗೆ ಆಹಾರವಿಲ್ಲದೆ ಹಸಿದಿವೆ ಇದನ್ನು ಕಂಡು ಸಂಸದ ಮುನಿಸ್ವಾಮಿ ಅವರು ಮಂಗಗಳಿಗೆ ಹಣ್ಣುಗಳನ್ನು ಹಾಕಿ ಅವುಗಳ ಹಸಿವನ್ನು ತಣಿಸುವ ಕೆಲಸ ಮಾಡುತ್ತಿದ್ದಾರೆ.
ಈ ಕುರಿತು ಮಾತನಾಡಿದ ಸಂಸದ ಎಸ್.ಮುನಿಸ್ವಾಮಿ ಲಾಕ್‌ಡಾನ್ ಹಿನ್ನೆಲೆಯಲ್ಲಿ ಅಂತರಗಂಗೆಯಲ್ಲಿ ಕೋತಿಗಳು ಆಹಾರವಿಲ್ಲದೆ ಹಸಿದಿರುವುದು ಗಮನಕ್ಕೆ ಬಂದಿತು ಇದರಿಂದಾಗಿ ಹಸಿದ ಮಂಗಗಳಿಗೆ ಹಣ್ಣುಗಳನ್ನು ಹಾಕಲಾಯಿತು ಎಂದು ತಿಳಿಸಿದರು.
ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ರೈತರು ತ್ರೀವ ಸಂಕಷ್ಟಕ್ಕೆ ಸಿಲುಕಿದ್ದು ಈ ಬಿಸಿ ಸೀಬೆ ಹಣ್ಣು ಬೆಳೆಗಾರರಿಗೂ ತಗುಲಿದೆ.ಸೀಬೆ ಬೆಳೆದು ಲಾಭ ನಿರೀಕ್ಷೆಯಲ್ಲಿದ್ದ ರೈತರಿಗೆ ತೀವ್ರ ನಷ್ಟಉಂಟಾಗಿದ್ದು ತಮ್ಮ ತೋಟದಲ್ಲಿ ಬೆಳೆದಿರುವ ಸೀಬೆ ಹಣ್ಣನ್ನು ಅಂತರಗಂಗೆ ಬೆಟ್ಟದ ಪ್ರಾಣಿ ಪಕ್ಷಿಗಳಿಗೆ ಹಾಕುತ್ತಿದ್ದಾರೆ.
ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಮತ್ತೊಂದು ಬಲಿ
ಕೋಲಾರ ತಾಲೂಕಿನ ರಾಮಸಂದ್ರ ಗ್ರಾಮದಲ್ಲಿ ಶ್ರೀನಿವಾಸ್ ಎಂಬ ರೈತ ಸುಮಾರು ತಮ್ಮ 10 ಎಕರೆಯಲ್ಲಿ ಸೀಬೆಹಣ್ಣು ಬೆಳೆದಿದ್ದಾರೆ ಆದರೆ ಬೆಳೆ ಖರೀದಿಸಲು ವ್ಯಾಪಾರಸ್ಥರು ಯಾರೂ ಬಾರದ ಹಿನ್ನೆಲೆ ಬೆಳೆಯು ಪ್ರಾಣಿಪಕ್ಷಿಗಳಿಗೆ ಆಹಾರವಾಗಿ ಬಿಟ್ಟಿದೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಸುಮ್ಮನೆ ತೋಟಗಳಲ್ಲಿ ಕೊಳೆಯಬಾರದು ಎಂದು ರೈತ ಶ್ರೀನಿವಾಸ್ ಅವರು ತಮ್ಮ ತೋಟದಿಂದ ಹಣ್ಣುಗಳನ್ನು ಬಿಡಿಸಿ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ 600 ಕ್ಕೂ ಹೆಚ್ಚು ಕೋತಿಗಳು ಹಾಗೂ 50 ಕ್ಕೂ ಹೆಚ್ಚು ನವಿಲುಗಳಿಗೆ ಪ್ರತಿದಿನ ಗಿಡಗಳಿಂದ ಕಾಯಿಗಳನ್ನು ತಂದು ಹಾಕುತ್ತಿದ್ದಾರೆ.
ಗಿಡಗಳಲ್ಲಿ ಹಣ್ಣುಗಳನ್ನು ಹಾಗೇ ಬಿಟ್ಟರೆ ಕೊಳೆತು ಹೋಗುತ್ತವೆ ಅದರ ಬದಲು ಬೇಸಿಗೆಯಲ್ಲಿ ಆಹಾರವಿಲ್ಲದೇ ಪರಿತಪಿಸುತ್ತಿರುವ ಅಂತರಗಂಗೆ ಬೆಟ್ಟದ ನವಿಲು, ಕೋತಿಗಳಿಗೆ ಆಹಾರವಾದ್ರೂ ಸಿಗಲಿ ಪುಣ್ಯ ಸಿಗುತ್ತದೆ ಎಂದು ಪ್ರತಿದಿನ ಹತ್ತಾರು ಮೈಲಿ ದೂರದಿಂದ ಬಂದು ಸೀಬೆಹಣ್ಣುಗಳನ್ನು ಹಾಕಿ ಹೋಗುತ್ತಿದ್ದಾರೆ.