ಅತ್ತ 3 ಮಕ್ಕಳ ತಾಯಿ ಜೊತೆ 23ರ ಯುವಕ ಪರಾರಿ, ಇತ್ತ ತಾಯಿ-ಮಗ ಬಲಿ

By Kannadaprabha NewsFirst Published Mar 9, 2020, 9:11 AM IST
Highlights

ನಿಮ್ಮ ಮಗ ನನ್ನ ಸೊಸೆಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಗೃಹಿಣಿಯ ಸಂಬಂಧಿಕರು ಮನೆಯ ಮುಂದೆ ಗಲಾಟೆ ಮಾಡಿದ ಹಿನ್ನೆಲೆ ಮನನೊಂದು ತಾಯಿ, ಮಗ ಆತ್ಮಹತ್ಮೆ ಮಾಡಿಕೊಂಡ ಘಟನೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಚಾಮರಾಜನಗರ(ಮಾ.09): ನಿಮ್ಮ ಮಗ ನನ್ನ ಸೊಸೆಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಗೃಹಿಣಿಯ ಸಂಬಂಧಿಕರು ಮನೆಯ ಮುಂದೆ ಗಲಾಟೆ ಮಾಡಿದ ಹಿನ್ನೆಲೆ ಮನನೊಂದು ತಾಯಿ, ಮಗ ಆತ್ಮಹತ್ಮೆ ಮಾಡಿಕೊಂಡ ಘಟನೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಗ್ರಾಮದ ಮಹದೇವಮ್ಮ(42) ಮತ್ತು ಅವರ ಪುತ್ರ ಸಿದ್ದರಾಜು(26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳಾ ದಿನಾಚರಣೆಯೆಂದೇ ಡೆತ್ ನೋಟ್ ಬರೆದಿಟ್ಟು ಪ್ರಾಧ್ಯಾಪಕಿ ಆತ್ಮಹತ್ಯೆ: ಕಾರಣ ?

ಘಟನೆಯ ವಿಷಯ ತಿಳಿದು ಬೇಗೂರು ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಎಸ್‌.ಲೋಕೇಶ್‌ ಸ್ಥಳಕ್ಕೆ ಪರಿಶೀಲನೆ ನಡೆಸಿದ ಬಳಿಕ ಎರಡು ಶವಗಳನ್ನು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಈ ಸಂಬಂಧ ಗ್ರಾಮದ ಜಯಮ್ಮ, ಚಂದ್ರಮ್ಮ, ಸ್ವಾಮಿ, ಕೀರ್ತಿ ಎಂಬುವರ ವಿರುದ್ಧ ಬೇಗೂರು ಠಾಣೆಯಲ್ಲಿ ಭಾನುವಾರ ಮಧ್ಯಾಹ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಸಂಗ?:

ಗ್ರಾಮದ ಜಯಮ್ಮನ ಸೊಸೆ ಮಂಜುಳಾ ಹಾಗೂ ಮಹದೇವಮ್ಮನ ಮಗ ನಂಜುಂಡಿ ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ಈ ಸಂಬಂಧ ಸಂಧಾನ ಕೂಡ ನಡೆದಿತ್ತು ಎನ್ನಲಾಗಿದೆ. ನಂತರ ಮಂಜುಳಾ ಹಾಗೂ ನಂಜುಂಡಿ ಪ್ರೀತಿಗೆ ಮನ್ನಣೆ ಸಿಗದ ಕಾರಣ ಊರನ್ನೇ ಬಿಟ್ಟು ಹೊರ ಹೋಗಿದ್ದರು. ಈ ಸಂಬಂಧ ಶನಿವಾರ ರಾತ್ರಿ ಮಂಜುಳಾ ಸಂಬಂಧಿಕರು ಮಹದೇವಮ್ಮನ ಮನೆ ಮುಂದೆ ಗಲಾಟೆ ಮಾಡಿದ್ದರು.

ಮನೆಯ ಮುಂದೆ ಬಂದು ಗಲಾಟೆ ಮಾಡಿದರಲ್ಲ ಎಂದು ಮನನೊಂದು ಮಹದೇವಮ್ಮ ಹಾಗೂ ಆಕೆಯ ಪುತ್ರ ಸಿದ್ದರಾಜು ವಾಸವಿದ್ದ ಮನೆಯಲ್ಲಿಯೇ ನೇಣು ಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರ ಬಂಧನ:

ಬೆಳಚಲವಾಡಿ ಗ್ರಾಮದಲ್ಲಿ ಇಬ್ಬರ ಸಾವಿಗೆ ಕಾರಣರಾದ ಗ್ರಾಮದ ಜಯಮ್ಮ, ಚಂದ್ರಮ್ಮ, ಸ್ವಾಮಿ ಮತ್ತು ಕೀರ್ತಿ ಎಂಬುವರನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಕೆಲ ತಾಸಿನಲ್ಲೇ ನಾಲ್ವರು ಆರೋಪಿಗಳನ್ನು ಬೇಗೂರು ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಎಸ್‌.ಲೋಕೇಶ್‌ ಹಾಗೂ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಆಸ್ಪತ್ರೆ ಇದ್ದರೂ ಶವ ಪರೀಕ್ಷೆಗೆ ಅವಕಾಶವಿಲ್ಲ

ತಾಲೂಕಿನ ಬೇಗೂರು ಸರ್ಕಾರಿ ಆಸ್ಪತ್ರೆ(ಸಮುದಾಯ ಆರೋಗ್ಯ ಕೇಂದ್ರ) ಇದ್ದೂ ಇಲ್ಲದಂತಾಗಿದೆ! ಗ್ರಾಮದ ಬೇಗೂರಿನ ಆಸ್ಪತ್ರೆಯಲ್ಲಿ ಭಾನುವಾರದಂದು ವೈದ್ಯರು ಇರದ ಕಾರಣ ಬೆಳಚಲವಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಶವ ಪರೀಕ್ಷೆಗೆ ನಡೆಯಲಿಲ್ಲ. ಆಸ್ಪತ್ರೆಯಿದ್ದರೂ ಶವ ಪರೀಕ್ಷೆಗೆ ಅವಕಾಶವಿಲ್ಲದ ಕಾರಣ ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಶವಗಳನ್ನು ಬೇಗೂರು ಪೊಲೀಸರು ಸಾಗಿಸಬೇಕಾಯಿತು. ಈ ಸಂಬಂಧ ಜಿಲ್ಲಾಧಿಕಾರಿಗಳು ಬೇಗೂರು ಆಸ್ಪತ್ರೆಯಲ್ಲಿ ವೈದ್ಯರು ಇರುವಂತೆ ಮಾಡಬೇಕು ಎಂದು ಈ ಭಾಗದ ಜನರ ಆಗ್ರಹವಾಗಿದೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

click me!